ಹೊಸದಿಲ್ಲಿ: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ, ಎಂ.ವೆಂಕಯ್ಯ ನಾಯ್ಡು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಭೂ ಅವ್ಯವಹಾರ ಕುರಿತ ಆರೋಪವೊಂದನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರಸ್ತಾವಿಸಿದ್ದು, ಬಿಜೆಪಿಗೆ ಮುಜುಗರ ತಂದೊಡ್ಡಿದೆ. ಪಾರದರ್ಶಕತೆ, ಸಂಭಾವ್ಯತೆ ಬಗ್ಗೆ ಯಾವಾಗಲೂ ಮಾತನಾಡುವ ನಾಯ್ಡು ಅವರು ಈ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ಸವಾಲೆಸೆದಿದೆ. ಆಂಧ್ರದ ನೆಲ್ಲೂರಿನಲ್ಲಿ ಬಡವರಿಗೆ, ಭೂಮಿ ರಹಿತರಿಗೆ ಮೀಸಲಾದ ಭೂಮಿಯನ್ನು ನಾಯ್ಡು ಅವರು ವಶಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದರು. ಅಲ್ಲದೇ ಈ ಬಗ್ಗೆ ಜನತೆಯ ಪ್ರತಿಭಟನೆ, ರಾಜಕೀಯ ಒತ್ತಡದ ಬಳಿಕ ಅದನ್ನು ವಾಪಸ್ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಮಾಧ್ಯಮ ಮಂದಿಯೊಂದಿಗೆ ಪ್ರತಿಕ್ರಿಯಿಸಿದ ನಾಯ್ಡು ಅವರು, ‘ಈ ವಿಚಾರದಲ್ಲಿ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್ ಅದನ್ನು ವಜಾಗೊಳಿಸಿದೆ. ಚುನಾವಣೆ ವೇಳೆ ಅವರು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ಬೇಸರ ತರಿಸಿದೆ’ ಎಂದಿದ್ದಾರೆ. ಇನ್ನು, ‘ನಾಯ್ಡು ವಿರುದ್ಧದ ಆರೋಪ ನಿರಾಧಾರ ಮತ್ತು ಋಜುವಾತು ಆಗದ ವಿಚಾರ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಇನ್ನು, 2017 ಜೂ 20ರಂದು ಆರೋಪ ಮಾಡಿದ್ದ ಜೈರಾಂ, ‘ನಾಯ್ಡು ಅವರು ಪುತ್ರಿಗೆ ಸೇರಿದ ಸ್ವರ್ಣ ಭಾರತ ಟ್ರಸ್ಟ್ ಹೈದ್ರಾಬಾದ್ ಮೆಟ್ರೋಪಾಲಿಟನ್ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕಿದ್ದ 2 ಕೋಟಿ ಮೊತ್ತಕ್ಕೆ ತೆಲಂಗಾಣ ಸರಕಾರ ಗುಟ್ಟಾಗಿ ವಿನಾಯಿತಿ ನೀಡಿದೆ’ ಎಂದಿದ್ದರು. ಅಲ್ಲದೇ 2014 ಜುಲೈನಲ್ಲಿ ತೆಲಂಗಾಣ ಸರಕಾರ ನಾಯ್ಡು ಪುತ್ರಗೆ ಸೇರಿದ ಹರ್ಷ ಟೊಯೊಟಾದಿಂದ ಟೆಂಡರ್ ಕರೆಯದೇ 271 ಕೋಟಿ ರೂ. ಮೌಲ್ಯದ ಕಾರುಗಳ ಖರೀದಿಗೆ ಮುಂದಾಗಿದೆ ಎಂದು ದೂರಿದ್ದರು.
ಒಎನ್‌ಜಿಸಿ ತೆಕ್ಕೆ ಸೇರಿದ ಎಚ್‌ಪಿಸಿಎಲ್: ಸರಕಾರಿ ಸ್ವಾಮ್ಯದ ಮೂರನೇ ಅತಿ ದೊಡ್ಡ ಕಂಪನಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ (ಎಚ್‌ಪಿಸಿಎಲ್) ಇದೀಗ ಸರಕಾರಿ ಸ್ವಾಮ್ಯದ ಇನ್ನೊಂದು ಕಂಪನಿ ಒಎನ್‌ಜಿಸಿ ತೆಕ್ಕೆ ಸೇರಿದೆ. ಒಎನ್‌ಜಿಸಿ ಸರಕಾರದ ಬಳಿ ಇದ್ದ ಎಲ್ಲಾ ಶೇ. 51.11 ಷೇರುಗಳನ್ನು ಖರೀದಿಸಿದೆ. ಆದಾಗ್ಯೂ ಎಚ್‌ಪಿಸಿಎಲ್ ಸರಕಾರಿ ಸ್ವಾಮ್ಯದ ಕಂಪನಿಯಾಗಿಯೇ ಮುಂದುವರಿಯಲಿದೆ. ಈ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್, ಷೇರು ಖರೀದಿಗೆ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಮ್ಮತಿ ಸೂಚಿಸಿದೆ ಎಂದಿದ್ದಾರೆ.
ಬ್ಯಾಂಕ್ ನಿಯಂತ್ರಣ ತಿದ್ದುಪಡಿ ಕಾಯ್ದೆ ಮಂಡನೆ: ಬ್ಯಾಂಕ್‌ಗಳಲ್ಲಿರುವ ನಿರ್ಬಂಧಿತ ಆಸ್ತಿ ಕುರಿತಂತೆ ನಿರ್ದೇಶನಗಳನ್ನು ನೀಡಲು ಆರ್‌ಬಿಐಗೆ ಅನುಕೂಲ ಮಾಡಿಕೊಡುವ ‘ಬ್ಯಾಂಕ್ ನಿಯಂತ್ರಣ ತಿದ್ದುಪಡಿ ಕಾಯ್ದೆ 2017’ನ್ನು ಸಚಿವ ಅರುಣ್ ಜೇಟ್ಲಿ ಮಂಡಿಸಿದರು. ಮಸೂದೆ ಬಗ್ಗೆ ಆಕ್ಷೇಪ ವ್ಯಕ್ತಪ ಡಿಸಿದ, ಟಿಎಂಸಿ ಸದಸ್ಯರಾದ ಸುಗತಾ ರಾಯ್, ಅಪನಗದೀಕರಣ ಬಳಿಕ ಹಣ ಎಣಿಕೆ ಮಾಡಲು ಸಾಧ್ಯವಾಗಿಲ್ಲ. ಅಂಥದ್ದರಲ್ಲಿ, ಸಣ್ಣ ಮತ್ತು ಅತಿ ಸಣ್ಣ ಆರ್ಥಿಕ ವಿಚಾರಗಳ ಬಗ್ಗೆ ಬ್ಯಾಂಕ್ ಆಡಳಿತ ಮಂಡಳಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಆರ್‌ಬಿಐಗೆ ಈ ಬಗ್ಗೆ ಅನುಮತಿಸುವುದು ವ್ಯರ್ಥ ಎಂದಿದ್ದಾರೆ.
1, 2, 10 ರೂ. ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ
1, 2, 10 ರೂ. ನಾಣ್ಯಗಳನ್ನು ಅಂಗಡಿಗಳಲ್ಲಿ ಸ್ವೀಕರಿಸುತ್ತಿಲ್ಲ ಎಂಬ ವಿಚಾರ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದೆ. ಶೂನ್ಯ ವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದ ಜೆಡಿಯು ಸಂಸದ ಅಲಿ ಅನ್ವರ್ ಅನ್ಸಾರಿ ಅವರು, ಅಂಗಡಿಗಳು ಮಾತ್ರವಲ್ಲದೆ, ಕೆಲವೆಡೆ ಬ್ಯಾಂಕುಗಳೂ ಈ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಬಡವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಅಲ್ಲದೇ ಲೇವಡಿ ಮಾಡುತ್ತ, 2ನೇ ಬಾರಿಗೆ ಅಪನಗದೀಕರಣ ನಡೆಸಿದಲ್ಲಿ ನಾಣ್ಯಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದರು.