ಬೆಂಗಳೂರು: ಸೀಟು ಹಂಚಿಕೆ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಡಿವಾಣ ಹಾಕಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ಹಾಸನ, ಮಂಡ್ಯ, ಮೈಸೂರು ತುಮಕೂರು, ಬೆಂಗಳೂರು ಉತ್ತರ, ಶಿವಮೊಗ್ಗ, ಉತ್ತರ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಪರಸ್ಪರ ಮಾತಿನ ಸಮರದಲ್ಲಿ ತೊಡಗಿರುವುದರಿಂದ ಅದು ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಪಕ್ಷದ ಎಲ್ಲ ಜಿಲ್ಲಾ ಘಟಕಗಳಿಗೂ ಸೂಚಿಸಿದ್ದಾರೆ.ಸ್ಥಳೀಯವಾಗಿ ಏನೇ ತೊಂದರೆ ಇದ್ದರೆ ನೇರವಾಗಿ ನಮ್ಮ ಗಮನಕ್ಕೆ ತರಬೇಕು. ಇಲ್ಲವೇ ಲೋಕಸಭೆ ಕ್ಷೇತ್ರವಾರು ನೇಮಕ ಮಾಡುವ ಎರಡೂ ಪಕ್ಷದ ವೀಕ್ಷಕರಿಗೆ ತಿಳಿಸಬೇಕೆಂದು ತಿಳಿಸಲಾಗಿದೆ.
ಈ ಕುರಿತು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆಯಲು ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸೂಚಿಸಿದ್ದಾರೆ. ಮತ್ತೂಂದೆಡೆ ಸಿಎಂ ಕುಮಾರಸ್ವಾಮಿ ಅವರು ಶಾಸಕರು, ಮಾಜಿ ಶಾಸಕರು ಹಾಗೂ ಪ್ರಮುಖ ಮುಖಂಡರಿಗೆ ದೂರವಾಣಿ ಕರೆ ಮಾಡಿ ಯಾರೂ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಂಡ್ಯ ಹಾಗೂ ಹಾಸನದಲ್ಲಿ ಮೂಲ ಕಾಂಗ್ರೆಸ್ ನಾಯಕರ ಜತೆ ಖುದ್ದು ದೇವೇಗೌಡರು ಮಾತನಾಡಿದ್ದು, ಮಂಡ್ಯದಲ್ಲಿ ಜಿ.ಮಾದೇಗೌಡ, ಆತ್ಮಾನಂದ, ಹಾಸನದಲ್ಲಿ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಮಾಜಿ ಸಚಿವ ಶಿವರಾಂ ಸೇರಿ ಹಲವು ನಾಯಕರ ಜತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜೆಡಿಎಸ್ ನಾಯಕರ ಸಭೆ ಒಂದೆರಡು ದಿನಗಳಲ್ಲಿ ನಡೆಸಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾರಿಗೇ ಟಿಕೆಟ್ ನೀಡಿದರೂ ಜೆಡಿಎಸ್ ಕಾರ್ಯಕರ್ತರು ಮತ್ತು
ಮುಖಂಡರು ಜತೆಗೂಡಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.