Advertisement

ಜಿಂದಾಲ್‌ಗೆ ಜಮೀನು: ಇಂದು ನಿರ್ಧಾರ? ಇಂದಿನ ಸಂಪುಟ ಸಭೆಯಲ್ಲಿ ಪರಭಾರೆ ಬಗ್ಗೆ ಚರ್ಚೆ

01:15 AM May 27, 2021 | Team Udayavani |

ಬೆಂಗಳೂರು: ರಾಜ್ಯ ಸರಕಾರ ಜಿಂದಾಲ್‌ ಕಬ್ಬಿಣ ಮತ್ತು ಉಕ್ಕು ಸಂಸ್ಥೆಗೆ ರಾಜ್ಯ ಸರಕಾರ ಕಡಿಮೆ ದರದಲ್ಲಿ 3,667 ಎಕರೆ ಜಮೀನು ಮಾರಾಟ ಮಾಡಿರುವ ವಿಷಯ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಅಲ್ಲದೇ ಆನಂದ್‌ ಸಿಂಗ್‌ ಸೇರಿದಂತೆ ಕೆಲವು ಸಚಿವರು ಸರಕಾರದ ನಿರ್ಧಾರವನ್ನು ವಾಪಸ್‌ ಪಡೆಯುವಂತೆ ಸಿಎಂಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

Advertisement

ರಾಜ್ಯ ಸರಕಾರ ಜಿಂದಾಲ್‌ ಸಂಸ್ಥೆಗೆ ಕಡಿಮೆ ದರದಲ್ಲಿ ಜಮೀನು ಮಾರಾಟ ಮಾಡಿರುವುದಕ್ಕೆ ಪಕ್ಷದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ ಸೇರಿದಂತೆ ಅನೇಕ ಶಾಸಕರು ಕಡಿಮೆ ದರದಲ್ಲಿ ಜಮೀನು ಮಾರಾಟ ಮಾಡಿರುವುದರಿಂದ ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದಿದ್ದಾರೆ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್‌ಗೂ ದೂರು ಸಲ್ಲಿಸಿ, ಸರಕಾರದ ನಿರ್ಧಾರ ವಾಪಸ್‌ ಪಡೆಯಲು ಮುಖ್ಯಮಂತ್ರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಗೆ ಆಗ್ರಹ
ಜಿಂದಾಲ್‌ಗೆ ಜಮೀನು ನೀಡಿರುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಲು ಶೀರ್ಘ‌ವೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬಿಜೆಪಿ ಶಾಸಕರು ಪಕ್ಷದ ನಾಯಕರಿಗೆ ಆಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಜೂ. 7ರಂದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಹೈಕಮಾಂಡ್‌ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಎಂ ಸ್ಪಷ್ಟ ಪಡಿಸಲಿ: ಸಿ.ಟಿ. ರವಿ
ಜಿಂದಾಲ್‌ಗೆ ಕಡಿಮೆ ದರದಲ್ಲಿ ಜಮೀನು ನೀಡಿರುವ ಬಗ್ಗೆ ರಾಜ್ಯದ ಜನತೆ ಹಾಗೂ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಸಂಶಯಗಳು ಮೂಡಿವೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಉದಯವಾಣಿಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈತ್ರಿ ಸರಕಾರ ತೆಗೆದುಕೊಂಡ ತೀರ್ಮಾನದ ವಿರುದ್ಧ ನಮ್ಮ ಪಕ್ಷದ ರಾಜ್ಯಾಧ್ಯಕ್ಷರೂ ಹಾಗೂ ವಿಪಕ್ಷದ ನಾಯಕರೂ ಆಗಿದ್ದ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಹೋರಾಟ ಮಾಡಿದ್ದೆವು. ಈಗ ಯಡಿಯೂರಪ್ಪ ಅವರೇ ಜಮೀನು ನೀಡಿದ್ದಾರೆ. ಈ ಬಗ್ಗೆ ಪಕ್ಷದ ಶಾಸಕರು ಹಾಗೂ ಸಾರ್ವಜನಿಕರಲ್ಲಿ ಪ್ರಶ್ನೆಗಳು, ಸಂಶಯಗಳು ಮೂಡಿವೆ. ಅವುಗಳಿಗೆ ಉತ್ತರಿಸುವ ಹೊಣೆ ಮುಖ್ಯಮಂತ್ರಿಗಿದೆ ಎಂದು ತಿಳಿಸಿದ್ದಾರೆ.

Advertisement

ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಊಹಾ ಪೋಹದ ಸುದ್ದಿಗಳಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಾನು ಪ್ರತಿಕ್ರಿಯಿಸು ವುದಿಲ್ಲ. ಯಾರಿಗಾದರೂ ಸಮಸ್ಯೆ ಇದ್ದರೆ, ಪಕ್ಷದ ವೇದಿಕೆ ಒಳಗೆ ಚರ್ಚಿಸ ಬೇಕು. ಯಾವಾಗ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದನ್ನು ನಮ್ಮ ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ. ಯಡಿಯೂರಪ್ಪ 2 ವರ್ಷ ಅವಧಿ ಪೂರ್ಣಗೊಳಿಸುತ್ತಾರೋ ಇಲ್ಲವೊ ಎಂಬ ಪ್ರಶ್ನೆಗೆ, ಪಕ್ಷದ ಸಂಸದೀಯ ಮಂಡಳಿ ತೀರ್ಮಾನ ಮಾಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next