Advertisement

Mangaluru: ಜಂತುಹುಳ ಕಾಟ; ಇಂದು ಶಾಲೆಗಳಲ್ಲಿ ಮಾತ್ರೆ ವಿತರಣೆ

12:57 PM Dec 09, 2024 | Team Udayavani |

ಮಹಾನಗರ: ಮಕ್ಕಳನ್ನು ಕಾಡುವ ಜಂತುಹುಳ ಸಮಸ್ಯೆ ನಿವಾರಣೆಗಾಗಿ 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ನೀಡುವ ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಇಲಾಖೆ ವತಿಯಿಂದ ಡಿ.9ರಂದು (ಇಂದು) ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಜಂತು ಹುಳ ನಿವಾರಣೆ ದಿನದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Advertisement

1ರಿಂದ 19 ವರ್ಷದೊಳಗಿನವರಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದ ರಿಂದ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ/ಕಾಲೇಜುಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಜಂತುಹುಳ ನಿವಾ ರಣಾ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜಂತುಹುಳ ಮಾತ್ರೆ ಪಡೆಯದೆ ಬಾಕಿ ಉಳಿಯುವ ಮಕ್ಕಳಿಗೆ ಡಿ. 16ರ ಮಾಪ್‌ಅಪ್‌ ದಿನದಂದು ಮಾತ್ರೆ ನೀಡಲಾಗುತ್ತದೆ. ಅಂಗನವಾಡಿಗೆ ದಾಖಲಾಗದ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆ/ಅಂಗನವಾಡಿ ಕಾರ್ಯಕರ್ತೆ/ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮಾತ್ರೆ ನೀಡಲಿದ್ದಾರೆ.

ಇಂದು ಉದ್ಘಾಟನೆ
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಡಿ. 9ರಂದು ಬೆಳಗ್ಗೆ 9.30 ಉರ್ವ ಗಾಂಧಿ ನಗರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ.

ಯಾವ ರೀತಿಯ ಮಾತ್ರೆ?
ಜಂತುಹುಳ ನಿವಾರಣೆಗೆ ವಿಶ್ವ ಸಂಸ್ಥೆಯು ಪ್ರಮಾಣೀಕರಿಸಿದ ಆಲ್ಬೆಂಡಝೋಲ್‌ 400 ಮಿ.ಗ್ರಾಂ. ಮಾತ್ರೆ ದೊರೆಯುತ್ತದೆ. ಇದು ಚೀಪುವ ಮಾತ್ರೆಯಾಗಿದ್ದು, ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ನೀಡಲಾಗುತ್ತದೆ. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2ರಿಂದ 19 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆಯನ್ನು ನೀಡಲಾಗುತ್ತದೆ.

ಜಂತು ಹುಳು ಹರಡುವುದು ಹೇಗೆ?
ಬಯಲಿನಲ್ಲಿ ಬರಿಕಾಲಿನಲ್ಲಿ ಆಟವಾಡುವುದು, ಕೈಗಳನ್ನು ತೊಳೆಯದೇ ಆಹಾರ ಸೇವಿಸುವುದು, ಬಯಲಿನಲ್ಲಿ ಮಲ ವಿಸರ್ಜನೆ, ಶೌಚಾಲಯ ಬಳಸಿದ ಅನಂತರ ಕೈಗಳನ್ನು ಸರಿಯಾಗಿ ತೊಳೆಯದಿರುವುದು, ತರಕಾರಿ, ಹಣ್ಣುಹಂಪಲುಗಳನ್ನು ತೊಳೆಯದೇ ಸೇವಿಸುವುದು, ಆಹಾರ ಪದಾರ್ಥಗಳನ್ನು ತೆರೆದಿಡುವುದರಿಂದ ಜಂತು ಹುಳು ಹರಡುತ್ತದೆ.

Advertisement

ಜಂತುಹುಳು ಭಾದೆಯ ಲಕ್ಷಣಗಳು
ಜಂತುಹುಳ ಮನುಷ್ಯನ ಕರುಳಿನಿಂದ ಆಹಾರವನ್ನು ಪಡೆದು ಜೀವಿಸುವ ಉಪಜೀವಿ. ತೀವ್ರ ಜಂತುಹುಳ ಬಾಧೆಯಿಂದಾಗಿ ಹೊಟ್ಟೆನೋವು, ಬೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಜಂತುಹುಳ ರಕ್ತವನ್ನು ಹೀರುವುದರಿಂದ ಮಕ್ಕಳಲ್ಲಿ ರಕ್ತಹೀನತೆ ಉಂಟಾಗುತ್ತದೆ. ಪೌಷ್ಟಿಕಾಂಶಗಳನ್ನು ಹೀರುವುದರಿಂದ ಅಪೌಷ್ಟಿಕತೆ ಉಂಟಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next