Advertisement

12 ಸ.ಪ.ಪೂ. ಕಾಲೇಜುಗಳಲ್ಲಿ ‘ಟಾಲ್ಪ್’ಅನುಷ್ಠಾನ 

02:40 AM Dec 04, 2018 | Karthik A |

ಉಡುಪಿ: ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್‌ಗಳಾದ ಸಿಇಟಿ, ನೀಟ್‌, ಜೆಇಇಗಳಿಗೆ ಅನುಕೂಲವಾಗುವಂತೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ದ್ವಿ.ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ ಟಾಲ್ಪ್ (ಟೆಕ್ನಾಲಜಿ ಅಸಿಸ್ಟೆಡ್‌ ಲರ್ನಿಂಗ್‌ ಪ್ರೋಗ್ರಾಮ್‌) ರಾಜ್ಯಾದ್ಯಂತ ನಡೆಯುತ್ತಿದ್ದು, ಗ್ರಾಮೀಣ ಭಾಗದ ಸರಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ.

Advertisement

ಜಿಲ್ಲೆಯ 12 ಕಾಲೇಜು
ಜಿಲ್ಲೆಯ 42 ಸ.ಪ.ಪೂ. ಕಾಲೇಜುಗಳಲ್ಲಿ 12 ಸ.ಪ.ಪೂ. ಕಾಲೇಜುಗಳಾದ ಉಡುಪಿ ತಾಲೂಕಿನ ಉಡುಪಿ (26 ವಿದ್ಯಾರ್ಥಿಗಳು), ಉಡುಪಿ ಗರ್ಲ್ಸ್‌ (51), ಹಿರಿಯಡಕ (88), ಕಾರ್ಕಳ ತಾಲೂಕಿನ ಬೈಲೂರು (42), ಬಜಗೋಳಿ (17), ಕಾರ್ಕಳ (14) ಹಾಗೂ ಕುಂದಾಪುರ ತಾಲೂಕಿನ ಶಂಕರನಾರಾಯಣ (10), ಬಿದ್ಕಲ್‌ಕಟ್ಟೆ (17), ಕೋಟೇಶ್ವರ (17), ಬೈಂದೂರು (175), ಕುಂದಾಪುರ (80), ನಾವುಂದ (42) ಹೀಗೆ ಒಟ್ಟು ಈ ಶೈಕ್ಷಣಿಕ ಸಾಲಿನಲ್ಲಿ 579 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.  

ತರಬೇತಿ ಪ್ರಕ್ರಿಯೆ
ಪ.ಪೂ. ಕಾಲೇಜುಗಳಲ್ಲಿರುವ ಜೀವಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಲ್ಲಿ ಆಸಕ್ತರನ್ನು ಆಯ್ಕೆ ಮಾಡಿಕೊಂಡು ಇಲಾಖೆ ವತಿಯಿಂದ ಅವರಿಗೆ ಬೆಂಗಳೂರಿನಲ್ಲಿ ತರಬೇತಿ ಕೊಟ್ಟು ಅವರಿಂದ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಟಾಲ್ಪ್ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಆಯಾಯ ವಿಷಯಕ್ಕೆ ಸಂಬಂಧಪಟ್ಟ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಈ ತರಬೇತಿಯನ್ನು ಆನ್‌ಲೈನ್‌ ಮೂಲಕ ತಲುಪಿಸುವುದಲ್ಲದೆ, ಸೂಕ್ತ ಮಾರ್ಗದರ್ಶನ ಮಾಡುತ್ತಾರೆ.  ಸರಕಾರಿ ಕಾಲೇಜುಗಳಲ್ಲಿ ಸಾಮಾನ್ಯ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ತರಬೇತಿ ನೀಡಲಾಗುತ್ತದೆ. ಪ್ರತೀ ಶನಿವಾರ ಕಿರು ಪರೀಕ್ಷೆ ನಡೆಸಲಾಗುತ್ತದೆ. ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಹಾಜರಾತಿ ಇದೆ.

ರಾಜ್ಯದಲ್ಲಿ 250 ಕಾಲೇಜುಗಳಲ್ಲಿ ಅನುಷ್ಠಾನ
ಈ ತರಬೇತಿಗೆ ಪೂರಕವಾಗಿ ಬೇಕಾಗುವಂತಹ ಪ್ರೊಜೆಕ್ಟರ್‌, ಲ್ಯಾಪ್‌ಟಾಪ್‌ ಅನ್ನು ಇಲಾಖೆ ಆಯ್ದ 12 ಕಾಲೇಜುಗಳಿಗೆ ಸರಬರಾಜು ಮಾಡಿದೆ. ರಜಾದಿನ ಹೊರತು ಸುಮಾರು ಒಂದೂವರೆ ಗಂಟೆ ಈ ತರಬೇತಿ ನಡೆಸಲಾಗುತ್ತಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಟಾಲ್ಪ್ ಕಾರ್ಯಕ್ರಮ ಅನುಷ್ಠಾನಗೊಳಿಸಲು 2017-18ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ವಿಜ್ಞಾನ ಉಪನ್ಯಾಸಕರಿಗೆ ತರಬೇತಿ ನೀಡಲಾಗಿತ್ತು. 2018-19ನೇ ಸಾಲಿನಲ್ಲಿ 250 ಸರಕಾರಿ ಪ.ಪೂ. ಕಾಲೇಜುಗಳ ಪಿಸಿಎಂಬಿ ವಿದ್ಯಾರ್ಥಿಗಳಿಗೆ ತರಬೇತಿ ನಡೆಯುತ್ತಿದೆ ಮತ್ತು ಉಳಿದಂತೆ 500 ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಇಂಗ್ಲಿಷ್‌, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ವಿಷಯಗಳಿಗೂ ಅನುಷ್ಠಾನಗೊಳ್ಳಲಿದೆ.

ಸಮಾನ ಶಿಕ್ಷಣಕ್ಕೆ ಪೂರಕ
ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಸರಕಾರಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಸಮಾನವಾದ ಶಿಕ್ಷಣ ದೊರಕಬೇಕೆನ್ನುವ ದೃಷ್ಟಿಯಿಂದ ಸರಕಾರದ ಈ ಯೋಜನೆ ಅನುಷ್ಠಾನಗೊಂಡಿದೆ. ರಾಜ್ಯದಲ್ಲಿ ಒಟ್ಟು  750 ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಟಾಲ್ಪ್ ಅನುಷ್ಠಾನ ಪೂರ್ಣಗೊಂಡಾಗ ಪಿಸಿಎಂಬಿ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

Advertisement

ತರಬೇತಿ ಯಶಸ್ವಿ
ಜಿಲ್ಲೆಯಲ್ಲಿ ಆಯ್ದ 12 ಕಾಲೇಜುಗಳಲ್ಲಿ ಟಾಲ್ಪ್ ಕೋಚಿಂಗ್‌ ಯಶಸ್ವಿಯಾಗಿ ನಡೆಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಈ ತರಬೇತಿ ಅತ್ಯಂತ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಪಟ್ಟಣಗಳಿಗೆ ತೆರಳಿ ದುಬಾರಿ ತರಬೇತಿ ಪಡೆಯಲು ಸಾಧ್ಯವಾಗದವರಿಗೆ ಇದು ಅನುಕೂಲವಾಗಿದೆ. ಇನ್ನಷ್ಟು ವಿದ್ಯಾರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು.
– ಸುಬ್ರಹ್ಮಣ್ಯ ಜೋಷಿ, ಡಿಡಿಪಿಯು 

— ಎಸ್‌.ಜಿ. ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next