ಬೆಂಗಳೂರು: ಕೋವಿಡ್ 19 ವೈರಸ್ ಮಹಾಮಾರಿ ವಿರುದ್ಧದ ಹೋರಾಟದ ನಡುವೆಯೇ ಕಲಬುರಗಿ ಜಿಲ್ಲಾಧಿಕಾರಿ
ಶರತ್ ಬಿ. ಯನ್ನು ವರ್ಗಾವಣೆ ಹೊರಡಿಸಿದ್ದ ಆದೇಶಕ್ಕೆ ಎರಡೇ ಗಂಟೆಗಳಲ್ಲಿ ತಡೆ ಲಭಿಸಿದೆ.
ದೇಶದಲ್ಲಿಯೇ ಮೊದಲ ಕೋವಿಡ್ ಸಾವು ಸಂಭವಿಸಿದ ನಂತರ ಕೋವಿಡ್ ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಕೆಲವೊಂದು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದರು. ಆದರೆ ಪರಿಹಾರ ಕಿಟ್ ವಿತರಣೆ ವಿಚಾರದಲ್ಲಿ ಸ್ಥಳೀಯ ಶಾಸಕರು ಜಿಲ್ಲಾಧಿಕಾರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ.
ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರ ಒತ್ತಡದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ ಶರತ್ ನಿರಾಶ್ರಿತರು ಹಾಗೂ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ನೀಡುವ ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಲು ಸ್ಥಳೀಯ ಶಾಸಕರಿಗೆ ಅವಕಾಶ ನೀಡದೆ ಅಧಿಕಾರಿಗಳ ಮೂಲಕ ಹಂಚಿಕೆ ಮಾಡಿದ್ದರು ಎನ್ನಲಾಗಿದೆ.
ಅದೇ ಕಾರಣಕ್ಕೆ ಶಾಸಕರು ಜಿಲ್ಲಾಧಿಕಾರಿಯನ್ನು ವರ್ಗಾಯಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದ್ದು, ಶಾಸಕರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದ ಸರ್ಕಾರ ಈ ಪರಿಸ್ಥಿತಿಯಲ್ಲಿ ವರ್ಗಾವಣೆ ಮಾಡಿದ್ದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರ್ಗಾವಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತಡೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.