ಮುಂಬೈ : ದೇಶದ ಅತ್ಯಂತ ಪುರಾತನ ಹಾಗೂ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ನ ವಿಮಾನ ಮತ್ತೆ ಆಗಸದಲ್ಲಿ ರೆಕ್ಕೆ ಬಿಚ್ಚಲಿದೆ. ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್ ನ ಪುನಶ್ಚೇತನಕ್ಕೆ ಸಂಬಂಧಿಸಿ ಕಲ್‌ರೋಕ್-ಜಲನ್ ಒಕ್ಕೂಟವು ಸಲ್ಲಿಸಿರುವ ಯೋಜನೆಗೆ ಮಂಗಳವಾರ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ(ಎನ್‌ಸಿಎಲ್‌ಟಿ) ಸಮ್ಮತಿ ಸೂಚಿಸಿದ್ದು, ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ ಮೂಡಿದೆ.
ಜೆಟ್ ಏರ್‌ವೇಸ್ ಕಾರ್ಯಾಚರಣೆಗೆ ಸ್ಲಾಟ್ ಒದಗಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮಂಗಳವಾರದಿಂದ 90 ದಿನಗಳ ಕಾಲಾವಕಾಶವನ್ನೂ ನ್ಯಾಯಾಧಿಕರಣ ನೀಡಿದೆ. ಸ್ಲಾಟ್ ಒದಗಿಸುವ ಕುರಿತು ಅಂತಿಮ ತೀರ್ಮಾನವನ್ನು ಡಿಜಿಸಿಎ ಕೈಗೊಳ್ಳಲಿದೆ.
ಜೆಟ್ ಏರ್‌ವೇಸ್ ಕಂಪನಿಯು ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಕಂಪನಿಯ ವಿಮಾನಗಳು ಕಾರ್ಯಾಚರಿಸುತ್ತಿದ್ದ ಅವಧಿ(ಸ್ಲಾಟ್)ಯನ್ನು ಬೇರೆ ವೈಮಾನಿಕ ಕಂಪನಿಗಳಿಗೆ ಒದಗಿಸಲಾಗಿತ್ತು. ಈಗ ಮತ್ತೆ ಜೆಟ್ ಕಾರ್ಯಾಚರಣೆಗೆ ಅನುಮತಿ ಸಿಕ್ಕಿರುವ ಕಾರಣ, ಪ್ರಸ್ತುತ ಮಾರ್ಗಸೂಚಿಯ ಅನ್ವಯ ಸ್ಲಾಟ್ ನಿಗದಿಪಡಿಸಲಾಗುತ್ತದೆ.
ಇದನ್ನೂ ಓದಿ :ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ
ನ್ಯಾಯಾಧಿಕರಣದ ಆದೇಶದ ಪ್ರತಿ ಸಿಕ್ಕ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ, ನ್ಯಾಯಾಧಿಕರಣದ ಸಮ್ಮತಿ ದೊರೆತ ಬೆನ್ನಲ್ಲೇ ಕಂಪನಿಯ ಷೇರುಗಳು ಎನ್‌ಎಸ್‌ಇಯಲ್ಲಿ ಶೇ.5ರಷ್ಟು ಏರಿಕೆ ಕಂಡಿವೆ.