ಬೆಂಗಳೂರು: ಜೆಡಿಎಸ್‌ನಿಂದ ಶಾಸಕರು ಹಾಗೂ ಮಾಜಿ ಶಾಸಕರ ಗುಂಪು ಕಾಂಗ್ರೆಸ್ ಹಾಗೂ ಬಿಜೆಪಿಯತ್ತ ಮುಖ ಮಾಡಿದೆ. ನೂತನ ಕೆಪಿಸಿಸಿ ಅಧ್ಯಕ್ಷರ ಘೋಷಣೆಗಾಗಿ ಹಲವರು ಕಾಯುತ್ತಿದ್ದಾರೆಂದು ಹೇಳಲಾಗಿದೆ.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಭಾಗದ ಶಾಸಕರು, ಮಾಜಿ ಶಾಸಕರು, ಮುಖಂಡರು, ವಿಧಾನಪರಿಷತ್‌ನ ಮಾಜಿ ಸದಸ್ಯರು ಸೇರಿ ಹನ್ನೆರಡು ಮಂದಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಅಹಮದ್ ಅವರ ಸಂಪರ್ಕದಲ್ಲಿದ್ದಾರೆಂದು ತಿಳಿದು ಬಂದಿದೆ.
ಜೆಡಿಎಸ್‌ನಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡದ ಹಾಗೂ ಎರಡನೇ ಹಂತದ ನಾಯಕರಿಗೆ ನಾಯಕತ್ವ ಕೊಡದ ಕಾರಣ ಕೆಲವರು ಮುನಿಸಿಕೊಂಡಿದ್ದು, ತಮ್ಮ ಮುಂದಿನ ಭವಿಷ್ಯಕ್ಕಾಗಿ ಪಕ್ಷಾಂತರಕ್ಕೆ ಮುಂದಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆ “ಆಪರೇಷನ್ ಕಮಲ’ ಸಂದರ್ಭದಲ್ಲೇ ಐವರು ಶಾಸಕರ ಹೆಸರು ಕೇಳಿ ಬಂದಿತ್ತು. ಆದರೆ, ಬಿಜೆಪಿಯಿಂದ ತಕ್ಷಣಕ್ಕೆ ಬೇಡ ಎಂಬ ಸಂದೇಶ ಬಂದಿದ್ದರಿಂದ ಸುಮ್ಮನಾಗಿದ್ದರು. ಇದೀಗ ಕೆಲವರು ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ. ತಕ್ಷಣಕ್ಕೆ ಸೇರದಿದ್ದರೂ ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಚುನಾವಣೆ ವೇಳೆಗೆ ಟಿಕೆಟ್ ಖಚಿತಪಡಿಸಿಕೊಂಡು ಸೇರಲು ಚಿಂತನೆ ನಡೆಸಿದ್ದಾರೆಂದು ಹೇಳಲಾಗಿದೆ.
ಈ ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ ತಕ್ಷಣಕ್ಕೆ ಜೆಡಿಎಸ್‌ನಿಂದ ಶಾಸಕರನ್ನು ಸೆಳೆಯುವುದು ಬೇಡ. ಈಗ ಚುನಾವಣೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಸೇರ್ಪಡೆಯಿಂದ ಯಾವುದೇ ಪ್ರಯೋಜನವಿಲ್ಲ. ಚುನಾವಣೆ ಸಮಯದಲ್ಲಿ ನೋಡೋಣ ಎಂದು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.