Advertisement

Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ

07:54 PM Dec 30, 2024 | Team Udayavani |

ಉಡುಪಿ: ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಎಪಿಕೆ ಫೈಲ್‌ಗ‌ಳ ಕುರಿತು ಎಚ್ಚರಿಕೆ ವಹಿಸವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ.

Advertisement

ಹೊಸ ವರ್ಷದ ಸಂದರ್ಭ ಬಳಸಿಕೊಂಡು ಸೈಬರ್‌ ಕ್ರಿಮಿನಲ್‌ಗ‌ಳು ಸಾರ್ವಜನಿಕರ ಮೊಬೈಲ್‌ಗ‌ಳಿಗೆ ಹಾನಿಕಾರಕ ಲಿಂಕ್‌ ಮತ್ತು ಎಪಿಕೆ ಪೈಲ್‌ಗ‌ಳನ್ನು ಕಳುಹಿಸಿ ಸಾರ್ವಜನಿಕರ ಮೊಬೈಲ್‌ ಹ್ಯಾಕ್‌ ಮಾಡುವ ಸಾಧ್ಯತೆಯಿದೆ. ವಾಟ್ಸಾಪ್‌, ಮೆಸೆಜ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಮಟ್ಟದಲ್ಲಿ ಶೇರ್‌ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು.

ಅನಾಮಧೇಯ ನಂಬರಿನಿಂದ ಬರುವ ಇಂತಹ ಸಂದೇಶಗಳ ಲಿಂಕ್‌ ಒತ್ತಿದರೆ ಖಾತೆಯಿಂದ ಹಣ ಕಳೆದುಕೊಳ್ಳುವ ಸಂಭವವಿದೆ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಹೆಲ್ಮೆಟ್‌, ಸೀಟ್‌ ಬೆಲ್ಟ್ ಧರಿಸಿ
ಹೊಸ ವರ್ಷಾಚರಣೆ ಸಂದರ್ಭ ವಾಹನ ಅವಘಡ ಸಂಭವಿಸುವುದು ಹಿಂದಿನ ವರ್ಷಗಳಲ್ಲಿ ಕಂಡುಬಂದಿದೆ. ದ್ವಿಚಕ್ರ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌, ಇತರ ವಾಹನದವರು ಸೀಟ್‌ ಬೆಲ್ಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು. ಜತೆಗೆ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದಿದ್ದಾರೆ.

ರೇವ್‌ ಪಾರ್ಟಿ, ರೆಸ್ಟೋರೆಂಟ್‌, ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುವ ನಿಯಮ ಮೀರಿದ ಪಾರ್ಟಿ, ಅನೈತಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸಲು, ಅನುಚಿತ ವರ್ತನೆ, ನೈತಿಕ ಪೊಲೀಸ್‌ ಗಿರಿ ತಡೆಗೆ ವಿಶೇಷ ತಂಡ ರಚಿಸಲಾಗಿದೆ. ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ಅಲ್ಲಿ ಸಾಕಷ್ಟು ಮುಂಜಾಗರೂಕತೆ ವಹಿಸುವುದು ಅಗತ್ಯ. ಹೆಚ್ಚು ಜನ ಸೇರುವ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದಿದ್ದಾರೆ.

Advertisement

ರಾತ್ರಿ10ರ ತನಕ ಧ್ವನಿವರ್ಧಕ ಬಳಕೆಗೆ ಅವಕಾಶ
ಹೊಸ ವರ್ಷಾಚರಣೆಗೆ ಡಿ. 31ರ ರಾತ್ರಿ 12.30ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಶಬ್ದ ಮಾಲಿನ್ಯವಾಗದಂತೆ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬಹುದಾಗಿದೆ. ಅಹಿತಕರ ಘಟನೆಗಳು ನಡೆದರೆ ಸಾರ್ವಜನಿಕರು 112ಕ್ಕೆ ಕರೆ ಮಾಡಿ ಪೊಲೀಸರ ಗಮನಕ್ಕೆ ತರಬಹುದು. ಕಾನೂನು ಮೀರಿ ನಡೆದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next