ನವದೆಹಲಿ: ಚಂದ್ರಯಾನ-4ರ ಭಾಗವಾಗಿ ಮುಂದಿನ ತಿಂಗಳ 20ರಂದು ಇಸ್ರೋ ಸ್ಪೇಸ್ ಡಾಕಿಂಗ್ ಪ್ರಯೋಗ (ಸ್ಪೇಸ್ ಡಾಕಿಂಗ್ ಎಕ್ಸ್‌ಪಿರಿಮೆಂಟ್-ಸ್ಪೇಡೆಕ್ಸ್) ನಡೆಸಲಿದೆ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಾಕಷ್ಟು ಚಟುವಟಿಕೆಗಳಲ್ಲಿ ಸಂಸ್ಥೆ ನಿರತವಾಗಲಿದೆ. ಇಸ್ರೋ ಕೈಗೊಳ್ಳಲಿರುವ ಭವಿಷ್ಯದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಸ್ಪೇಸ್‌ಫ್ಲೈಟ್ಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸ್ಪೇಡೆಕ್ಸ್ ಮಹತ್ವದ ಪ್ರಯೋಗವಾಗಲಿದೆ ಎಂದಿದ್ದಾರೆ.
ಈ ಪ್ರಯೋಗ ಚಂದ್ರಯಾನ-4 ಮಿಷನ್‌ನ ಭಾಗವಾಗಿದೆ. ಇದರ ಪೂರ್ವ ಕಾರ್ಯಕ್ರಮವಾಗಿರುವ ಸ್ಪೇಡೆಕ್ಸ್ ಅನ್ನು ಡಿಸೆಂಬರ್ ತಿಂಗಳ ಮಧ್ಯದಲ್ಲಿ ಕೈಗೊಳ್ಳಲಾಗುವುದು. ಅದು ಮಾತ್ರವಲ್ಲದೆ, ಇಸ್ರೋ, ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ರೋಬಾ-3 ಮಿಷನ್ ಅನ್ನು ಲಾಂಚ್ ಮಾಡಲಿದೆ. ಇದಕ್ಕೆ ಪೋಲಾರ್ ಸ್ಯಾಟ್‌ಲೆçಟ್ ಲಾಂಚ್ ವೆಹಿಕಲ್ ಅನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
ಇದು ಕೃತಕ ಗ್ರಹಣವನ್ನು ಸೃಷ್ಟಿಸಲು ಎರಡು ಉಪಗ್ರಹಗಳ ನಡುವೆ ಹಾರುವ ನಿಖರವಾದ ರಚನೆಯನ್ನು ಪ್ರದರ್ಶಿಸುತ್ತದೆ. ಡಿಸೆಂಬರ್ 4ರಂದು ಈ ಮಿಷನ್ ಲಾಂಚ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಪ್ರತಿಕೂಲ ಹವಾಮಾನ ಪರಿಣಾಮ ಒಂದೆರಡು ತಡವಾಗಬಹುದು. ಭಾರತದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-2 ಹೊತ್ತ ಜಿಎಸ್‌ಎಲ್‌ಯ 3ನೇ ಉಡಾವಣೆ ಡಿ.31ಕ್ಕೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.
ಏನಿದು ಸ್ಪೇಡೆಕ್ಸ್?
– ಚಂದ್ರಯಾನ-4 ಮಿಷನ್ ಭಾಗವಾಗಿ ಸ್ಪೇಡೆಕ್ಸ್ ಪ್ರಯೋಗಕ್ಕೆ ಸಿದ್ಧತೆ
– ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಂಬಂಧಿಸಿದ ಮಹತ್ವದ ಪ್ರಯೋಗ
– ಮಾನವರನ್ನು ಒಂದು ಗಗನನೌಕೆಯಿಂದ ಮತ್ತೊಂದಕ್ಕೆ ವರ್ಗಾವಣೆ ಪ್ರಯೋಗ
– ಭೂಮಿಯಿಂದ ಸ್ಯಾಟ್‌ಲೆçಟ್ ಮೂಲಕ 2 ಪ್ರತ್ಯೇಕ ವಿಭಾಗಗಳು ಲಾಂಚ್
– ಬಾಹ್ಯಾಕಾಶದಲ್ಲಿ 2 ವಿಭಾಗ ಒಂದಾಗಿ ಕಾರ್ಯನಿರ್ವಹಣೆಯ ಈ ಪ್ರಯೋಗವಿದು