Advertisement

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

01:18 AM Dec 16, 2024 | Team Udayavani |

ಗದಗ: ಬಿಜೆಪಿ, ಜೆಡಿಎಸ್ ರಾಜ್ಯದ ಜನತೆಗೆ ಆರ್ಥಿಕ, ಸಾಮಾಜಿಕವಾಗಿ ಸಹಾಯವಾಗಬಾರದು, ಸಮಾನತೆ ಬರಬಾರದು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಜೊತೆಗೆ ಬಡವರಿಗಾಗಿರುವ ಕಾರ್ಯಕ್ರಮಗಳಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

Advertisement

ಜಿಲ್ಲೆಯ ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ರೋಣ ವಿಧಾನಸಭೆ ಕ್ಷೇತ್ರದಲ್ಲಿ 200  ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ವಿರೋಧ ಪಕ್ಷದ ನಮ್ಮ ಮೇಲೆ ಟೀಕೆ ಮಾಡುತ್ತಿದೆ. ಅಭಿವೃದ್ಧಿ ಗೆ ಹಣ ಇಲ್ಲದೆ ಹೋದರೆ ಇಷ್ಟೊಂದು ಕಾರ್ಯಗಳನ್ನು ಮಾಡಲು ಸಾಧ್ಯವಿರಲಿಲ್ಲ. ನಮ್ಮ ಟೀಕೆಗಳು ರಚನಾತ್ಮಕವಾಗಿರಬೇಕು. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಿ ಎಂದರೆ ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಅಂದರು. ಆದರೆ, ಅವರ ಬಳಿ ನೋಟು ಎಣಿಸುವ ಮಿಷನ್ ಮಾತ್ರವಿದೆ ಎಂದು ವ್ಯಂಗ್ಯವಾಡಿದರು.

ಸಮ ಸಮಾಜ ನಿರ್ಮಾಣದ ಉದ್ದೇಶ:

ಪ್ರಸಕ್ತ ವರ್ಷ ಮಂಡಿಸಿದ 3.71 ಲಕ್ಷ ಕೋಟಿ ಬಜೆಟ್ 1.20 ಲಕ್ಷ ಕೋಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದು ಅದರಲ್ಲಿ ಗ್ಯಾರಂಟಿಗಾಗಿ 52 ಸಾವಿರ ಕೋಟಿ ಬಳಸುತ್ತಿದ್ದೇವೆ. ಸಂವಿಧಾನ ರಕ್ಷಿಸಲು, ಪ್ರಜಾಪ್ರಭುತ್ವ ಉಳಿಸುವುದಕ್ಕೋಸ್ಕರವಾಗಿ ಎಲ್ಲ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಜಾತಿ ವ್ಯವಸ್ಥೆ ತೊಲಗಿಸಿ ಸಮಾಜದಲ್ಲಿ ಸಮ ಸಮಾಜ  ನಿರ್ಮಾಣ ಮಾಡಬೇಕು ಎಂಬುದು ನಮ್ಮ ಉದ್ದೇಶ. ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸುವ ಕುರಿತು ಶಾಸಕ ಜಿ.ಎಸ್.ಪಾಟೀಲರು ಬೇಡಿಕೆಯಿಟ್ಟಿದ್ದು, ಮುಂದಿನ ಬಜೆಟ್‌ನಲ್ಲಿ ನೂರಕ್ಕೆ ನೂರಷ್ಟು ಪರಿಗಣಿಸುತ್ತೇವೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ,  ಜಿ.ಎಸ್.ಪಾಟೀಲರ ಅಭಿವೃದ್ಧಿ ಕಾರ್ಯಕ್ರಮಗಳ ಕಲ್ಲುಗಳ ನೋಡಿದರೆ ಒಂದು ಮನೆಯನ್ನೇ ಕಟ್ಟಿಸಬಹುದು. ಅಭಿವೃದ್ಧಿಯೇ ತಂದೆ-ತಾಯಿ, ಗ್ಯಾರಂಟಿಗಳೇ ಬಂಧು ಬಳಗ. ಬಿಜೆಪಿಗರು ಭಾವನೆಗಳ ಜೊತೆ ರಾಜಕಾರಣ ಮಾಡಿದರೆ, ನಾವು ನಮ್ಮ ನಮ್ಮ ಗ್ಯಾರಂಟಿ ಮೂಲಕ ಬಡವರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ಜಿ.ಎಸ್. ಪಾಟೀಲರ ಕುಟುಂಬ ಸೇವಕರ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿಯಾಗಬೇಕಿದೆ: 
ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿರೋಧ ಪಕ್ಷದವರು ಸರಕಾರದ ಖಜಾನೆ ಖಾಲಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ನನ್ನ ಕ್ಷೇತ್ರದಲ್ಲಿ 200ಕೋಟಿ ರೂ. ಅಧಿಕ ಅನುದಾ‌ನದಲ್ಲಿ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಲು ಜಿಟಿಟಿಸಿ ಆರಂಭಿಸಲಾಗುತ್ತಿದೆ. ಬಡಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಲು ಆರು ಹಾಸ್ಟೆಲ್ ಆರಂಭಿಸಲಾಗುತ್ತಿದೆ. ನಮ್ಮ ರೋಣ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿಯಾಗಬೇಕು. ಅದೇ ರೀತಿ ಒಣಬೇಸಾಯ ಮಾಡುವ ರೈತರಾಗಿದ್ದು ನೀರಾವರಿ ಯೋಜನೆ ಬಂದಿಲ್ಲ. ಕೃಷ್ಣಾ ನದಿ ಹಾಗೂ ಮಲಪ್ರಭಾ ನದಿ ಮೂಲಕ ಕೆರೆಗಳಿಗೆ‌ ನೀರು ತುಂಬಿಸುವ ಯೋಜನೆ ಮಾಡಬೇಕು. ಮುಂಡರಗಿ ಭಾಗದಲ್ಲಿ ನೂರಾರು ಕೆರೆಗಳ ತುಂಬಿಸುವ ಜಾಲವಾಡಗಿ ಯೋಜನೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ಜಿ.ಎಸ್.ಪಾಟೀಲ್‌ಗೆ ಸಚಿವ ಸ್ಥಾನ ನೀಡಿ

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶಾಸಕ ಜಿ.ಎಸ್. ಪಾಟೀಲ್‌ ರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಇದಕ್ಕುತ್ತರವಾಗಿ ಸಿಎಂ ಸಿದ್ದರಾಮಯ್ಯ ಜಿ.ಎಸ್. ಪಾಟೀಲ್‌ ಸಚಿವರಾಗಲು ಅರ್ಹರಿದ್ದು, ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ಹೇಳಿದರು.

Advertisement

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯ, ಸರಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್, ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಐ.ಜಿ. ಸನದಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್ಲ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಬಿ.ಎಸ್. ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್ ಎಸ್. ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next