Advertisement

ಸ್ಯಾಂಡಲ್‌ವುಡ್‌ನ‌ಲ್ಲಿ ಐಪಿಎಲ್‌ ಮಾದರಿ ಕ್ರಿಕೆಟ್‌

05:53 PM Mar 03, 2018 | |

ಚಿತ್ರರಂಗದಲ್ಲಿ ಕ್ರಿಕೆಟ್‌ ಅಂದಾಕ್ಷಣ ಥಟ್ಟನೆ ನೆನಪಾಗೋದೇ ಸುದೀಪ್‌. ಈಗಾಗಲೇ ಸಿಸಿಎಲ್‌ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿರುವ ಸುದೀಪ್‌ ಈಗ ಸಿಸಿಎಲ್‌ ಮತ್ತು ಕೆಪಿಎಲ್‌ ಮಾದರಿಯಲ್ಲೇ ಇನ್ನೊಂದು ಹೊಸ ಕ್ರಿಕೆಟ್‌ ಲೀಗ್‌ ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಹೌದು, ಅವರು ಅದಕ್ಕೆ ಇಟ್ಟಿರುವ ಹೆಸರು “ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್‌ ಕಪ್‌). ಈ ಹೆಸರಿನಡಿ, ಹೊಸದೊಂದು ಕ್ರಿಕೆಟ್‌ ಲೀಗ್‌ ಆಯೋಜಿಸಲು ಸುದೀಪ್‌ ಮತ್ತು ತಂಡ ಎಲ್ಲಾ ತಯಾರಿ ಮಾಡಿಕೊಂಡಿದೆ.

Advertisement

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸುದೀಪ್‌, “ಈ ಕೆಸಿಸಿ ಟಿ-10′ ವಿಶೇಷ ಅಂದರೆ, ಇಲ್ಲಿ ಸಿಸಿಎಲ್‌ ಮತ್ತು ಕೆಪಿಎಲ್‌ನಲ್ಲಿ ಆಡಿದವರೂ ಪಾಲ್ಗೊಳ್ಳುತ್ತಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ ಇಟ್ಟುಕೊಂಡಿರುವವರು, ಚೆನ್ನಾಗಿ ಆಡುವವರನ್ನು ಗುರುತಿಸಿ, ಅವರನ್ನೆಲ್ಲ ಒಂದು ತಂಡದಲ್ಲಿ ಸೇರಿಸಿಕೊಂಡು ಆಟ ಆಡಿಸುವ ಯೋಚನೆ ಇದೆ. ಇದು “ಟಿ-20′ ಪಂದ್ಯಾವಳಿಯಲ್ಲ. ಬದಲಾಗಿ ಟಿ-10 ಪಂದ್ಯಾವಳಿ. ಅಂದರೆ, ಇದು ಹತ್ತು ಓವರ್‌ಗಳ ನಿಯಮಿತ ಪಂದ್ಯ.

ಈ ಕೆಸಿಸಿ ಟಿ-10 ಲೀಗ್‌ನಲ್ಲಿ ಆರು ತಂಡಗಳು ಇರಲಿವೆ. ಪ್ರತಿ ತಂಡದಲ್ಲೂ 12 ಜನ ಆಟಗಾರರು ಇರಲಿದ್ದಾರೆ. ಪ್ರತಿ ತಂಡದಲ್ಲಿ ಒಬ್ಬರು ಸ್ಟಾರ್‌ ಮಾತ್ರ ಇರಲಿದ್ದು, ಒಂದೊಂದು ತಂಡದಲ್ಲೂ ಸಿಸಿಎಲ್‌ ಆಡಿರುವ ಮೂವರು ಆಟಗಾರರು ಇರಲಿದ್ದಾರೆ. ಅವರನ್ನು ಲಕ್ಕಿ ಡ್ರಾ ಮೂಲಕ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು, ಕರ್ನಾಟಕ ರಾಜ್ಯ ಕ್ರಿಕೆಟ್‌ ತಂಡದಿಮದ ಪ್ರತಿ ತಂಡದಲ್ಲಿ ಇಬ್ಬರು ಆಟಗಾರರನ್ನೂ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವರನ್ನೂ ಲಕ್ಕಿ ಡ್ರಾ ಮೂಲಕ ಮಾಡಲಾಗುವುದು’ ಎಂದು ವಿವರ ಕೊಟ್ಟರು.

“ಈ ಲೀಗ್‌ನ ಪ್ರತಿ ತಂಡಕ್ಕೂ ಒಬ್ಬ ಮಾಲೀಕರು ಇರಲಿದ್ದಾರೆ. ಆ ತಂಡದಲ್ಲಿ ಕಲಾವಿದರು, ಬರಹಗಾರರು, ತಂತ್ರಜ್ಞರು, ಮಾಧ್ಯಮದವರು ಕೂಡ ಆಡಬಹುದು. ಅವರನ್ನೆಲ್ಲಾ ಮುಂಚಿತವಾಗಿ ಆಯ್ಕೆ ಮಾಡಿದ ಬಳಿಕ ಆಯಾ ತಂಡವನ್ನು ಅನೌನ್ಸ್‌ ಮಾಡಲಾಗುವುದು. ಈ ಕ್ರಿಕೆಟ್‌ ಲೀಗ್‌ನ ಆಂತರಿಕ ಸಮಿತಿಯ ಮೇಲ್ವಿಚಾರಕರಾಗಿ ನಿರ್ಮಾಪಕ ಜಾಕ್‌ ಮಂಜು, ಕೆ.ಪಿ.ಶ್ರೀಕಾಂತ್‌, ನಿರ್ದೇಶಕ ಕೃಷ್ಣ, ನಂದಕಿಶೋರ್‌, ಇಂದ್ರಜಿತ್‌ ಲಂಕೇಶ್‌, ಪತ್ರಕರ್ತ ಸದಾಶಿವ ಶೆಣೈ ಇರಲಿದ್ದಾರೆ.

ಇವರೆಲ್ಲರೂ ಒಂದೊಂದು ತಂಡದ ಮಾಲೀಕರಾಗಿಯೂ ಇರಲಿದ್ದಾರೆ. ಇನ್ನುಳಿದಂತೆ ಅರ್ಜುನ್‌ ಜನ್ಯ, ಸೂರಪ್ಪಬಾಬು, ಶೇಖರ್‌ ಚಂದ್ರ, ನಾಗೇಂದ್ರ ಪ್ರಸಾದ್‌, ಡಿಫ‌ರೆಂಟ್‌ ಡ್ಯಾನಿ, ಇಮ್ರಾನ್‌ ಸರ್ದಾರಿಯಾ ಮತ್ತು ಕೆಂಪರಾಜು ಅವರನ್ನ ಪರಾಮರ್ಶೆ ಸಮಿತಿಗೆ ಆಯ್ಕೆ ಮಾಡಿದರೆ, ಶಿಸ್ತಿನ ಸಮಿತಿಯಲ್ಲಿ ರಾಜೇಂದ್ರ ಸಿಂಗ್‌ ಬಾಬು ತಂಡ ಕೆಲಸ ಮಾಡಲಿದೆ’ ಎಂದು ಹೇಳಿದರು ಸುದೀಪ್‌.

Advertisement

“ಏಪ್ರಿಲ್‌ 7 ಮತ್ತು 8 ರ ಶನಿವಾರ ಮತ್ತು ಭಾನುವಾರ ಈ ಲೀಗ್‌ಗೆ ಚಾಲನೆ ಸಿಗಲಿದೆ. ಅದಕ್ಕೂ ಮುನ್ನ, ಮಾರ್ಚ್‌ 10 ರಂದು ಒಂದು ಈವೆಂಟ್‌ ನಡೆಸಿ, ಅಲ್ಲಿ ಲಕ್ಕಿ ಡ್ರಾಪ್‌ ಮೂಲಕ ತಂಡದ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಎಲ್ಲವೂ ಪಾರದರ್ಶಕವಾಗಿರಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಈ ಲೀಗ್‌ನಲ್ಲೂ 21 ಕ್ಯಾಮೆರಾಗಳು ಕೆಲಸ ಮಾಡಲಿವೆ ಎಂದು ಹೇಳಿದ ಸುದೀಪ್‌, ಇಲ್ಲಿ ಬೇರೇನೂ ಉದ್ದೇಶವಿಲ್ಲ.

ಈ ಮೂಲಕವಾದರೂ ಚಿತ್ರರಂಗದಲ್ಲಿ ದುಡಿಯುವ ಎಲ್ಲರೂ ಒಂದೆಡೆ ಸೇರಿ, ಮನರಂಜನೆ ಮೂಲಕ ಆಟವಾಡಬಹುದು ಎಂಬುದಷ್ಟೇ. ಮುಂಬರುವ ದಿನಗಳಲ್ಲಿ ಈ ಕೆಸಿಸಿ ಟಿ-10 ಲೀಗ್‌ ದೊಡ್ಡ ಮಟ್ಟದಲ್ಲೆ ನಡೆಯುವಂತಾಗಬೇಕೆಂಬ ಆಸೆ ನಮ್ಮದು. ನಾನಿಲ್ಲಿ ಕೇವಲ ಈ ಕೂಟದ ಮಾರ್ಗದರ್ಶಿಯಾಗಿಯೂ, ಒಂದು ತಂಡದ ನಾಯಕರಾಗಿಯೂ ಇರುವುದಾಗಿ’ ಹೇಳಿ ಸುಮ್ಮನಾದರು ಸುದೀಪ್‌.

* ಟೂರ್ನಿಯ ಹೆಸರು  ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್‌ ಕಪ್‌)
* ಇದು “ಟಿ-20′ ಪಂದ್ಯಾವಳಿಯಲ್ಲ. ಬದಲಾಗಿ ಟಿ-10 ಪಂದ್ಯಾವಳಿ
* ಇದು ಹತ್ತು ಓವರ್‌ಗಳ ನಿಯಮಿತ ಪಂದ್ಯಾವಳಿ
* ಈ ಟೂರ್ನಿಯಲ್ಲಿ ಆರು ತಂಡಗಳು ಇರಲಿದ್ದು, ಪ್ರತಿ ತಂಡದಲ್ಲೂ 12 ಜನ ಆಟಗಾರರು
* ಒಂದೊಂದು ತಂಡದಲ್ಲೂ ಸಿಸಿಎಲ್‌, ಕೆಪಿಎಲ್‌ ಆಡಿರುವ ಮೂವರು ಆಟಗಾರರು
* ಮೇಲ್ವಿಚಾರಕರಾಗಿ ಜಾಕ್‌ಮಂಜು, ಕೆ.ಪಿ.ಶ್ರೀಕಾಂತ್‌, ಕೃಷ್ಣ, ನಂದಕಿಶೋರ್‌, ಇಂದ್ರಜಿತ್‌ ಲಂಕೇಶ್‌
* ಏಪ್ರಿಲ್‌ 7 ಮತ್ತು 8 ರ ಶನಿವಾರ ಮತ್ತು ಭಾನುವಾರ ಈ ಲೀಗ್‌ಗೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next