Advertisement

ಚೆಟ್ಟಿನಾಡ ಕಂಪನಿ ಧೋರಣೆ ಖಂಡಿಸಿ ಜೆಡಿಎಸ್‌ ಧರಣಿ

09:00 PM Jul 16, 2021 | Team Udayavani |

ಚಿಂಚೋಳಿ: ಚೆಟ್ಟಿನಾಡ್‌ ಸಿಮೆಂಟ್‌ ಕಂಪನಿ ಉದ್ಯೋಗ ನೀಡುವಲ್ಲಿ ಅನ್ಯ ರಾಜ್ಯದವರಿಗೆ ಮಣೆ ಹಾಕಿ, ಸ್ಥಳೀಯ ನಿರುದ್ಯೋಗಿ ಯುವ ಜನತೆಯನ್ನು ಕಡೆಗಣಿಸುತ್ತಿದೆ ಎಂದು ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಲ್ಲೂರ ಗ್ರಾಮದ ಬಳಿ ಇರುವ ಚೆಟ್ಟಿನಾಡ ಸಿಮೆಂಟ್‌ ಕಂಪನಿ ಎದುರು ಜೆಡಿಎಸ್‌ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕಳೆದ 13 ವರ್ಷದ ಹಿಂದೆ ಚೆಟ್ಟಿನಾಡ ಸಿಮೆಂಟ್‌ ಕಂಪನಿ ಸ್ಥಾಪನೆಯಾಗುವ ಪೂರ್ವದಲ್ಲಿ ಕಡಿಮೆ ದರದಲ್ಲಿ ಭೂಮಿ ಖರೀದಿಸಿ, ರೈತ ಕುಟುಂಬಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿ, ಈಗ ಆ ಭರವಸೆಯನ್ನು ಈಡೇರಿಸಿಲ್ಲ. ಈ ಕುರಿತು ಜಮೀನು ನೀಡಿದ ಕುಟುಂಬಗಳು ಕಂಪನಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಇಂಜಿನಿಯರಿಂಗ್‌, ಐಟಿಐ, ಡಿಪ್ಲೋಮಾ, ಪದವಿ ಪಡೆದ ಅನೇಕ ಯುವಕ-ಯುವತಿಯರು ಇದ್ದಾರೆ. ಇವರಿಗೆ ಉದ್ಯೋಗ ನೀಡುವಲ್ಲಿ ಕಂಪನಿ ಆಸಕ್ತಿ ತೋರುತ್ತಿಲ್ಲ. ಅಲ್ಲದೇ ಸರೋಜಿನಿ ಮಹಿಷಿ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಆಪಾದಿಸಿದರು. ಕಂಪನಿಗೆ ಜಮೀನು ನೀಡಿದ ರೈತರ ಕುಟುಂಬದವರಲ್ಲಿನ ಮಕ್ಕಳಿಗೆ ಶಿಕ್ಷಣ ಕೊಡಲು ಶಾಲೆಯನ್ನೂ ಪ್ರಾರಂಭಿಸಿಲ್ಲ. ಅಲ್ಲದೇ ಕೆಲವು ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ಕಂಪನಿಯ ಧೂಳಿನಿಂದ ಪ್ರತಿವರ್ಷ ಹಾಳಾಗುತ್ತಿವೆ. ಇದಕ್ಕೆ ಪರಿಹಾರ ಒದಗಿಸುವಲ್ಲಿಯೂ ಕಂಪನಿ ಹಿಂದೇಟು ಹಾಕುತ್ತಿದೆ ಎಂದು ದೂರಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿ, ಚೆಟ್ಟಿನಾಡ ಸಿಮೆಂಟ್‌ ಕಂಪನಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಕೆಲಸ ಹಚ್ಚಿ, ಕಡಿಮೆ ಸಂಬಳ ನೀಡಲಾಗುತ್ತಿದೆ.

ಈ ತಾರತಮ್ಯ ತೊಲಗಬೇಕು. ಅಲ್ಲದೇ ಸ್ಥಳೀಯರಿಗೆ ನೇಮಕಾತಿಯಲ್ಲಿ ಶೇ 75., ಅನ್ಯರಾಜ್ಯಗಳ ಜನರಿಗೆ ಶೇ. 25 ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು. ಕಲ್ಲೂರ ಗ್ರಾಮದ ಯುವ ಮುಖಂಡ ಅಂಜನಪ್ಪ ಪೂಜಾರಿ ಮಾತನಾಡಿ, ಕಂಪನಿಯವರು ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ವಿಷ್ಣುರಾವ್‌ ಮೂಲಗೆ, ಜಗದೀಶ ನಾಯಕ, ಹಣಮಂತ ಪೂಜಾರಿ, ಎಸ್‌.ಕೆ. ಮುಕ್ತಾರ, ಚಂದ್ರಕಾಂತ ಸಾಸರಗಾಂವ, ಸೂರಿ, ರಾಹುಲ್‌ ಯಾಕಾಪುರ, ನಾಗೇಂದ್ರ ಗುರಂಪಳ್ಳಿ, ಬಸವರಾಜ ಸಿರಸಿ, ಹೇಮಂತ, ಸನ್ನಿ ಮತ್ತಿತರರು ಪಾಲ್ಗೊಂಡಿದ್ದರು.

ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸೇಡಂ ಸಹಾಯಕ ಆಯುಕ್ತ ಕಚೇರಿ ಗ್ರೇಡ್‌-2 ತಹಶೀಲ್ದಾರ್‌ ಸಿದ್ರಾಮಪ್ಪ ನಾಚವಾರ, ಕಂಪನಿ ಪ್ರಧಾನ ಕಾರ್ಯದರ್ಶಿ (ಜಿಮ್‌) ಶೇಖರಬಾಬುಗೆ ಮನವಿ ಸಲ್ಲಿಸಿದರು. ಸಿಪಿಐ ಮಹಾಂತೇಶ ಪಾಟೀಲ, ಮಿರಿಯಾಣ ಪಿಎಸ್‌ಐ ಸಂತೋಷ ರಾಠೊಡ, ಚಿಂಚೋಳಿ ಪಿಎಸ್‌ಐ ಎ.ಎಸ್‌. ಪಟೇಲ್‌ ಸೂಕ್ತ ಬಂದೋಬಸ್ತ್ ಮಾಡಿದ್ದರು. ಪಾದಯಾತ್ರೆ: ಇದಕ್ಕೂ ಮುನ್ನ ಕಲ್ಲೂರ ಗ್ರಾಮದ ಆರಾಧ್ಯ ದೇವ ವೀರಭದ್ರೇಶ್ವರ ದೇವಾಲಯದಿಂದ ಚೆಟ್ಟಿನಾಡ ಸಿಮೆಂಟ ಕಂಪನಿ ವರೆಗೆ 2 ಕಿ.ಮೀ ಪಾದಯಾತ್ರೆ ಕೈಗೊಳ್ಳಲಾಯಿತು. ಕಲ್ಲೂರ, ಮಿರಿಯಾಣ, ಭಕ್ತಂಪಳ್ಳಿ, ಚಿಂಚೋಳಿ, ಚಿಮ್ಮನಚೋಡ, ಗಂಗನಪಳ್ಳಿ ಇನ್ನಿತರ ಗ್ರಾಮಗಳ ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next