Advertisement

ಇನ್ನೂ ತಣ್ಣಗಾಗಿಲ್ಲ ಬೆಳಗಾವಿ ಬೆಂಕಿ

06:00 AM Sep 19, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರಕಾರ ಪತನಗೊಳಿಸಲಿದ್ದಾರೆ ಎಂದೇ ಬಿಂಬಿತವಾಗಿದ್ದ ರಮೇಶ್‌ ಜಾರಕಿಹೊಳಿ ಹಾಗೂ ಸತೀಶ್‌ ಜಾರಕಿಹೊಳಿ ಭಿನ್ನಮತ ರಾಜ್ಯ ಸರಕಾರದ ಮಟ್ಟದಲ್ಲಿ ಬಗೆಹರಿದಿದ್ದು, ಮತ್ತೂಂದು ಬೇಡಿಕೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಇತ್ಯರ್ಥವಾಗಬೇಕಾಗಿದೆ. ಜಾರಕಿಹೊಳಿ ಸಹೋದರರ ಅಸಮಾಧಾನಕ್ಕೆ ಸಿಎಂ ಕುಮಾರಸ್ವಾಮಿ ತಮ್ಮ ಹಂತದಲ್ಲಿ ತೇಪೆ ಹಚ್ಚಿದ್ದು, ಪಕ್ಷದಲ್ಲಿನ ಸಮಸ್ಯೆಗೆ ಹೈಕಮಾಂಡ್‌ ಮಾತುಕತೆಯ ಅನಂತರ ಸ್ಪಷ್ಟ ಚಿತ್ರಣ ಸಿಗಲಿದೆ.

Advertisement

ಸದ್ಯಕ್ಕೆ ಬೆಳಗಾವಿ ಜಿಲ್ಲೆ ವಿಚಾರದಲ್ಲಿ ಜಲಸಂಪ ನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸೇರಿ ಬೇರೆ ಯಾವುದೇ ಸಚಿವರು ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿಯವರು ಜಾರಕಿ ಹೊಳಿ ಸಹೋದರರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಉಳಿದಂತೆ ಜಾರಕಿಹೊಳಿ ಸಮುದಾಯದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ತೀರ್ಮಾನ ವಾಗಬೇಕಿದೆ. ಹೀಗಾಗಿ ಬಂಡಾಯ ಮೇಲ್ನೋಟಕ್ಕೆ ತಾತ್ಕಾಲಿಕವಾಗಿ ಶಮನಗೊಂಡಂತಾಗಿದೆ. ಬೆಳಗಾವಿಯಲ್ಲಿ ಸಿಎಂ ಜತೆ ವೇದಿಕೆ ಹಂಚಿಕೊಳ್ಳದೆ ದೂರವಾಗಿದ್ದ ಜಾರಕಿಹೊಳಿ ಸೋದರರು ಮಂಗಳವಾರ ಕುಮಾರಸ್ವಾಮಿ ಅವರನ್ನು ಖಾಸಗಿ ಹೊಟೇಲ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬೆಳಗಾವಿ ಜಿಲ್ಲೆಯಲ್ಲಿನ ವಿಷಯದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಹಸ್ತಕ್ಷೇಪ ಹಾಗೂ ಇತರ ಬೇಡಿಕೆಗಳ ಬಗ್ಗೆ ಮುಖಾಮುಖೀಯಾಗಿ ಸಮಾಲೋಚಿಸಿದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರ ಬೇಡಿಕೆಗಳನ್ನು ಇತ್ಯರ್ಥಪಡಿಸುವ ಭರವಸೆ ನೀಡಿದರು. ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ವಿಚಾರಗಳನ್ನು ಇನ್ಮುಂದೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿಯೇ ತೀರ್ಮಾನ ಮಾಡಲಾಗುವುದು. ಬೇರೆ ಸಚಿವರು ಅನಗತ್ಯ ಹಸ್ತಕ್ಷೇಪ ಮಾಡುವುದನ್ನು ತಡೆಯುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್‌ ನಾಯಕರು ಒಪ್ಪುವುದಾದರೆ ರಮೇಶ್‌ ಅವರೊಂದಿಗೆ ಸತೀಶ್‌ ಜಾರಕಿಹೊಳಿಗೂ ಮಂತ್ರಿ ಸ್ಥಾನ ನೀಡುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ನಮ್ಮದೇನೂ ತೊಂದರೆ ಇಲ್ಲ
ಮುಖ್ಯಮಂತ್ರಿಯವರ ಸ್ಪಂದನೆಯಿಂದ ಸಮಾಧಾನಗೊಂಡ ಸತೀಶ್‌ ಜಾರಕಿಹೊಳಿ ಸಹ ನಮ್ಮಿಂದ ಸರಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಬೆಳಗಾವಿ ವಿಚಾರದಲ್ಲಿ ಬೇರೆಯವರ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದರು ಎನ್ನಲಾಗಿದೆ.

ಅನುಮಾನ?
ಈ ಎಲ್ಲ ಬೆಳವಣಿಗೆಗಳು ನಡೆದರೂ ಸಚಿವ ರಮೇಶ್‌ ಜಾರಕಿಹೊಳಿ ಮಾತ್ರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ದೂರ ಉಳಿದರು. ಮತ್ತೂಂದೆಡೆ ಸತೀಶ್‌ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡದೆ ಅಂತರ ಕಾಯ್ದುಕೊಂಡಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 

Advertisement

ಸಿಎಂ ಭರವಸೆ ನೀಡಿದ್ದಾರೆ
ಸರಕಾರದ ಮಟ್ಟದಲ್ಲಿ ಕೆಲಸಗಳು ಆಗುತ್ತಿರಲಿಲ್ಲ. ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಎಲ್ಲ ಕೆಲಸ ಮಾಡಿಕೊಡುವ ಭರವಸೆ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣದ ಬಗ್ಗೆ ಸಮಸ್ಯೆ ಇತ್ತು. ಅದು ಈಗ ಬಗೆ ಹರಿದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದೇವೆ. ನಾಯಕ ಸಮುದಾಯಕ್ಕೆ ಇನ್ನೊಂದು ಮಂತ್ರಿ ಸ್ಥಾನ ನೀಡುವಂತೆಯೂ ಕೇಳಿಕೊಂಡಿದ್ದೇವೆ. ಮೈತ್ರಿ ಸರಕಾರಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗುವುದಿಲ್ಲ. ಪಕ್ಷದ ಆಂತರಿಕ ವಿಷಯಗಳ ಕುರಿತು ಪಕ್ಷದ ಹೈ ಕಮಾಂಡ್‌ ಜತೆ ಚರ್ಚಿಸಲು ಬುಧವಾರ ದಿಲ್ಲಿಗೆ ತೆರಳಿ ಚರ್ಚೆ ಮಾಡುತ್ತೇನೆ. ಇನ್ಮುಂದೆ ನಮ್ಮ ಕ್ಷೇತ್ರಗಳ ಸಮಸ್ಯೆಗಳತ್ತ ಗಮನ ಹರಿಸುತ್ತೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಡಿಕೆಶಿಗೆ ಬ್ರೇಕ್‌
ಅಂತಿಮವಾಗಿ ಡಿ.ಕೆ. ಶಿವಕುಮಾರ್‌ಗೆ ಹಿನ್ನಡೆಯುಂಟಾದಂತಾಗಿದೆ. ಬೆಳಗಾವಿ ವಿಚಾರದಲ್ಲಿ ಮಧ್ಯ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿಎಂ ಅವರಿಂದ ಭರವಸೆ ಪಡೆದಿರುವ ಜಾರಕಿಹೊಳಿ ಸಹೋದರರು ಮತ್ತೂಂದೆಡೆ ಬಳ್ಳಾರಿಯ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ನಾಗೇಂದ್ರ ಉಸ್ತುವಾರಿ ಸಚಿವರಾದರೆ ಅವರು ತಮ್ಮ ಹಿಡಿತದಲ್ಲಿರುತ್ತಾರೆ. ಅಲ್ಲದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನದಿಂದಲೂ ಡಿಕೆಶಿಗೆ ಕೊಕ್‌ ಕೊಡಿಸುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next