ಮುಂಬಯಿ : ಐಪಿಎಲ್ ಸೀಸನ್ 14 ರ ಎರಡನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮೇಲಾಟದಲ್ಲಿ ಡೆಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಮುಂಬಯಿ ವಾಂಖೇಡ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಅನುಭವಿ ಕಪ್ತಾನ ಧೋನಿ ವಿರುದ್ಧ ಡೆಲ್ಲಿ ತಂಡದ ಹೊಸ ನಾಯಕ ಪಂತ್ ತನ್ನ ತಂಡವನ್ನು ಬಲಿಷ್ಠ ಚೆನ್ನೈ ಎದುರು ಕಣಕ್ಕಿಳಿಸಲಿದ್ದಾರೆ. ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿದೆ.
ಧೋನಿ ಐಪಿಎಲ್‌ನ ಯಶಸ್ವಿ ನಾಯಕ ರಲ್ಲೊಬ್ಬರು. ಆರಂಭದಿಂದಲೂ “ಚೆನ್ನೈ ಮನೆ’ಯಲ್ಲೇ ಉಳಿದಿರುವ ಅವರು ತಂಡವನ್ನು 3 ಸಲ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇನ್ನೊಂದೆಡೆ ರಿಷಭ್ ಪಂತ್ ಪಾಲಿಗೆ ಇದು ಮೊದಲ ನಾಯಕತ್ವದ ಯೋಗ. ಶ್ರೇಯಸ್ ಅಯ್ಯರ್ ಗಾಯಾಳಾಗಿ ಹೊರಗುಳಿದ ಕಾರಣ ತಂಡದ ನೇತೃತ್ವ ಪಂತ್ ಹೆಗಲೇರಿತು. ಇಲ್ಲಿ ಇನ್ನಷ್ಟು ಮಂದಿ ರೇಸ್‌ನಲ್ಲಿದ್ದರೂ ಫ್ರಾಂಚೈಸಿ ಪಂತ್ ಮೇಲೆ ವಿಶೇಷ ನಂಬಿಕೆ ಇರಿಸಿದೆ. ಯಶಸ್ವಿಯಾದರೆ ಪಂತ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನಾಗಿ ರೂಪಿಸುವುದು ಇಲ್ಲಿನ ಲಾಜಿಕ್ ಆಗಿರಬಹುದು.
ಇತ್ತಂಡಗಳ ತದ್ವಿರುದ್ಧ ಸಾಧನೆ
ಡೆಲ್ಲಿ ಕ್ಯಾಪಿಟಲ್ಸ್ 2020ರ ರನ್ನರ್ ಅಪ್ ತಂಡ. ಐಪಿಎಲ್ ಇತಿಹಾಸದಲ್ಲೇ ಡೆಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಮೊದಲ ನಿದರ್ಶನ ಇದಾಗಿತ್ತು. ಆದರೆ ಮುಂಬೈ ವಿರುದ್ಧ ಜೋಶ್ ತೋರುವಲ್ಲಿ ವಿಫಲವಾಯಿತು. ಈ ಬಾರಿ ಇನ್ನೂ ಒಂದು ಮೆಟ್ಟಿಲು ಮೇಲೇರುವುದು ಡೆಲ್ಲಿಯ ಯೋಜನೆ.
Related Articles
2020ರ ಫಲಿತಾಂಶವನ್ನು ಉಲ್ಲೇಖೀಸಿ ಹೇಳುವುದಾದರೆ ಚೆನ್ನೈನದ್ದು ಡೆಲ್ಲಿಗೆ ವಿರುದ್ಧವಾದ ನಿರ್ವಹಣೆ. ಧೋನಿ ಪಡೆ ಮೊದಲ ಸಲ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿ 7ನೇ ಸ್ಥಾನಕ್ಕೆ ಕುಸಿದಿತ್ತು. ಬಹಳ ಬೇಗನೇ ಕೂಟದಿಂದ ನಿರ್ಗಮಿಸಿದ್ದು ಧೋನಿ ಅಭಿಮಾನಿಗಳ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು. ಈ ಬಾರಿ ತಂಡಕ್ಕೆ ಇಂಥ ಸ್ಥಿತಿ ಮರುಕಳಿಸದಂತೆ ಮಾಡುವ ಅತ್ಯಂತ ಮಹತ್ವದ ಜವಾಬ್ದಾರಿ “ಕೂಲ್ ಕ್ಯಾಪ್ಟನ್’ ಮೇಲಿದೆ.
ಡೆಲ್ಲಿಗೆ ಬ್ಯಾಟಿಂಗ್ ಬಲ
ಡೆಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡ. ಕಳೆದ ಸಲ 600 ರನ್ ಪೇರಿಸಿದ ಧವನ್, ವಿಜಯ್ ಹಜಾರೆಯಲ್ಲಿ 800 ರನ್ ಬಾರಿಸಿದ ಪೃಥ್ವಿ ಶಾ, ರಹಾನೆ, ಸ್ಮಿತ್, ಪಂತ್ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿದ್ದಾರೆ. ಸ್ಟೋಯಿನಿಸ್, ಹೆಟ್‌ಮೈರ್, ಬಿಲ್ಲಿಂಗ್ಸ್ ವಿದೇಶಿ ಹಿಟ್ಟರ್.
ಬೌಲಿಂಗ್ ವಿಭಾಗದಲ್ಲಿ ಕಳೆದ ಸಲದ ಹೀರೋಗಳಾದ ರಬಾಡ-ನೋರ್ಜೆ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಆದರೂ ತಂಡದ ಪೇಸ್ ಬ್ಯಾಟರಿ ವೀಕ್ ಆಗಿಲ್ಲ. ಇಶಾಂತ್, ಉಮೇಶ್ ಯಾದವ್, ವೋಕ್ಸ್ ಇದ್ದಾರೆ. ಸ್ಪಿನ್ ವಿಭಾಗ ಭಾರತದ ತ್ರಿವಳಿಗಳಾದ ಅಶ್ವಿನ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ ಅವರಿಂದ ವೈವಿಧ್ಯಮಯವಾಗಿದೆ. ಆದರೆ ಕೊರೊನಾ ಸೋಂಕಿಗೆ ಒಳಗಾಗಿರುವ ಪಟೇಲ್ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ.
ರೈನಾ ಪುನರಾಗಮನ
ಚೆನ್ನೈ ತಂಡದ 2020ರ ವೈಫಲ್ಯಕ್ಕೆ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅನುಪಸ್ಥಿತಿ ಕೂಡ ಒಂದು ಕಾರಣ. ಈ ಬಾರಿ ರೈನಾ ಆಗಮನದಿಂದ ಟಾಪ್ ಆರ್ಡರ್ ಹೆಚ್ಚು ಶಕ್ತಿಶಾಲಿಯಾಗಿದೆ. ರಾಬಿನ್ ಉತ್ತಪ್ಪ ಮೊದಲ ಸಲ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರವೀಂದ್ರ ಜಡೇಜ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಸಜ್ಜಾಗಿರುವುದು ಚೆನ್ನೈ ಆತ್ಮವಿಶ್ವಾಸವನ್ನು ಹೊಂದಿದೆ. ಜತೆಗೆ 9 ಕೋಟಿ ರೂ. ಬೆಲೆಬಾಳುವ ಕರ್ನಾಟಕದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಕೆ. ಗೌತಮ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ತಂಡಗಳಲ್ಲಿ ಯಾರ್ಯಾರಿದ್ದಾರೆ :
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕವಾಡ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಎಂ.ಎಸ್.ಧೋನಿ , ಮೊಯೀನ್ ಅಲಿ, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್
ಡೆಲ್ಲಿ ಕ್ಯಾಪಿಟಲ್ಸ್ : ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ , ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಟಾಮ್ ಕುರ್ರನ್, ಅಮಿತ್ ಮಿಶ್ರಾ, ಅವೇಶ್ ಖಾನ್