Advertisement

ಲಿಂಗಾಧಾರಿತ ಅಸಮಾನತೆ ಹೋಗಲಾಡಿಸುವುದು ಎಲ್ಲರ ಜವಾಬ್ದಾರಿ

05:29 PM Feb 03, 2021 | Nagendra Trasi |

ವಿಜಯಪುರ: ಸಮಾಜದಲ್ಲಿ ಹೆಣ್ಣು ಮಕ್ಕಳ ಸಂರಕ್ಷಣೆ ಹಾಗೂ ಅವರಿಗೆ ಉನ್ನತ ಶಿಕ್ಷಣ ದೊರೆಯುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ದಾಪುಗಾಲಿಡುತ್ತಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯುವ ಮೂಲಕ ಲಿಂಗಾಧಾರಿತ
ಅಸಮಾನತೆ ಹೋಗಲಾಡಿಸುವಲ್ಲಿ ಸಮಾಜದಲ್ಲಿನ ಎಲ್ಲರೂ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ಜಿಲ್ಲಾ ಕಾನೂನು ಪ್ರಾಧಿಕಾರ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಹೇಳಿದರು.

Advertisement

ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಸಹಯೋಗದಲ್ಲಿ ಬೇಟಿ ಬಚಾವ್‌ ಬೇಟಿ ಫಡಾವೋ ಕಾರ್ಯಕ್ರಮದಡಿ ನಡೆದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಬೇಕು. ಮನಸ್ಸು ಮಾಡಿದರೆ, ಆತ್ಮವಿಶ್ವಾಸದಿಂದ ಆಕೆ ಏನನ್ನಾದರೂ ಮಾಡಬಲ್ಲಳು ಎಂಬುದನ್ನೂ ಸಾಧಿಸಿ ತೋರಿಸಿದ್ದಾಳೆ. ಶಾಲಾ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯ. ಹಾಗೆಯೇ ಆತ್ಮವಿಶ್ವಾಸದಿಂದ ಅಧ್ಯಯನ ನಡೆಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ
ಕೀರ್ತಿ ತರಬೇಕು ಎಂದರು.

ಬೇಟಿ ಬಚಾವೋ ಬೇಟಿ ಫಡಾವೋ ಕಾರ್ಯಕ್ರಮದ ಜಿಲ್ಲಾ ನೋಡಲ್‌ ಅಧಿಕಾರಿ ನಿರ್ಮಲಾ ದೊಡ್ಡಮನಿ ಮಾತನಾಡಿದರು. ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸಲಾದ ಚಿತ್ರಕಲೆ, ರಂಗೋಲಿ, ಕವನ ರಚನೆ, ಘೋಷವಾಕ್ಯ ರಚನೆ ಮುಂತಾದ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ ದಡ್ಡಿ, ಪ್ರೌಢಶಾಲಾ ಮುಖ್ಯಸ್ಥೆ ಎಸ್‌.ಆರ್‌. ಪಾಟೀಲ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next