Advertisement

ಜಾರಕಿಹೊಳಿಗೆ ಸವಾಲಾದ ಗಡಿ ನೀರಿನ ಸಮಸ್ಯೆ

10:22 AM Feb 24, 2020 | Lakshmi GovindaRaj |

ಬೆಳಗಾವಿ: ಪಕ್ಕದಲ್ಲೇ ಜೀವನದಿ ಕೃಷ್ಣೆ ಹರಿಯುತ್ತಿದ್ದರೂ ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುವ ನದಿ ತೀರದ ನೂರಾರು ಗ್ರಾಮಗಳಿಗೆ ಇನ್ನು ಮೇಲಾದರೂ ಶಾಶ್ವತ ಪರಿಹಾರ ಸಿಕ್ಕೀತೇ?. ಇದು ಸರಕಾರ ಹಾಗೂ ನೂತನ ಜಲ ಸಂಪನ್ಮೂಲ ಸಚಿವರಿಗೆ, ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜನರ ಪ್ರಶ್ನೆ.

Advertisement

ಯಡಿಯೂರಪ್ಪ ಅವರೊಂದಿಗೆ ಹಠಕ್ಕೆ ಬಿದ್ದು ನೀರಾವರಿ ಖಾತೆ ಪಡೆದಿರುವ ರಮೇಶ ಜಾರಕಿಹೊಳಿಗೆ ನದಿ ತೀರದ ಗ್ರಾಮಗಳ ಜನರು ಮತ್ತೆ ಕುಡಿಯುವ ನೀರಿನ ಸಮಸ್ಯೆಯ ನೆನಪು ಮಾಡಿಕೊಟ್ಟಿದ್ದಾರೆ. ಕಳೆದ ಬೇಸಿಗೆ ಸಮಯದಲ್ಲಿ ಭೀಕರ ಸಮಸ್ಯೆ ಉಂಟಾದಾಗ ಇದಕ್ಕೆ ಶಾಶ್ವತ ಪರಿಹಾರವಾಗಿ ನೀರಿಗೆ ನೀರು ವಿನಿಮಯ ಪ್ರಸ್ತಾವನೆಯನ್ನು ಆಗಿನ ಮಹಾರಾಷ್ಟ್ರ ಸರಕಾರ ಮೈತ್ರಿ ಸರಕಾರದ ಮುಂದೆ ಇಟ್ಟಿತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ಇದು ಕೈಗೂಡಲಿಲ್ಲ. ಆರೋಪ-ಪ್ರತ್ಯಾರೋಪಗಳಲ್ಲೇ ಕಾಲ ಕಳೆಯಿತೇ ವಿನ: ಒಪ್ಪಂದ ಆಗಲಿಲ್ಲ.

ಸಾಕಷ್ಟು ರಾಜಕೀಯ ಬದಲಾವಣೆ ನಂತರ ಈಗ ಕರ್ನಾಟಕದಲ್ಲಿ ಸಹ ಬಿಜೆಪಿ ಸರಕಾರ ಬಂದಿರುವುದರಿಂದ ಬೇಸಿಗೆ ಸಮಯದಲ್ಲಿ ಕೃಷ್ಣಾ ನದಿ ತೀರದ ಜನರಿಗೆ ಉಂಟಾಗುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದ ಜೊತೆಗೆ ಶಾಸನಬದ್ಧ ಒಡಂಬಡಿಕೆ ಮಾಡಿಕೊಳ್ಳಬೇಕು ಎಂಬ ಒತ್ತಾಯ ಮತ್ತೆ ನದಿ ತೀರದ ಜನರಿಂದ ವ್ಯಕ್ತವಾಗಿದೆ. ಇನ್ನೊಂದೆಡೆ, ಕರ್ನಾಟಕಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಸರಕಾರ ಇರುವುದರಿಂದ ಈ ಶಾಸನಬದ್ಧ ಒಡಂಬಡಿಕೆ ಕಾರ್ಯರೂಪಕ್ಕೆ ಬರಬಹುದೇ ಎಂಬ ಅನುಮಾನ ಮೂಡಿದೆ.

ಮತ್ತೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾದಾಗ ಒಡಂಬಡಿಕೆ ಪ್ರಸ್ತಾಪದ ಬಗ್ಗೆ ಚರ್ಚೆ ಮಾಡುವ ಬದಲು ಈಗಲೇ ಅದಕ್ಕೆ ಚಾಲನೆ ನೀಡಬೇಕು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ಎರಡೂ ರಾಜ್ಯದವರು ಅದನ್ನು ಬದಿಗಿಟ್ಟು ನದಿ ತೀರದ ಜನರ ಕಷ್ಟಕ್ಕೆ ನೆರವಾಗಬೇಕು ಎಂಬುದು ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕುಗಳ ಜನರ ಒತ್ತಾಸೆ.

ಸಮಸ್ಯೆ ಹೊಸದೇನಲ್ಲ: ಪ್ರತಿ ವರ್ಷ ಬೇಸಿಗೆ ಸಮಯ ದಲ್ಲಿ ಕೃಷ್ಣಾ ನದಿ ಸಂಪೂರ್ಣ ಒಣಗಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ನದಿ ತೀರದ ಜನರು ಮಹಾರಾಷ್ಟ್ರದ ಜಲಾಶಯಗಳ ಕಡೆ ಮುಖ ಮಾಡುತ್ತಾರೆ. ಕೊಯ್ನಾ, ವಾರಣಾ ಮೊದಲಾದ ಜಲಾಶಯಗಳಿಂದ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿಸಬೇಕೆಂಬ ಬೇಡಿಕೆ ಮಂಡಿಸುತ್ತಾರೆ. ಇದು ಹೊಸದೇನಲ್ಲ.

Advertisement

ಕೃಷ್ಣಾ ನದಿ ಸಂಪೂರ್ಣ ಬತ್ತಿ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರು ಹಾಗೂ ಸಂಸದರು ಪ್ರತ್ಯೇಕವಾಗಿ ಮಹಾರಾಷ್ಟಕ್ಕೆ ನಿಯೋಗದ ಮೂಲಕ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತ ಬಂದಿದ್ದಾರೆ. ಇದುವರೆಗೆ ನಿಯೋಗದ ಹಾಗೂ ಕರ್ನಾಟಕ ಸರಕಾರದ ಮನವಿಗೆ ಸ್ಪಂದಿಸಿ, ಮಹಾರಾಷ್ಟ್ರ ಸರಕಾರ ಅಲ್ಲಿನ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುತ್ತ ಬಂದಿದೆ. ಇದಕ್ಕೆ ಕರ್ನಾಟಕ ಸರಕಾರ ಮಹಾರಾಷ್ಟ್ರಕ್ಕೆ ನೀರಿನ ಹಣ ಪಾವತಿಸುತ್ತಲೇ ಬಂದಿದೆ.

ಆದರೆ ಕಳೆದ ಬಾರಿ, ನೀರಿಗೆ ಹಣ ನೀಡುವ ಬದಲು ಆಲಮಟ್ಟಿ ಜಲಾಶಯದಿಂದ ಸೊಲ್ಲಾಪುರ, ಜತ್ತ ಹಾಗೂ ಅಕ್ಕಲಕೋಟ ಪ್ರದೇಶಗಳಿಗೆ ನೀರು ನೀಡಬೇಕು ಎಂದು ಮಹಾರಾಷ್ಟ್ರ ಸರಕಾರ ಬೇಡಿಕೆ ಇಟ್ಟಿದ್ದು, ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತ್ತು. ಕರ್ನಾಟಕ ಸರಕಾರ ಸಹ ಈ ವಿಷಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯತ್ನ ಮಾಡದ ಕಾರಣ ಆಗ ಬೇಸಿಗೆಯಲ್ಲಿ ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿಯಲೇ ಇಲ್ಲ. ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳುವ ವಿಷಯದಲ್ಲಿ ಮೈತ್ರಿ ಸರಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂಬ ನೋವು ನದಿ ತೀರದ ಜನರಲ್ಲಿ ಈಗಲೂ ಇದೆ.

ಮಹಾರಾಷ್ಟ್ರಕ್ಕೆ ನೀರು ಸಾಧ್ಯವೇ?: ಕರ್ನಾಟಕದ ಕೃಷ್ಣಾ ನದಿಗೆ ನೀರು ಬಿಡುವುದಕ್ಕೆ ಪರ್ಯಾಯವಾಗಿ ತುಬಚಿಯಿಂದ ಸೊಲ್ಲಾಪುರ ಭಾಗಕ್ಕೆ ನೀರು ಕೊಡಬೇಕು ಎಂಬುದು ಮಹಾರಾಷ್ಟ್ರದ ಬೇಡಿಕೆ. ತುಬಚಿ ಬಬಲೇಶ್ವರ ಪ್ರತಿಷ್ಠಿತ ಏತ ನೀರಾವರಿ ಯೋಜನೆ, 3,700 ಕೋ.ರೂ.ವೆಚ್ಚದಲ್ಲಿ, 52,000 ಹೆಕ್ಟೇರ್‌ ಜಮೀನಿನ ನೀರಾವರಿಗಾಗಿ ಜಾರಿಯಾದ ಯೋಜನೆ. ಇದಕ್ಕಾಗಿ ರಾಜ್ಯ ಸರಕಾರ ಆರು ಟಿಎಂಸಿ ನೀರು ಹಂಚಿಕೆ ಮಾಡಿದೆ. ಆದರೆ, ಇಲ್ಲಿಂದ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಜತ್ತ ಪ್ರದೇಶಕ್ಕೆ ನೀರು ಒದಗಿಸಲು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ತುಬಚಿ ಬಬಲೇಶ್ವರ ಯೋಜನಾ ಪ್ರದೇಶದಲ್ಲಿಯೇ ಪಂಪ್‌ ಹೌಸ್‌ ನಿರ್ಮಿಸಿಕೊಳ್ಳಲು ಕರ್ನಾಟಕ ಸರಕಾರ ಮೂಲಭೂತ ಸೌಕರ್ಯ ಒದಗಿಸಲು ಸಿದ್ಧವಿದ್ದು, ಮಹಾರಾಷ್ಟ್ರ ತನ್ನ ವೆಚ್ಚದಲ್ಲಿಯೇ ಇಂಥ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಜತ್ತ ಪ್ರದೇಶಕ್ಕೆ ನೀರು ಒಯ್ಯಬಹುದು ಎಂಬ ಪ್ರಸ್ತಾವನೆಯನ್ನು ಮಹಾರಾಷ್ಟ್ರ ಈಗಾಗಲೇ ತಿರಸ್ಕರಿಸಿದೆ. ಕರ್ನಾಟಕ ಸರಕಾರವೇ ವೆಚ್ಚ ಮಾಡಿ ತುಬಚಿ ಬಬಲೇಶ್ವರದಿಂದ ನೀರು ಒದಗಿಸಬೇಕು ಎಂಬುದು ಅಲ್ಲಿನ ಸರಕಾರದ ವಾದ. ಹೀಗಾಗಿ, ನೀರು ವಿನಿಮಯ ಒಪ್ಪಂದ ಜಟಿಲವಾಗಿಯೇ ಉಳಿದಿದೆ.

ಸಚಿವರಿಗೆ ಪ್ರತಿಷ್ಠೆ ಪ್ರಶ್ನೆ: ಎಲ್ಲಕ್ಕಿಂತ ಮುಖ್ಯವಾಗಿ ರಮೇಶ ಜಾರಕಿಹೊಳಿ, ಕಾಗವಾಡದ ಶಾಸಕ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಮತ್ತು ಅಥಣಿಯ ಶಾಸಕ ಮಹೇಶ ಕುಮಟಳ್ಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಕಳೆದ ಮೈತ್ರಿ ಸರಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರದ ನೀರಿನ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹೇಶ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ ಆರೋಪಿ ಸಿದ್ದರು. ಆಗ ಅವರಿಗೆ ರಮೇಶ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದರು. ಈಗ ರಾಜ್ಯದಲ್ಲಿ ತಮ್ಮದೇ ಸರಕಾರ ಬಂದಿರುವುದರಿಂದ ಮಹಾರಾಷ್ಟ್ರದ ಜೊತೆ ನೀರಿನ ವಿನಿಮಯ ಒಪ್ಪಂದ ಮಾಡಿಕೊಳ್ಳುವ ಸವಾಲು ಈ ಮೂವರು ನಾಯಕರ ಮೇಲಿದೆ.

ಮಹಾರಾಷ್ಟ್ರ ಕೇಳಿರುವಂತೆ ತಬಚಿ ಬಬಲೇಶ್ವರದಿಂದ ನಾಲ್ಕು ಟಿಎಂಸಿ ನೀರು ಕೊಡಲು ಸಾಧ್ಯವಿಲ್ಲ. ಅದರ ಬದಲಾಗಿ ಮಳೆಗಾಲದಲ್ಲಿ ಅಧಿಕ ಪ್ರಮಾಣದಲ್ಲಿ ಹರಿದು ಬರುವ ನೀರನ್ನು ಅವರಿಗೆ ಬಿಡಬಹುದು. ಮಹಾರಾಷ್ಟ್ರದಿಂದ ನಾಲ್ಕು ಟಿಎಂಸಿ ನೀರು ಪಡೆದುಕೊಳ್ಳುವ ಬಗ್ಗೆ ಕೂಡಲೇ ಸಂಪುಟದಲ್ಲಿ ನಿರ್ಣಯ ಕೈಗೊಂಡು ಅಲ್ಲಿನ ಸರಕಾರಕ್ಕೆ ಕಳಿಸಬೇಕು. ಸದ್ಯದಲ್ಲೇ ನಾವೂ ನಿಯೋಗದ ಮೂಲಕ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಲಿದ್ದೇವೆ.
-ದಾದಾಗೌಡ ಪಾಟೀಲ, ರೈತ ಮುಖಂಡರು, ಕೃಷ್ಣಾ ತೀರ

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next