ನವದೆಹಲಿ: ಕಾಂಗ್ರೆಸ್ ನ ಸುಳ್ಳುಗಳಿಂದ ಹಲವಾರು ವರ್ಷಗಳ ಕಾಲ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನಗಳನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಡಿ.18) ತಿರುಗೇಟು ನೀಡಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ಆಗ್ರಹಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಎಕ್ಸ್ (ಟ್ವೀಟರ್) ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಹಾದಿಯನ್ನು ಕಾಂಗ್ರೆಸ್ ಪಕ್ಷ ತನ್ನ ಕೊಳಕು ಮನಸ್ಥಿತಿಯಿಂದ ಸಾಧ್ಯವಾದ ಸಂದರ್ಭಗಳೆಲ್ಲಾ ನಾಶಗೊಳಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಅವಮಾನಗೊಳಿಸಿದೆ. ಅಂಬೇಡ್ಕರ್ ಅವರು ಎಸ್ ಸಿ, ಎಸ್ ಟಿ ಸಮುದಾಯದ ಹಕ್ಕುಗಳ ಪ್ರತಿಪಾದಕರೆಂದೇ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಆರ್ ಅಂಬೇಡ್ಕರ್ ಅವರಿಗೆ ಒಂದೆರಡು ಬಾರಿ ಅವಮಾನಿಸಿಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಮಾತ್ರ ನಿರಾಕರಿಸಿಲ್ಲ, ಜೊತೆಗೆ ಎರಡು ಬಾರಿ ಚುನಾವಣೆಯಲ್ಲೂ ಅವರನ್ನು ಸೋಲಿಸಿತ್ತು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಪಾಪದ ಪಟ್ಟಿಯಲ್ಲಿ ಪ್ರತಿಷ್ಠೆಗಾಗಿ ಪಂಡಿತ್ ಜವಾಹರಲಾಲ್ ನೆಹರು ಅವರು ಅಂಬೇಡ್ಕರ್ ವಿರುದ್ಧವೇ ಚುನಾವಣ ಪ್ರಚಾರ ನಡೆಸಿ ಅವರನ್ನು ಸೋಲಿಸಿದ್ದರು. ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲು ಕೂಡಾ ಕಾಂಗ್ರೆಸ್ ನಿರಾಕರಿಸಿತ್ತು ಎಂದು ಮೋದಿ ಟ್ವೀಟ್ ಮೂಲಕ ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲೇ ಎಸ್ ಸಿ, ಎಸ್ ಟಿ ಸಮುದಾಯದ ವಿರುದ್ಧದ ಹ*ತ್ಯಾಕಾಂಡ ನಡೆದಿವೆ. ಹಲವಾರು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಎಸ್ ಸಿ, ಎಸ್ ಟಿ ಸಮುದಾಯದ ಏಳಿಗೆಗೆ ಏನೂ ಮಾಡಿಲ್ಲ ಎಂದು ಪ್ರಧಾನಿ ದೂರಿದರು.
ಅಮಿತ್ ಶಾ ಹೇಳಿದ್ದೇನು?
ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಹೆಸರನ್ನು ಹೇಳಿ ಮಾತನಾಡುವುದು ಕಾಂಗ್ರೆಸ್ ಪಕ್ಷಕ್ಕೆ ಫ್ಯಾಶನ್ ಆಗಿದೆ ಎಂದು ಟೀಕಿಸಿದ್ದರು.
“ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಈಗ ಒಂದು ರೀತಿಯ ಫ್ಯಾಶನ್ ಆಗಿ ಹೋಗಿದೆ. ಒಂದು ವೇಳೆ ಭಗವಂತನ ನಾಮಸ್ಮರಣೆ ಅಷ್ಟೊಂದು ಬಾರಿ ಮಾಡಿದ್ದರೆ ನಿಮಗೆ ಸ್ವರ್ಗದಲ್ಲಾದರೂ ಸ್ಥಾನ ಸಿಗುತ್ತಿತ್ತು ಎಂದು ಶಾ ಕಾಂಗ್ರೆಸ್ ಪಕ್ಷಕ್ಕೆ ತೀಕ್ಷ್ಣ ತಿರುಗೇಟು ನೀಡಿದ್ದರು.
ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದರು.