ನೋಯ್ಡಾ : ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಜೇವರ್‌ನಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ(ಡಿ9) ಮೊದಲ ಫ್ಲೈಟ್ ವ್ಯಾಲಿಡೇಶನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದು ಮುಂದಿನ ವರ್ಷ ವಿಮಾನ ನಿಲ್ದಾಣ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ದಾರಿ ಮಾಡಿಕೊಟ್ಟಿದೆ.
ಇಂಡಿಗೋ ವಿಮಾನ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ ಸಿಬಂದಿಗಳೊಂದಿಗೆ ಆಗಮಿಸಿ ಅಗತ್ಯ ಭದ್ರತಾ ತಪಾಸಣೆಯ ನಂತರ ರನ್‌ವೇಯಲ್ಲಿ ಸುರಕ್ಷಿತವಾಗಿ ಇಳಿಯಿತು.ಈ ವೇಳೆ ಜಲವಂದನೆಯೊಂದಿಗೆ ಸ್ವಾಗತಿಸಲಾಯಿತು.
ನಿಲ್ದಾಣ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದು, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಎರಡನೇ ಪ್ರಮುಖ ವಿಮಾನ ನಿಲ್ದಾಣವಾಗಲಿದೆ.
‘ಇದೊಂದು ಪ್ರತಿಷ್ಠಿತ ಯೋಜನೆಯಾಗಿದ್ದು, ವಿಮಾನದ ಲ್ಯಾಂಡಿಂಗ್ ದೊಡ್ಡ ಸಾಧನೆ’ ಎಂದು ನಾಗರಿಕ ವಿಮಾನಯಾನ ಸಚಿವ ಕಿಂಜಿರಾಪು ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2021 ರಲ್ಲಿ ಜೇವರ್ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.ಯೋಜನೆಯ ಒಟ್ಟು ವಿಸ್ತೀರ್ಣ 1,334 ಹೆಕ್ಟೇರ್ ಆಗಿದ್ದು, ಮೊದಲ ಹಂತದಲ್ಲಿ, ಪ್ರತಿ ವರ್ಷ 1.2 ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುವ ನಿರೀಕ್ಷೆಯಿದೆ. ಈ ಸಂಖ್ಯೆಯು ದಶಕದ ಅಂತ್ಯದ ವೇಳೆಗೆ 3 ಕೋಟಿಗೆ ಮತ್ತು ನಂತರ ಕೆಲವು ವರ್ಷಗಳ ನಂತರ 7 ಕೋಟಿಗೆ ಹೆಚ್ಚಾಗುವ ನಿರೀಕ್ಷೆ ಇರಿಸಲಾಗಿದೆ.
ಸಿಗ್ನಲ್-ಮುಕ್ತ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ವಿಮಾನ ನಿಲ್ದಾಣವು ಗ್ರೇಟರ್ ನೋಯ್ಡಾ, ನೋಯ್ಡಾ ಮತ್ತು ದೆಹಲಿಗೆ ಸಂಪರ್ಕ ಹೊಂದಲಿದೆ.