ಗುವಾಹಟಿ: ಹೊಟೇಲ್‌ಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ (ಬೀಫ್) ಸೇವಿಸುವುದನ್ನು ನಿಷೇಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.
ರಾಜ್ಯ ಸರಕಾರ 2021 ರಲ್ಲಿ ಗೋ ರಕ್ಷಣಾ ಕಾಯ್ದೆ ಜಾರಿಗೊಳಿಸಿತ್ತು. ಅದರ ಅನ್ವಯ ಗೋಮಾಂಸ ಸೇವನೆ ನಿಷೇಧಿಸಲಾಗಿದೆ. ಈ ಹಿಂದೆ ದೇವಸ್ಥಾನಗಳ ಬಳಿ ಗೋಮಾಂಸ ತಿನ್ನುವುದನ್ನು ನಿಲ್ಲಿಸುವುದು ಅವರ ನಿರ್ಧಾರವಾಗಿತ್ತು, ಆದರೆ ಈಗ ಇಡೀ ರಾಜ್ಯಕ್ಕೆ ವಿಸ್ತರಿಸಿದ್ದಾರೆ. ಅಸ್ಸಾಂನಲ್ಲಿ ನಾವು ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್‌ನಲ್ಲಿ ಗೋಮಾಂಸ ನೀಡಬಾರದು ಮತ್ತು ಯಾವುದೇ ಸಾರ್ವಜನಿಕ ಸಮಾರಂಭ ಅಥವಾ ಸಾರ್ವಜನಿಕ ಸ್ಥಳದಲ್ಲಿ ನೀಡಬಾರದು ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 2021 ರಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಈ ಮೊದಲು ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಮತ್ತು ದೇವಾಲಯ ಅಥವಾ ಸತ್ರ (ವೈಷ್ಣವ ಮಠ) ದ ಐದು ಕಿಲೋಮೀಟರ್‌ಗಳ ಒಳಗೆ, ದನಗಳ ಹತ್ಯೆ ಮತ್ತು ಗೋಮಾಂಸ ಮಾರಾಟ ನಿಷೇಧಿಸಲಾಗಿತ್ತು.
ಈತನ್ಮಧ್ಯೆ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಶಾಸಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಹಫೀಜ್ ರಫೀಕುಲ್ ಇಸ್ಲಾಂ ಜನರು ಏನು ತಿನ್ನುತ್ತಾರೆ ಅಥವಾ ಧರಿಸುತ್ತಾರೆ ಎಂಬುದನ್ನು ಕ್ಯಾಬಿನೆಟ್ ನಿರ್ಧರಿಸಬಾರದು ಎಂದು ಹೇಳಿದ್ದಾರೆ.
ಗೋಮಾಂಸ ಸಂಪೂರ್ಣ ನಿಷೇಧಿಸಿರುವ ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿವೆ.