ಹೊಸದಿಲ್ಲಿ: ಭಾರತದ ಮೇಲೆ ಸ್ಟಾರ್‌ಲಿಂಕ್ ಉಪಗ್ರಹ ಡಿವೈಸ್ ಬಳಕೆ ಮಾಡಲಾಗಿದ್ದು,ಅದರ ಸಾಧನವನ್ನು ಪ್ರಕ್ಷುಬ್ಧ ಮಣಿಪುರದಲ್ಲಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಕ್ಕೆ ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, ಆರೋಪವನ್ನು ನಿರಾಕರಿಸಿದ್ದಾರೆ.
ಭದ್ರತಾ ಪಡೆಗಳು ಇತ್ತೀಚೆಗೆ ಇಂಫಾಲ್ ಪೂರ್ವ ಜಿಲ್ಲೆಯ ಕೀರಾವೊ ಖುನೌನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಕೆಲವು ಇಂಟರ್ನೆಟ್ ಸಾಧನಗಳನ್ನು ವಶಪಡಿಸಿಕೊಂಡಿದ್ದವು.
ಭಾರತೀಯ ಸೇನೆ ಸ್ಪಿಯರ್ ಕಾರ್ಪ್ಸ್ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಗಳ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಧನಗಳಲ್ಲಿ ಒಂದರಲ್ಲಿ “ಸ್ಟಾರ್‌ಲಿಂಕ್ ಲೋಗೋ” ಹೊಂದಿದ್ದನ್ನು ತ್ವರಿತವಾಗಿ ಗಮನಿಸಿದ್ದರು. ಇದು ಗಂಭೀರ ಚರ್ಚೆಗೆ ಕಾರಣವಾಗಿತ್ತು.
‘Starlink ಅನ್ನು ಉಗ್ರರು ಬಳಸುತ್ತಿದ್ದಾರೆ. ಆಶಾದಾಯಕವಾಗಿ, ಎಲಾನ್ ಮಸ್ಕ್ ಇದನ್ನು ಪರಿಶೀಲಿಸಬೇಕು ಮತ್ತು ಈ ತಂತ್ರಜ್ಞಾನದ ದುರುಪಯೋಗವನ್ನು ನಿಯಂತ್ರಿಸಲು ಸಹಾಯ ಮಾಡಬೇಕು” ಎಂದು ಎಕ್ಸ್ ನಲ್ಲಿ ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್ “ಇದು ಸುಳ್ಳು ಆರೋಪ. ಸ್ಟಾರ್‌ಲಿಂಕ್ ಉಪಗ್ರಹ ಕಿರಣಗಳನ್ನು ಭಾರತದ ಮೇಲೆ ಬಳಕೆ ಮಾಡಲಾಗಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಟಲೈಟ್ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಸ್ಟಾರ್‌ಲಿಂಕ್ ಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಪರವಾನಗಿ ಇಲ್ಲ.