ಡೆಹರಾಡೂನ್: ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಬದರಿನಾಥ ಯಾತ್ರೆಗೆ ಏಕೈಕ ಮಾರ್ಗವೇ ಲಭ್ಯವಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಾರ್ಡರ್ ರೋಡ್ ಆರ್ಗನೈಸೇಷನ್ ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಯುಎಸ್‌ಡಿಎಂಎ)ಮಾಹಿತಿ ನೀಡಿದೆ.
ಜೋಶಿಮಠದ ಮೂಲಕ ತೆರಳುವ ಮಾರ್ಗ ಭೂಕುಸಿತದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕಷ್ಟ ಸಾಧ್ಯ ಎಂದು ಅಂದಾಜು ಮಾಡಲಾಗಿದೆ.
ಜೋಶಿಮಠಕ್ಕೆ 9 ಕಿ.ಮೀ. ದೂರದಲ್ಲಿ ಬಿಆರ್‌ಒ ಹೇಲಾಂಗ್ ಬೈಪಾಸ್ ಯೋಜನೆಯಡಿ ರಸ್ತೆ ನಿರ್ಮಿಸುತ್ತಿದೆ. ಅದು ಮುಕ್ತಾಯಗೊಳ್ಳಲು ಎರಡೂವರೆ ವರ್ಷದ ಬೇಕಾಗುವ ಸಾಧ್ಯತೆ ಇದೆ.
ಪ್ರಸ್ತುತ ಜೋಶಿಮಠದಲ್ಲಿ ಭೂಕುಸಿತವಾಗಿರುವುದರಿಂದ ಈ ರಸ್ತೆ ನಿರ್ಮಾಣವನ್ನೂ ನಿಲ್ಲಿಸಲಾಗಿದೆ. ಮೇನಲ್ಲಿ ಮತ್ತೆ ಬದರಿನಾಥ ಕ್ಷೇತ್ರ ತೆರೆಯಲಿದೆ. ಆ ಅವಧಿಯ ಒಳಗೆ (ನಾಲ್ಕು ತಿಂಗಳೊಳಗೆ) ರಸ್ತೆ ನಿರ್ಮಾಣ ಮುಗಿಸುವುದು ಕಷ್ಟ ಎಂದು ಯುಎಸ್‌ಡಿಎಂಎಯ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.
2022ರ ಸೆಪ್ಟೆಂಬರ್‌ನಿಂದ ಹೇಲಾಂಗ್ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅದಕ್ಕೆ ಸ್ಥಳಿಯರ ವಿರೋಧವಿದೆ. ಇದು ಪರ್ವತವನ್ನು ಕಡಿದು ಮಾಡುವ ಮಾರ್ಗ. ಇದರ ನಿರ್ಮಾಣದಿಂದ ಬೆಟ್ಟಗುಡ್ಡ ಪ್ರದೇಶದ ಅಡಿಪಾಯವೇ ದುರ್ಬಲವಾಗುತ್ತದೆ ಎನ್ನುವುದು ಜನರ ಅಭಿಮತ. ಸದ್ಯ ಈ ಮಾರ್ಗ ನಿರ್ಮಾಣ ನಿಲ್ಲಿಸುವ ಸಾಧ್ಯತೆಯಿಲ್ಲ. ಜೋಷಿಮಠದ ಮೂಲಕ ತೆರಳಿದರೆ ಅಪಾಯವಿಲ್ಲ ಎಂದು ಯುಎಸ್‌ಡಿಎಂಎ ಭರವಸೆ ನೀಡಿದೆ.