Advertisement

BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ

03:22 AM Dec 18, 2024 | Team Udayavani |

ಬೆಂಗಳೂರು: ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಮಾಜಿ ಶಾಸಕರ ಬಣ ಸಭೆ ನಡೆಸಿ ಫೆ. 27ರಂದು ದಾವಣಗೆರೆಯಲ್ಲಿ ಭಾರೀ ಸಮಾವೇಶ ನಡೆಸಲು ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ತಾರಕಕ್ಕೆ ಏರಿದೆ.

Advertisement

ವಕ್ಫ್ ಹೋರಾಟದ ರೂಪುರೇಷೆ ಹೆಸರಿನಲ್ಲಿ ಎದುರಾಳಿ ಯತ್ನಾಳ್‌ ಬೆಂಬಲಿಗ ಬಣ ಈಗ ಸುವರ್ಣಸೌಧದ ವಿಪಕ್ಷದ ಮೊಗಸಾಲೆಯಲ್ಲಿ ಸಭೆ ನಡೆಸಿ, ಜನವರಿಯಲ್ಲಿ ಬಳ್ಳಾರಿ ಅಥವಾ ವಿಜಯನಗರದಲ್ಲಿ ಸಮಾವೇಶ ನಡೆಸುವುದಾಗಿ ಘೋಷಿಸುವ ಮೂಲಕ ತಿರುಗೇಟು ನೀಡಿದೆ. ಅಲ್ಲದೆ ದಾವಣಗೆರೆಯಲ್ಲೂ ಭಾರೀ ಸಮಾವೇಶ ನಡೆಸುವುದಾಗಿ ಹೇಳಿದೆ.

ರಮೇಶ್‌ ಜಾರಕಿಹೊಳಿ, ಕುಮಾರ ಬಂಗಾರಪ್ಪ ಮತ್ತಿತರರ ಜತೆಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಸುವರ್ಣ ವಿಧಾನಸೌಧಕ್ಕೆ ಆಗಮಿಸಿ ಅಲ್ಲಿಯೇ ಸಭೆ ನಡೆಸಿದರು. ವಿಜಯನಗರ ಮಾತ್ರವಲ್ಲದೆ ದಾವಣಗೆರೆಯಲ್ಲಿಯೂ ಬೃಹತ್‌ ಸಮಾವೇಶ ನಡೆಸಿ ಜನಶಕ್ತಿಯ ಪ್ರದರ್ಶನ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಹೀಗಾಗಿ ಬಿಜೆಪಿ ಪಾಳಯದ ಗದ್ದಲ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ವರಿಷ್ಠರ ಒಲವು ಯಾರ ಕಡೆಗೆ ಇದೆ ಎಂಬುದೇ ಕಾರ್ಯಕರ್ತರ ಪಾಲಿಗೆ ಬಗೆಹರಿಯದ ಪ್ರಶ್ನೆಯಾಗಿ ಪರಿಣಮಿಸಿದೆ.

ಯತ್ನಾಳ್‌ ಆಕ್ರೋಶ
ಈ ಸಭೆಯ ಬಳಿಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಅವರು ವಿಜಯೇಂದ್ರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಎದುರಿಗೆ ನಮಸ್ಕಾರ ಮಾಡುತ್ತಾರೆ. ಆದರೆ ಒಳಗೊಳಗೆ ಏನು ಮಾಡುತ್ತಾರೋ ಯಾರಿಗೆ ಗೊತ್ತು? ಊಟಕ್ಕೆ ಕರೆದಿದ್ದರು. ಹೋಗುವುದು, ಬಿಡುವುದು ನನ್ನ ವೈಯಕ್ತಿಕ ತೀರ್ಮಾನ. 2ನೇ ಹಂತದ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ.

ಬಳ್ಳಾರಿ ಮತ್ತು ವಿಜಯನಗರದಿಂದ ಹೋರಾಟ ಪ್ರಾರಂಭ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಸಹಿತ ಎಲ್ಲರನ್ನೂ ಕರೆಯುತ್ತೇವೆ. ಬರುವುದಿದ್ದರೆ ಬರುತ್ತಾರೆ, ಇಲ್ಲವಾದರೆ ಇಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ. ಯಡಿಯೂರಪ್ಪ ಹುಟ್ಟುಹಬ್ಬದ ಸಮಾವೇಶ ಮಾಡುವುದಾರೆ ಮಾಡಲಿ. ಆದರೆ ನಾವು ಹುಟ್ಟುಹಬ್ಬ, ಪುಣ್ಯತಿಥಿಯ ಹೆಸರಿನಲ್ಲಿ ಸಮಾವೇಶ ಮಾಡುವುದಿಲ್ಲ. ದಾವಣಗೆರೆಯಲ್ಲಿ ಜನಶಕ್ತಿಯ ಪ್ರದರ್ಶನ ಮಾಡುತ್ತೇವೆ ಎಂದು ಯತ್ನಾಳ್‌ ಸವಾಲು ಹಾಕಿದರು.

Advertisement

ಜಮೀರ್‌ ಮನೆಗೆ ಹೋಗಿ ಬಿರಿಯಾನಿ ತಿಂದಿಲ್ಲ
ಸಚಿವ ಜಮೀರ್‌ ಅಹ್ಮದ್‌ ಭೇಟಿ ಸಂಬಂಧ ಪ್ರತಿಕ್ರಿಯಿಸಿ, ಕ್ಷೇತ್ರದ ಕೆಲಸದ ಸಂಬಂಧ ಸುವರ್ಣ ಸೌಧ ಕಚೇರಿಯಲ್ಲಿ ಭೇಟಿಯಾಗಿದ್ದೇನೆ. ನಾನೇನೂ ಅವರ ಮನೆಗೆ ಹೋಗಿ ಬಿರಿಯಾನಿ ತಿಂದು ಬಂದಿಲ್ಲ. ನಮ್ಮ ಕ್ಷೇತ್ರದಲ್ಲಿ ಮನೆಗಳು ನೀಡಿಲ್ಲ. ಕೆಲವು ಕಡೆ ಹಿಂದೂಗಳಿಗೆ ಅನ್ಯಾಯವಾಗಿದೆ. ಈ ವಿಷಯ ಸಹಿತ ಅಭಿವೃದ್ಧಿ ವಿಚಾರದಲ್ಲಿ ಭೇಟಿಯಾಗಿದ್ದೇವೆ ಎಂದು ಯತ್ನಾಳ್‌ ಸ್ಪಷ್ಟನೆ ನೀಡಿದರು.

ಫ‌ಡ್ನವೀಸ್‌ ಭೇಟಿ ಬಗ್ಗೆ ವಿವರಿಸಿದ ಜಾರಕಿಹೊಳಿ
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಜತೆಗೆ ಯಶಸ್ವಿ ಸಭೆ ನಡೆಸಿದ ಬಗ್ಗೆ ರಮೇಶ್‌ ಜಾರಕಿಹೊಳಿ ವಿವರಣೆ ನೀಡಿದ್ದಾರೆ. ಸುಮಾರು 25 ನಿಮಿಷ ಕಾಲ ಫಡ್ನವೀಸ್‌ ತಮ್ಮ ಅಧಿಕೃತ ನಿವಾಸದಲ್ಲಿ ತಮ್ಮ ತಂಡದ ಜತೆಗೆ ಚರ್ಚೆ ನಡೆಸಿದರು. ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ನೀಡಿದ ವಿವರಣೆ ಇನ್ನಷ್ಟು ಕುತೂಹಲ ಮೂಡಿಸಿದೆ.

ವಿಜಯೇಂದ್ರ ದಿಲ್ಲಿಗೆ ದೌಡು, ವರಿಷ್ಠರಿಗೆ ದೂರು?
ಭಿನ್ನಮತದ ವರದಿಗಳ ಮಧ್ಯೆಯೇ ವಿಜಯೇಂದ್ರ ತುರ್ತಾಗಿ ದಿಲ್ಲಿಗೆ ತೆರಳಿದ್ದಾರೆ. ಅವರು ಪಕ್ಷದ ವರಿಷ್ಠರಿಗೆ ಭಿನ್ನಮತದ ವಿರುದ್ಧ ದೂರು ನೀಡಬಹುದು ಎನ್ನಲಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವುದಕ್ಕೆ ವಿಜಯೇಂದ್ರ ಸಮಯಾವಕಾಶ ಕೋರಿದ್ದಾರೆ.

ಭಿನ್ನರ ಜತೆ ಯೋಗೇಶ್ವರ್‌ ಸಭೆ
ಇದೆಲ್ಲದರ ಮಧ್ಯೆ ಭಿನ್ನರ ತಂಡದ ಜತೆಗೆ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್‌ ಸಭೆ ನಡೆಸಿದ್ದು, ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಮೇಶ್‌ ಜಾರಕಿಹೊಳಿ ಜತೆಗೆ ವಿಪಕ್ಷ ನಾಯಕ ಆರ್‌. ಅಶೋಕ್‌ ಕೊಠಡಿಯಲ್ಲಿ ಈ ಸಭೆ ನಡೆದಿದೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಲಾಗಿದೆ. ಅನಂತರ ಅಶೋಕ್‌ ಕೂಡ ಈ ಸಭೆಗೆ ತೆರಳಿ ನಗೆಚಟಾಕಿ ಹಾರಿಸಿದ್ದಾರೆ. ಆದರೆ ಅಶೋಕ್‌ ಅವರ ಕೊಠಡಿಯಲ್ಲಿ ಭಿನ್ನರ ತಂಡ ಇರುವ ಬಗ್ಗೆ ಮಾಹಿತಿ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊಗಸಾಲೆಯಿಂದ ವಾಪಸ್‌ ಆದರು.

“ವಿಜಯೇಂದ್ರ ಪರ ದಾವಣಗೆರೆಯಲ್ಲಿ ಸಭೆ ನಡೆಸಿದ ಮಾಜಿ ಶಾಸಕರ ಫೋಟೋವನ್ನು ಒಮ್ಮೆ ನೋಡಿ. ಇನ್ನು ನನಗೆ ಯಡಿಯೂರಪ್ಪನವರ ಮೇಲೆ ಗೌರವವಿದೆ. ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಫ‌ಲಿತಾಂಶವನ್ನು ಆಧರಿಸಿ ವಿಜಯೇಂದ್ರ ವಿಷಯದಲ್ಲಿ ವರಿಷ್ಠರು ಒಂದು ತೀರ್ಮಾನಕ್ಕೆ ಬರಲಿ. ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೋ ಅದಕ್ಕೆ ನಾವು ತಲೆಬಾಗುತ್ತೇವೆ.”  – ರಮೇಶ್‌ ಜಾರಕಿಹೊಳಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next