Advertisement

Hamas ಸುರಂಗಕ್ಕೆ ನೀರಿನ ಪ್ರವಾಹ? ಶಸ್ತ್ರಾಸ್ತ್ರ  ಸಾಗಿಸಲು ಬಳಕೆಯಾಗುತ್ತಿದ್ದ ಸುರಂಗ 

01:11 AM Oct 26, 2023 | Team Udayavani |

ಟೆಲ್‌ ಅವಿವ್‌: ಹಮಾಸ್‌ ಉಗ್ರರ ಅಡಗುತಾಣಗಳ ಮೇಲೆ ಕಣ್ಣಿಟ್ಟಿರುವ ಇಸ್ರೇಲ್‌, ಈಗ ಅವರು ಶಸ್ತ್ರಾಸ್ತ್ರ ಸಾಗಿಸಲು ನಿರ್ಮಿಸಿಕೊಂಡಿದ್ದ ಸುರಂಗಗಳನ್ನು ನಾಶ ಮಾಡಲು ಮುಂದಾಗಿದೆ. ಒಂದು ವಾರದಿಂದ ಭೂಸೇನೆ ಕಡೆಯಿಂದ ದಾಳಿ ನಡೆಸಲು ಸಿದ್ಧತೆ ನಡೆಸಿರುವ ಸರಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Advertisement

ಈ ಮೊದಲೇ ವರದಿಯಾಗಿದ್ದಂತೆ ಇರಾನ್‌, ಲೆಬೆನಾನ್‌ಗಳಿಂದ ಹಮಾಸ್‌ ಉಗ್ರರಿಗೆ ಸುರಂಗದ ಮೂಲಕವೇ ಶಸ್ತ್ರಾಸ್ತ್ರಗಳು ಸರಬರಾಜಾಗಿವೆ. ವಿಶೇಷವೆಂದರೆ, ಗಾಜಾ ಪಟ್ಟಿಯನ್ನು ಪ್ಯಾಲೆಸ್ತೀನ್‌ಗೆ ಬಿಟ್ಟುಕೊಟ್ಟಿದ್ದರೂ ಭದ್ರತೆ ಹೊಣೆಯನ್ನು ಸಂಪೂರ್ಣವಾಗಿ ಇಸ್ರೇಲ್‌ ದೇಶವೇ ಹೊಂದಿತ್ತು. ಆದರೂ ಅ.7ರಂದು ದಾಳಿಗೆ ಹಮಾಸ್‌ ಉಗ್ರರು ಶಸ್ತ್ರಾಸ್ತ್ರ ತಂದದ್ದು ಎಲ್ಲಿಂದ ಎಂಬ ಬಗ್ಗೆ ಅಚ್ಚರಿ ಮೂಡಿತ್ತು.

ಸುರಂಗಗಳಿಗೆ ನೀರು
ಮೂಲಗಳ ಪ್ರಕಾರ, ಇಸ್ರೇಲ್‌ ಸರಕಾರ ಮತ್ತು ಸೇನೆಯು ಸುರಂಗಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸ ಮಾಡಲು ಸಿದ್ಧತೆ ನಡೆಸಿದೆ.  ಉಗ್ರರು ಇಸ್ರೇಲ್‌ಗೆ ನುಗ್ಗಿ, ನಾಗರಿಕರನ್ನು ಅಪಹರಿಸಿ ಕೊಂಡೊಯ್ದು ಇದೇ ಸುರಂಗಗಳಲ್ಲಿ  ಇರಿಸಿಕೊಂಡಿದ್ದಾರೆ. ಇವರು ಒತ್ತೆಯಾಳಾಗಿ ಇರುವವರೆಗೆ ಇಸ್ರೇಲ್‌ ತಮ್ಮ ಮೇಲೆ ದಾಳಿ ಮಾಡುವುದಿಲ್ಲ ಎಂಬ ನಂಬಿಕೆ ಉಗ್ರರದ್ದು. ಆದರೆ ಇಸ್ರೇಲ್‌ ಬೇರೆಯೇ ಚಿಂತನೆ ನಡೆಸಿದ್ದು, ತಮ್ಮ ನಾಗರಿಕರನ್ನು ಬಲಿ ಕೊಟ್ಟಾದರೂ ಸುರಂಗಗಳನ್ನು ನಾಶ ಮಾಡಲೇಬೇಕು ಎಂದು ಪಣ ತೊಟ್ಟಿದೆ. ಹೀಗಾಗಿ,  ಸುರಂಗಗಳಿಗೆ ನೀರು ತುಂಬಿಸಲು ಅದು ಮುಂದಾಗಿದೆ.

ಅಪಾರ ಶಸ್ತ್ರಾಸ್ತ್ರ ಸಂಗ್ರಹಿಸಿ ದಾಳಿ
ಸುರಂಗದ ಮೂಲಕ ಬಹಳಷ್ಟು ದಿನಗಳ ಕಾಲ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ. ಬಳಿಕವಷ್ಟೇ ಅ.7ರಂದು ಪೂರ್ಣ ಮಟ್ಟದಲ್ಲಿ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದಾರೆ.

200ಕ್ಕಿಂತ ಹೆಚ್ಚು ಒತ್ತೆಯಾಳುಗಳು
ಈ ಸುರಂಗಗಳಲ್ಲಿ ಇಸ್ರೇಲ್‌ನ ಸುಮಾರು 200ಕ್ಕಿಂತ ಹೆಚ್ಚು ಒತ್ತೆಯಾಳುಗಳಿದ್ದಾರೆ ಎಂಬುದು ಅಮೆರಿಕ ಮೂಲದ ಪತ್ರಕರ್ತ ಹರ್ಷ್‌ ನೀಡಿರುವ ಮಾಹಿತಿ. ಸದ್ಯ ಈ ಒತ್ತೆಯಾಳುಗಳ ಬಿಡುಗಡೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆಗಳಾಗುತ್ತಿವೆ. ಒಂದು ವೇಳೆ ಇದು ತಡವಾದರೂ, ಇಸ್ರೇಲ್‌ ದಾಳಿ ನಡೆಸಬಹುದು ಎಂದು ಅವರೇ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next