ಅಂಬೇಡ್ಕರ್ ಸರ್ಕಲ್: ನಗರದ ಹೃದಯಭಾಗ ಜ್ಯೋತಿಯಲ್ಲಿರುವ ಅಂಬೇಡ್ಕರ್ ಸರ್ಕಲ್ ಅನ್ನು ವಿನೂತನ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಪಾಲಿಕೆ, ಸ್ಮಾರ್ಟ್‌ಸಿಟಿ ನಿರ್ಧರಿಸಿದೆ.
ನಗರದ ವಿವಿಧ ಭಾಗಗಳಲ್ಲಿರುವ ಸರ್ಕಲ್ ಗಳಿಗೆ ಹೊಸತನಗಳನ್ನು ಪರಿಚಯಿಸಿದ ಹಿನ್ನೆಲೆಯಲ್ಲಿ ಸುದೀರ್ಘ ಇತಿ ಹಾಸ ಇರುವ ಬಹು ಮಹತ್ವದ ಅಂಬೇಡ್ಕರ್ ಸರ್ಕಲ್ ಅನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಅದರಂತೆ ಸ್ಮಾರ್ಟ್‌ಸಿಟಿ ಯೋಜನೆ ಯಲ್ಲಿ ಸುಸಜ್ಜಿತ ಸರ್ಕಲ್ ನಿರ್ಮಾಣಕ್ಕೆ ಇದೀಗ ಮಂಗಳೂರು ಪಾಲಿಕೆ ಒಲವು ವ್ಯಕ್ತಪಡಿಸಿದೆ.
ಇಲ್ಲಿ ಈ ಹಿಂದೆ ಇದ್ದ ಸರ್ಕಲ್ ಅನ್ನು ವಿವಿಧ ಕಾರಣದಿಂದ ಕಿರಿದು ಮಾಡಲಾಗಿತ್ತು. ಬಳಿಕ ಇಲ್ಲಿನ ಸರ್ಕಲ್ ಅಭಿವೃದ್ಧಿ ಪಡಿಸುವ ಕೆಲಸ ಆಗಿರಲಿಲ್ಲ. ಆದರೆ ಸದ್ಯ ನಗರದ ವಿವಿಧ ಕಡೆಗಳಲ್ಲಿನ ಸರ್ಕಲ್‌ಗಳು ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹೃದಯಭಾಗದ ಸರ್ಕಲ್ ಅನ್ನು ಕೂಡ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ. ಮೇಯರ್ ಪ್ರೇಮಾನಂದ ಶೆಟ್ಟಿ ಅವರು ‘ಸುದಿನ’ ಜತೆಗೆ ಮಾತನಾಡಿ, ಅಂಬೇಡ್ಕರ್ ಸರ್ಕಲ್ ಅಭಿವೃದ್ಧಿಪಡಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ. ಇಲ್ಲಿ ವ್ಯವಸ್ಥಿತವಾದ ಸರ್ಕಲ್ ಮಾಡುವ ಬಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಮುಖರು ಆಗ್ರಹಿಸಿದ್ದರು. ಇದರಂತೆ ಅವರ ಜತೆಗೆ ಮಾತುಕತೆ ಕೂಡ ನಡೆಸಲಾಗಿದೆ. ಸ್ಥಳ ಸಮೀಕ್ಷೆಯನ್ನು ಶೀಘ್ರ ನಡೆಸಿ ನೂತನ ಅಂಬೇಡ್ಕರ್ ಸರ್ಕಲ್‌ಗೆ ಶಿಲಾನ್ಯಾಸ ಕೂಡ ನಡೆಸಲಾಗುವುದು’ ಎಂದರು.
ಅಂಬೇಡ್ಕರ್ ಸರ್ಕಲ್; ಶೀಘ ಶಿಲಾನ್ಯಾಸ
ದೇಶಕ್ಕೆ ಸಂವಿಧಾನವನ್ನು ನೀಡಿರುವ ಡಾ| ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದಲ್ಲಿ ವಿನೂತನ ಶೈಲಿಯ ಸರ್ಕಲ್ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಅಂಬೇಡ್ಕರ್ ಸರ್ಕಲ್ ಎಂಬ ಹೆಸರಿನೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಶೀಘ್ರದಲ್ಲಿ ಇದರ ಶಿಲಾನ್ಯಾಸ ನಡೆಯಲಿದೆ.
-ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ