Advertisement

ಉಡ್ಡಯನ ವಾಹನದ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ

12:19 AM Apr 03, 2023 | Team Udayavani |

ನಾಯಕನಹಟ್ಟಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿಸಿದ ಮರುಬಳಕೆ ಮಾಡಬಹುದಾದ ಉಪಗ್ರಹ ಉಡ್ಡಯನ ವಾಹನದ ಸ್ವಯಂಪ್ರೇರಿತ ಇಳಿಯುವಿಕೆ ಪ್ರಯೋಗ ರವಿವಾರ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರದ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ (ಎಟಿಆರ್‌)ನಲ್ಲಿ ಯಶಸ್ವಿಯಾಗಿ ನೆರವೇರಿದೆ. ಈ ಮೂಲಕ “ಭಾರತದ ಮರುಬಳಕೆಯ ಬಾಹ್ಯಾಕಾಶ ನೌಕೆ’ಯ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಂತಾಗಿದೆ.

Advertisement

ರಾಕೆಟ್‌ ಮತ್ತು ವಿಮಾನದ ಮಿಶ್ರಣದಂತಿರುವ ಬಾಹ್ಯಾಕಾಶ ನೌಕೆಯ ಯಶಸ್ವಿ ಪ್ರಯೋಗದಿಂದ ಇಸ್ರೋಗೆ ಪ್ರತೀಬಾರಿ ರಾಕೆಟ್‌ ವಿನ್ಯಾಸಗೊಳಿಸುವ ಹಣ ಉಳಿತಾಯವಾಗಲಿದೆ. ಇದೇ ಸಾಧನಗಳಿಂದ ಮುಂದಿನ ದಿನಗಳಲ್ಲಿ ಉಪಗ್ರಹ ಉಡಾವಣೆ ಜತೆಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲೂ ಸಾಧ್ಯವಾಗಲಿದೆ.

ಪರೀಕ್ಷೆ ನಡೆದಿದ್ದು ಹೇಗೆ?
ಮೊದಲಿಗೆ ಭಾರತೀಯ ವಾಯುಪಡೆಯ “ಚಿನೋಕ್‌’ ಹೆಲಿಕಾಪ್ಟರ್‌ನ ಕೆಳಭಾಗದಲ್ಲಿ ಮರುಬಳಕೆಯ ರಾಕೆಟ್‌ ಅನ್ನು ಅಳವಡಿಸಲಾಯಿತು. ಬಾಹ್ಯಾಕಾಶ ನೌಕೆಯನ್ನು ಹೊತ್ತ ಈ ಹೆಲಿಕಾಪ್ಟರ್‌ ಸಮುದ್ರ ಮಟ್ಟದಿಂದ ನಾಲ್ಕೂವರೆ ಕಿಲೋ ಮೀಟರ್‌ ಎತ್ತರಕ್ಕೆ ತಲುಪಿದ ಬಳಿಕ, ತಳಭಾಗದಲ್ಲಿ ಅಳವಡಿಸಲಾಗಿದ್ದ ರಾಕೆಟ್‌ ಅನ್ನು ಸ್ವಯಂ ಚಾಲಿತವಾಗಿ ಉಡಾಯಿಸಲಾಯಿತು.

ವಿಶೇಷವೆಂದರೆ, ಇಂಥದ್ದೊಂದು ಪ್ರಯೋಗ ನಡೆದಿದ್ದು ವಿಶ್ವದಲ್ಲಿ ಇದೇ ಮೊದಲು. ಈ ರಾಕೆಟ್‌ ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆಯೇ, ನಿಗದಿತ ಸಮಯದಲ್ಲಿ ಬಂದು ಲ್ಯಾಂಡ್‌ ಆಯಿತು. ಗಾಳಿಯ ವೇಗ, ಸಮುದ್ರ ಮಟ್ಟದಿಂದ ಎತ್ತರ, ಹೆಲಿಕಾಪ್ಟರ್‌ ವೇಗ ಸೇರಿದಂತೆ ಹತ್ತು ಅಂಶಗಳನ್ನು ರಾಕೆಟ್‌ ಉಡಾಯಿಸುವ ಸಂದರ್ಭ ಪ್ರಮುಖವಾಗಿ ಪರಿಗಣಿಸಲಾಯಿತು.

30 ನಿಮಿಷ ನಡೆದ ಪರೀಕ್ಷೆ
ರವಿವಾರ ಬೆಳಗ್ಗೆ 7.10ಕ್ಕೆ ರನ್‌ವೇನಿಂದ ಹೆಲಿಕಾಪ್ಟರ್‌ ಜತೆಗೆ ಹೊರಟಿದ್ದ ರಾಕೆಟ್‌ ಒಂಟಿಯಾಗಿ ಯಾವುದೇ ಸಮಸ್ಯೆಯಿಲ್ಲದೆ 7.40ಕ್ಕೆ ಹಿಂದಿರುಗಿತು. 30 ನಿಮಿಷ ನಡೆದ ಅತ್ಯಂತ ಸೂಕ್ಷ್ಮ ಹಾಗೂ ಜಾಗರೂಕತೆಯ ಪ್ರಯೋಗ ಯಶಸ್ಸು ಕಂಡಿದೆ. 6.5 ಮೀಟರ್‌ ಉದ್ದ, 3.6 ಮೀಟರ್‌ ಅಗಲವನ್ನು ಹೊಂದಿದ್ದ ರಾಕೆಟ್‌-ವಿಮಾನದ ಗುಣ ವಿಶೇಷದ ಈ ಉಡ್ಡಯನ ವಾಹನ ಚೂಪಾದ ಮೂಗಿನಾಕೃತಿ ತುದಿ, ಎರಡು ರೆಕ್ಕೆಗಳು ಹಾಗೂ ಬಾಲಗಳನ್ನು ಹೊಂದಿದೆ. ಸುಮಾರು 100 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈ ಪ್ರಯೋಗದಲ್ಲಿ ವಿಶಾಖಪಟ್ಟಣ ಇಸ್ರೋ ಕೇಂದ್ರದ 700 ತಂತ್ರಜ್ಞರು ಸೇರಿದಂತೆ ಡಿಆರ್‌ಡಿಒ, ಐಐಎಸ್‌ಸಿ ಮತ್ತು ಭಾರತೀಯ ವಾಯುಪಡೆ ಸಿಬಂದಿ ಪಾಲ್ಗೊಂಡಿದ್ದರು.

Advertisement

ವಿಜ್ಞಾನಿಗಳ ಸಂಭ್ರಮ
ಬಿರುಗಾಳಿ ವೇಗದಲ್ಲಿ ಬಂದ ರಾಕೆಟ್‌ ಉಡ್ಡಯನ ವಾಹನ ರನ್‌ವೇ ಪ್ರವೇಶಿಸುತ್ತಿದ್ದಂತೆ ಸಿಬಂದಿ ಸಂಭ್ರಮದಿಂದ ಕುಣಿದಾಡಿದರು. ವಿಜ್ಞಾನಿಗಳು, ತಂತ್ರಜ್ಞರು ಜೋರಾಗಿ ಕಿರುಚುತ್ತಾ, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಅನಂತರ ಪರಸ್ಪರ ಸಿಹಿ ಹಂಚಿದರು. ಮೂರೂವರೆ ಕಿ.ಮೀ ಉದ್ದದ ರನ್‌ವೇಗೆ ಬರುತ್ತಿದ್ದಂತೆ ರಾಕೆಟ್‌ನ ಹಿಂಬದಿಯಲ್ಲಿ ಅಳವಡಿಸಿದ್ದ ಬೃಹತ್‌ ಪ್ಯಾರಾಚೂಟ್‌ ಸ್ವಯಂಚಾಲಿತವಾಗಿ ತೆರೆದುಕೊಂಡಿತು. ರನ್‌ವೇ ಅಂತ್ಯ ತಲುಪುವ ವೇಳೆಗೆ ಪ್ಯಾರಾಚೂಟ್‌ ಸ್ವಯಂಚಾಲಿತವಾಗಿ ತುಂಡಾಯಿತು. ಅನಂತರ ರಾಕೆಟ್‌ ವೇಗ ಗಣನೀಯವಾಗಿ ತಗ್ಗಿ ನಿಧಾನವಾಗಿ ರನ್‌ವೇ ತುದಿಗೆ ತಲುಪಿ ವಿಶ್ರಾಂತ ಸ್ಥಿತಿ ತಲುಪಿತು.

ಇಸ್ರೋ ಇಂತಹ ಕಷ್ಟದ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ. 2016 ಮೇ 23ರಂದು ಶ್ರೀಹರಿಕೋಟಾದಿಂದ ಬಂಗಾಳಕೊಲ್ಲಿಯಲ್ಲಿ ಉಡ್ಡಯನ ವಾಹನ ಇಳಿಯುವ ಪ್ರಯೋಗ ಯಶಸ್ವಿಯಾಗಿತ್ತು. ರವಿವಾರ ಜರಗಿದ ಮೈಲುಗಲ್ಲಿನ ಈ ಘಟನೆಗೆ ಸಾಕ್ಷಿಯಾಗಿದ್ದ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಅವರು ತಂತ್ರಜ್ಞರು ಮತ್ತು ಸಿಬಂದಿಯನ್ನು ಅಭಿನಂದಿಸಿದರು. ಭಾರತೀಯ ವಾಯುಪಡೆ ಪೈಲಟ್‌ಗಳು ಕಳೆದೊಂದು ತಿಂಗಳಿನಿಂದ ಈ ಪ್ರಯೋಗಕ್ಕೆ ಕೈಜೋಡಿಸಿದ್ದರು. ಸ್ಥಳೀಯ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ (ಎಟಿಆರ್‌) ಸಿಬಂದಿ ರನ್‌ವೇ ಮತ್ತು ಡಿಆರ್‌ಡಿಒ ಆವರಣದಲ್ಲಿ ಅಗತ್ಯ ಸೌಲಭ್ಯ ಒದಗಿಸಿದ್ದರು. ಡಾ| ಎಸ್‌. ಉನ್ನಿಕೃಷ್ಣನ್‌, ಎನ್‌. ಶ್ಯಾಂ ಮೋಹನ್‌, ಡಾ| ಜಯಕುಮಾರ್‌, ಮುತ್ತುಪಾಂಡ್ಯನ್‌, ರಾಮಕೃಷ್ಣ ಮತ್ತಿತರರಿದ್ದರು. ಅಹಮದಾಬಾದ್‌, ಬೆಂಗಳೂರು, ದಿಲ್ಲಿ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಯಶಸ್ವಿ ಪ್ರಯೋಗಕ್ಕೆ ಸಾಕ್ಷಿಯಾದರು.

ಕಳೆದ ಕೆಲವು ದಿನಗಳಿಂದ ನಾಯಕನಹಟ್ಟಿ ಸುತ್ತಲಿನ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಹಾರಾಟ ಹೆಚ್ಚಾಗಿತ್ತು. ರಾಕೆಟ್‌ ಹಿಡಿದಿದ್ದ ದೊಡ್ಡ ಗಾತ್ರದ ಹೆಲಿಕಾಪ್ಟರ್‌ ಭಾರೀ ಸದ್ದಿನೊಂದಿಗೆ ಹಾರಾಡುತ್ತಿದ್ದು, ಜನರು ಕುತೂಹಲದಿಂದ ಗಮನಿಸುತ್ತಿದ್ದರು. ಪ್ರತೀದಿನ 7ರಿಂದ 8 ಗಂಟೆಯವರೆಗೆ ಈ ರೀತಿ ಸಿದ್ಧತೆ ಕೈಗೊಳ್ಳಲಾಗಿತ್ತು.

ಎಷ್ಟು ವೆಚ್ಚದ ಯೋಜನೆ? – 100 ಕೋಟಿ ರೂ.
ಬಾಹ್ಯಾಕಾಶ ನೌಕೆಯ ಉದ್ದ – 6.5 ಮೀ.
ಉಡ್ಡಯನ ವಾಹನದ ಅಗಲ – 3.6 ಮೀ.
ಎಷ್ಟು ನಿಮಿಷಗಳ ಪ್ರಯೋಗ? – 30 ನಿಮಿಷ
ಪ್ರಯೋಗದಲ್ಲಿ ಪಾಲ್ಗೊಂಡವರು – 700 ಮಂದಿ

Advertisement

Udayavani is now on Telegram. Click here to join our channel and stay updated with the latest news.

Next