Advertisement

IPL 2023: ಹೈದರಾಬಾದ್‌-ಲಕ್ನೋ ನಡುವೆ ಇಂದು ಪಂದ್ಯ-ಗೆಲುವಿನ ಸ್ಫೂರ್ತಿಗೆ ಮಾರ್ಕ್‌ರಮ್‌ ಬಲ

10:07 PM Apr 06, 2023 | Team Udayavani |

ಲಕ್ನೋ: ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ ಹೈದರಾಬಾದ್‌ ತಂಡವು ಶುಕ್ರವಾರ ನಡೆಯುವ ಪಂದ್ಯದಲ್ಲಿ ಹೊಸ ನಾಯಕ ಐಡೆನ್‌ ಮಾರ್ಕ್‌ರಮ್‌ ಅವರ ಬಲದಿಂದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಮಾರ್ಕ್‌ರಮ್‌ ಅವರಲ್ಲದೇ ದಕ್ಷಿಣ ಆಫ್ರಿಕಾದ ಇನ್ನಿಬ್ಬರು ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದರಿಂದ ಹೈದರಾಬಾದ್‌ ಬಲಿಷ್ಠಗೊಂಡಿದ್ದು, ಉತ್ತಮ ನಿರ್ವಹಣೆಯ ನೀಡುವ ಉತ್ಸಾಹದಲ್ಲಿದೆ.

Advertisement

ಮಾರ್ಕ್‌ರಮ್‌ ಅವರ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಅವರು ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಪಂದ್ಯದಲ್ಲಿ ಹೈದರಾಬಾದ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 72 ರನ್ನುಗಳ ಬೃಹತ್‌ ಸೋಲು ಅನುಭವಿಸಿತ್ತು. ಇದೀಗ ಮಾರ್ಕ್‌ರಮ್‌ ಅವರಲ್ಲದೇ ದಕ್ಷಿಣ ಆಫ್ರಿಕಾದ ಇನ್ನಿಬ್ಬರು ಆಟಗಾರರಾದ ಮಾರ್ಕೊ ಜಾನ್ಸೆನ್‌ ಮತ್ತು ಹೆನ್ರಿಚ್‌ ಕ್ಲಾಸೆನ್‌ ಅವರು ತಂಡವನ್ನು ಸೇರಿಕೊಂಡಿದ್ದರಿಂದ ತಂಡ ಇನ್ನಷ್ಟು ಬಲಗೊಂಡಿದೆ.

ಹೈದರಾಬಾದ್‌ ತಂಡವು 2021ರಲ್ಲಿ ಕೊನೆಯ ಸ್ಥಾನ ಪಡೆದಿದ್ದರೆ, ಕಳೆದ ವರ್ಷ ಕಣದಲ್ಲಿದ್ದ 10 ತಂಡಗಳಲ್ಲಿ ಎಂಟನೇ ಸ್ಥಾನ ಪಡೆದಿತ್ತು. ಈ ಋತುವಿನಲ್ಲಿ ಮಾರ್ಕ್‌ರಮ್‌ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮ ಸಾಧನೆ ನೀಡುವ ಆತ್ಮವಿಶ್ವಾಸದಲ್ಲಿದೆ.

ಪವರ್‌ಪ್ಲೇಯಲ್ಲಿ ಒದ್ದಾಟ:
ರಾಜಸ್ಥಾನ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಹೈದರಾಬಾದ್‌ ಪವರ್‌ ಪ್ಲೇ ವೇಳೆ ಬಹಳಷ್ಟು ಒದ್ದಾಡಿತ್ತು. ಈ ವೇಳೆ ರಾಜಸ್ಥಾನ್‌ ಒಂದು ವಿಕೆಟಿಗೆ 85 ರನ್‌ ಗಳಿಸಿದ್ದರೆ, ಹೈದರಾಬಾದ್‌ ಮೊದಲ ಆರು ಓವರ್‌ಗಳಲ್ಲಿ 2 ವಿಕೆಟಿಗೆ 30 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಬ್ರ್ಯಾನ್‌ ಲಾರಾ ಅವರಿಂದ ತರಬೇತಿ ಪಡೆದ ಹೈದರಾಬಾದ್‌ ತಂಡವು ಶುಕ್ರವಾರದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿರುವುದು ತಂಡಕ್ಕೆ ಸಮಾಧಾನ ತಂದಿದೆ. ಅವರ ಬಲದಿಂದ ತಂಡದ ಬ್ಯಾಟಿಂಗ್‌ ಬಲ ವೃದ್ಧಿಯಾಗಲಿದೆ. ಮೊದಲ ಪಂದ್ಯದಲ್ಲಿ ರನ್‌ ಗಳಿಸಲು ವಿಫ‌ಲರಾದ ಅಭಿಷೇಕ್‌ ಶರ್ಮ, ರಾಹುಲ್‌ ತ್ರಿಪಾಠಿ ಅವರಲ್ಲದೇ ಮಾಯಾಂಕ್‌ ಅಗರ್ವಾಲ್‌ ಅವರು ಬ್ಯಾಟಿಂಗಿನಲ್ಲಿ ಮಿಂಚುವ ನಿರೀಕ್ಷೆಯಿದೆ. ಅವರಲ್ಲದೇ ಗ್ಲೆನ್‌ ಫಿಲಿಪ್ಸ್‌, ಹ್ಯಾರಿ ಬ್ರೂಕ್ಸ್‌ ಉತ್ತಮವಾಗಿ ಆಡಿದರೆ ಹೈದರಾಬಾದ್‌ ಗೆಲುವಿನ ಟ್ರ್ಯಾಕ್‌ಗೆ ಮರಳಲಿದೆ.

ತಂಡದ ಬೌಲಿಂಗ್‌ ಪಡೆ ಅಷ್ಟೊಂದು ಉತ್ತಮವಾಗಿಲ್ಲ. ಉಮ್ರಾನ್‌ ಮಲಿಕ್‌ ಒಂದು ವಿಕೆಟ್‌ ಪಡೆದಿದ್ದರೂ ದುಬಾರಿಯಾಗಿದ್ದರು. ಟಿ. ನಟರಾಜನ್‌ ಮಾತ್ರ ನಿಖರ ದಾಳಿ ಸಂಘಟಿಸಿ, 23 ರನ್ನಿಗೆ 2 ವಿಕೆಟ್‌ ಉರುಳಿಸಿದ್ದರು. ಅಘಾ^ನಿಸ್ತಾನದ ಬೌಲರ್‌ ಫ‌ಜಲ್ಲಾಕ್‌ ಫಾರೂಕಿ 2 ವಿಕೆಟ್‌ ಕೆಡಹಿದ್ದರೂ 41 ರನ್‌ ಬಿಟ್ಟುಕೊಟ್ಟಿದ್ದರು. ಅನುಭವಿ ಭುವನೇಶ್ವರ್‌ ಕೂಡ ನಿರೀಕ್ಷಿತ ಬೌಲಿಂಗ್‌ ದಾಳಿ ಸಂಘಟಿಸಿಲ್ಲ. ವಾಷಿಂಗ್ಟನ್‌ ಸುಂದರ್‌ ಮತ್ತು ಅದಿಲ್‌ ರಶೀದ್‌ ಸ್ಪಿನ್‌ ದಾಳಿಯಲ್ಲಿ ಮಿಂಚು ಹರಿಸಿಲ್ಲ.

Advertisement

ರಾಹುಲ್‌ ಫಾರ್ಮ್ ಕಳವಳ:
ಲಕ್ನೋ ಪರ ನಾಯಕ ಕೆ.ಎಲ್‌.ರಾಹುಲ್‌ ಅವರ ಫಾರ್ಮ್ ಕಳವಳದ ವಿಷಯವಾಗಿದೆ. ಅವರು ಆಡಿದ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಲು ವಿಫ‌ಲರಾಗಿದ್ದಾರೆ. ಆದರೆ ಕೈಲ್‌ ಮೇಯರ್ ಅಸಾಧಾರಣ ಬ್ಯಾಟಿಂಗ್‌ ಪ್ರದರ್ಶನ ನೀಡಿರುವುದು ಲಕ್ನೋಗೆ ಪ್ಲಸ್‌ ಪಾಯಿಂಟ್‌. ಅವರು ಎರಡೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅವರಲ್ಲದೇ ದೀಪಕ್‌ ಹೂಡ, ಕೃಣಾಲ್‌ ಪಾಂಡ್ಯ, ನಿಕೋಲಾಸ್‌ ಪೂರಣ್‌ ಬ್ಯಾಟಿಂಗ್‌ನಲ್ಲಿ ಸದ್ದು ಮಾಡಬಲ್ಲರು.

ಲಕ್ನೋದ ಬೌಲಿಂಗ್‌ ಬಲಷ್ಠವಾಗಿದೆ. ರವಿ ಬಿಷ್ಣೋಯಿ ಈಗಾಗಲೇ 5 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರೆ ಇಂಗ್ಲೆಂಡಿನ ಮಾರ್ಕ್‌ ವುಡ್‌ ಡೆಲ್ಲಿ ವಿರುದ್ಧ 5 ವಿಕೆಟ್‌ ಕಿತ್ತು ಪ್ರಬಲ ಹೊಡೆತ ನೀಡಿದ್ದರಲ್ಲದೇ ಕಳೆದ ಪಂದ್ಯದಲ್ಲೂ ಮೂರು ವಿಕೆಟ್‌ ಹಾರಿಸಿದ್ದರು. ಜೈದೇವ್‌ ಉನಾದ್ಕತ್‌, ಕೆ.ಗೌತಮ್‌ ಮಿಂಚುವ ನಿರೀಕ್ಷೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next