ಶ್ರೀಹರಿಕೋಟ : ಭಾರತ ಇಂದು ಗುರುವಾರ ನಸುಕಿನ ವೇಳೆ ಇಲ್ಲಿನ ಉಪಗ್ರಹ ಉಡ್ಡಯನ ಕೇಂದ್ರದಿಂದ INRSS-1I ಸಂಪರ್ಕ ಉಪಗ್ರಹವನ್ನು ISRO ಯಶಸ್ವಿಯಾಗಿ ಹಾರಿಸಿ ಕಕ್ಷೆಯಲ್ಲಿ ಇರಿಸಿತು.
ಕಳೆದ ವರ್ಷ ಆಗಸ್ಟ್ 31ರಂದು ಉಡಾವಣೆಗೊಂಡಿದ್ದ ಐಆರ್‌ಎನ್‌ಎಸ್‌ಎಸ್-1ಎಚ್ ಸಂಪರ್ಕ ಉಪಗ್ರಹವು ವಿಫಲವಾದ ಬಳಿಕದಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡಿರುವ ಅದೇ ಮಾದರಿಯ ಇನ್ನೊಂದು ಸಂಪರ್ಕ ಉಪಗ್ರಹ ಇದಾಗಿದೆ.
1,425 ಕೆಜಿ ತೂಕದ ಈ ಉಪಗ್ರಹವನ್ನು ಪಿಎಸ್‌ಎಲ್‌ವಿ “ಎಕ್ಸ್‌ಎಲ್’ ಮಾದರಿಯ ರಾಕೆಟ್ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಒಯ್ದಿತು.
ಈ ಹಿಂದೆ ಇಂಡಿಯನ್ ರೀಜಿನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಅಥವಾ ಐಆರ್‌ಎನ್‌ಎಸ್‌ಎಸ್ ಎಂದು ಕರೆಯಲ್ಪಡುತ್ತಿದ್ದ ಹೊಸ ಹೆಸರಿನ ಎನ್‌ಎವಿಐಸಿ (ನ್ಯಾವಿಗೇಶನ್ ವಿತ್ ಇಂಡಿಯನ್ ಕಾನ್‌ಸ್ಟಲೇಶನ್) ನಿಜವಾದ ಅರ್ಥದಲ್ಲಿ ಭಾರತೀಯ ಜಿಪಿಎಸ್ ಆಗಿದೆ.
ಈ ಸಂಪರ್ಕ ಉಪಗ್ರಹದ ಯಶಸ್ವೀ ಉಡ್ಡಯನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು “ಪಿಎಸ್‌ಎಲ್‌ವಿ ರಾಕೆಟ್ ನೂತನ ಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿರುವುದು ನನಗೆ ಅತ್ಯಂತ ಸಂತಸ ಉಂಟು ಮಾಡಿದೆ’ ಎಂದು ಹೇಳಿದರು.
1,420 ಕೋಟಿ ರೂ. ವೆಚ್ಚದ ಎನ್‌ಎವಿ ಐಸಿ ಒಟ್ಟು 9 ಉಪಗ್ರಹಗಳನ್ನು ಹೊಂದಿದೆ. ಇವುಗಳಲ್ಲಿ ಏಳು ಕಕ್ಷೆಯಲ್ಲಿದ್ದು ಉಳಿದೆರಡು ಬದಲಿಯಾಗಿ ಬಳಸಲ್ಪಡಲಿವೆ. ಈ ಸಂಪರ್ಕ ಉಪಗ್ರಹ ಪೂರ್ಣ ಪ್ರಮಾಣದಲ್ಲಿ ಬಳಕೆ ಲಭ್ಯವಾಗುವಾಗ ದೇಶದ 1,500 ಕಿ.ಮೀ. ಉದ್ದಗಲದಲ್ಲಿ ಸ್ಯಾಟಲೈಟ್ ಸಂಪರ್ಕ ವ್ಯವಸ್ಥೆ ಬಳಕೆದಾರರಿಗೆ ಪರಿಣಾಮಕಾರಿಯಾಗಿ ದೊರಕಲಿದೆ.