Advertisement

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

12:38 PM Jan 10, 2025 | Team Udayavani |

ಭೋಪಾಲ್:‌ ಮಧ್ಯಪ್ರದೇಶದ ಮಾಜಿ ಬಿಜೆಪಿ ಶಾಸಕ ಹರ್ವಂಶ್‌ ಸಿಂಗ್‌ ರಾಥೋಢ್‌ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕೋಟ್ಯಂತರ ರೂ. ನಗದು, ಚಿನ್ನ, ಅಕ್ರಮ ಆಮದಿತ ಕಾರುಗಳ ಜತೆಗೆ ಮೂರು ಮೊಸಳೆ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ರಾಥೋಢ್‌ ಹಾಗೂ ಮಾಜಿ ಕೌನ್ಸಿಲರ್‌ ರಾಜೇಶ್‌ ಕೇಸರವಾಣಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿ ವಿವರಿಸಿದೆ.

ಈ ದಾಳಿಯ ಮೂಲಕ ಸುಮಾರು 155 ಕೋಟಿ ರೂಪಾಯಿ ತೆರಿಗೆ ವಂಚನೆ ಬಯಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನ, ಬೆಳ್ಳಿ ಆಭರಣಗಳ ಜತೆಗೆ ಮೂರು ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಸರವಾಣಿ ಮತ್ತು ರಾಥೋಡ್‌ ಬೀಡಿ ಉದ್ಯಮ ನಡೆಸುತ್ತಿದ್ದು, ದಾಳಿ ವೇಳೆ ಸುಮಾರು 150 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಅಲ್ಲದೇ ಕೇಸರವಾಣಿ ಮತ್ತು ರಾಥೋಢ್‌ ಕಟ್ಟಡ ನಿರ್ಮಾಣ ವ್ಯವಹಾರ ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.

Advertisement

ದಾಳಿ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದು, ರಾಥೋಡ್‌ ನಿವಾಸದೊಳಗಿನ ಚಿಕ್ಕ ಕೊಳದಲ್ಲಿ ಮೂರು ಮೊಸಳೆ ಪತ್ತೆಯಾಗಿರುವುದು. ನಂತರ ಈ ಬಗ್ಗೆ ವನ್ಯಜೀವಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯ್ತು ಎಂದು ವರದಿ ತಿಳಿಸಿದೆ.

ಕೇಸರವಾಣಿ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವಾರು ಬೇನಾಮಿ ಇಂಪೋರ್ಟೆಡ್‌ ಕಾರುಗಳು ಪತ್ತೆಯಾಗಿದ್ದವು. ಈ ಕಾರುಗಳ ಬಗ್ಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸಾರಿಗೆ ಇಲಾಖೆಗೆ ಮನವಿ ಮಾಡಿಕೊಂಡಿದೆ.

ರಾಥೋಡ್‌ ಹಿರಿಯ ಬಿಜೆಪಿ ಮುಖಂಡ, ಉದ್ಯಮಿಯಾಗಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಥೋಢ್‌ ಅವರ ತಂದೆ ಹರ್ನಾಮ್‌ ಸಿಂಗ್‌ ರಾಥೋಢ್‌ ಅವರು ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next