ಚಿಕ್ಕಬಳ್ಳಾಪುರ: ನನ್ನ ಸೋಲಿಗೆ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್, ಜೆಡಿಎಸ್ ನಡೆಸಿದ ರಾಜಕೀಯ ಷಡ್ಯಂತ್ರವೇ ಕಾರಣ. ಜೆಡಿಎಸ್ ಮತಗಳು ಕಾಂಗ್ರೆಸ್‌ಗೆ ಹೋದ ಕಾರಣ ನಾನು ಸೋಲಬೇಕಾಯಿತು ಎಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಮ್ಮ ಸೋಲಿನ ಬಗ್ಗೆ ವಿಶ್ಲೇಷಿಸಿದರು.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆಗಿರುವ ಸೋಲು ಅಭಿವೃದ್ದಿಯ ಸೋಲು ಎಂದು ಸುಧಾಕರ್ ಬಣ್ಣಿಸಿದರು. ಜಿಲ್ಲೆಯಲ್ಲಿನ ಎಲ್ಲಾ ಶಾಸಕರಿಗೂ ಅಭಿವೃದ್ದಿ ವಿಚಾರದಲ್ಲಿ ನನ್ನ ಸಹಕಾರ ಇರಲಿದೆ ಎಂದರು.
ರಾಜಕಾರಣದಲ್ಲಿ ಗೆಲುವು ಶಾಶ್ವತವಲ್ಲ. ಸೋಲು ಕೂಡ ಅಂತಿಮವಲ್ಲ. ಕ್ಷೇತ್ರದಲ್ಲಿ ಅನಿರ್ವಾಯವಾಗಿ ಸೋಲನ್ನು ಎದುರಿಸಿದ್ದೇನೆ. ಜೆಡಿಎಸ್ ತನ್ನ ಸಂಪ್ರದಾಯಿಕ ಮತಗಳ ಗಳಿಕೆಯಲ್ಲಿ ವಿಫಲವಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿಸಿದ್ದರಿಂದ ನಾನು ಸೋಲು ಬೇಕಾಯಿತು.. ಚುನಾವಣೆಯಲ್ಲಿ ವೈಯಕ್ತಿಕ ನಿರ್ಧಾರ ತೆಗೆದುಕೊಂಡು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು ಆತ್ಮವಂಚನೆ ಮಾಡಿಕೊಂಡಿದ್ದಾರೆ. ಇದು ಕ್ಷಮಿಸಲಾರದ ಅಪರಾಧ, ಅವರಿಂದ ಈ ರೀತಿಯ ನಿರ್ಧಾರ ನಾನು ನಿರೀಕ್ಷೆ ಮಾಡಿರಲಿಲ್ಲ. ಸದ್ಯಕ್ಕೆ ನಾನು ಸೋಲಿನಿಂದ ಹೊರ ಬಂದಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯೋಚಿಸಿಲ್ಲ ಎಂದು ಮಾಜಿ ಸಚಿವ ಸುಧಾಕರ್ ಸ್ಪಷ್ಟಪಡಿಸಿದರು. ಬಚ್ಚೇಗೌಡರು ನನ್ನ ವಿರುದ್ದ 3 ಬಾರಿ ಸೋತಿದ್ದಕ್ಕೆ ಹುನ್ನಾರ ನಡೆಸಿ ನನ್ನ ಸೋಲಿಗೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆಂದ ಅವರು, ಜೆಡಿಎಸ್ ಪಕ್ಷ ಮುಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿಯೆ ಇರುವುದಿಲ್ಲ ಎಂದು ಸುಧಾಕರ್ ತಿಳಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿ