Advertisement
ತನ್ಮೂಲಕ ಟ್ರೋಫಿ ಗೆಲುವಿನ ಸುದೀರ್ಘ ನಿರೀಕ್ಷೆಗೆ ಇನ್ನೂ ಒಂದು ಹೆಜ್ಜೆ ಹತ್ತಿರವಾಗುವುದು ಆರ್‌ಸಿಬಿ ಗುರಿ. ಇದು ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಗಿದ್ದು, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ಎದುರಾಗಲಿದೆ. ಈ ರಾಯಲ್ಸ್ ಸಮರದಲ್ಲಿ ಗೆದ್ದವರು ಫೈನಲ್‌ಗೆ ಲಗ್ಗೆ ಇರಿಸುತ್ತಾರೆ, ಸೋತವರು ಮನೆಗೆ ಹೋಗುತ್ತಾರೆ.
Related Articles
Advertisement
ಪಾಟೀದಾರ್ ಸೂಪರ್ :
ಲಕ್ನೋ ಎದುರಿನ ಮುಖಾಮುಖಿ ವೇಳೆ ಆರ್‌ಸಿಬಿ ಇನ್ನೂರರ ಗಡಿ ದಾಟುವ ಮೂಲಕ ಮೇಲುಗೈ ಸಾಧಿಸಿತ್ತು. ರಜತ್ ಪಾಟೀದಾರ್ ಅವರ ಟಾಪ್‌ಕ್ಲಾಸ್ ಸೆಂಚುರಿ ಆಕರ್ಷಣೆಯಾಗಿತ್ತು. ಆದರೆ ನಾಯಕ ಫಾ ಡು ಪ್ಲೆಸಿಸ್ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದರು. ಈ ವೈಫಲ್ಯವನ್ನು ಕ್ವಾಲಿಫೈಯರ್ ಪಂದ್ಯದಲ್ಲಿ ಸರಿದೂಗಿಸಬೇಕಿದೆ. ಹಾಗೆಯೇ ಕೊಹ್ಲಿ, ಮ್ಯಾಕ್ಸ್‌ವೆಲ್ ಕೂಡ ರನ್ ಪೇರಿಸಬೇಕಿದೆ.
ಲಕ್ನೋಗೆ ಹೋಲಿಸಿದರೆ ರಾಜಸ್ಥಾನ್ ಬ್ಯಾಟಿಂಗ್ ಹೆಚ್ಚು ಬಲಿಷ್ಠ ಹಾಗೂ ಅಪಾಯಕಾರಿ. ಆರೇಂಜ್ ಕ್ಯಾಪ್‌ಧಾರಿ ಜಾಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್, ದೇವದತ್ತ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಶಿಮ್ರನ್ ಹೆಟ್‌ಮೈರ್, ರಿಯಾನ್ ಪರಾಗ್ ರಾಜಸ್ಥಾನ್ ಬ್ಯಾಟಿಂಗ್ ಲೈನ್‌ಅಪ್‌ನ ಪ್ರಮುಖರು. ಬಟ್ಲರ್ ವಿಕೆಟನ್ನು ಬೇಗ ಉರುಳಿಸಿದರೆ ಯಾವುದೇ ಎದುರಾಳಿ ಮೇಲುಗೈ ಸಾಧಿಸಬಹುದು. ಆಗ ರಾಜಸ್ಥಾನ್ ಕೂಡ ಒತ್ತಡಕ್ಕೆ ಸಿಲುಕಲಿದೆ. ಆರ್‌ಸಿಬಿ ಬೌಲಿಂಗ್ ತಂತ್ರಗಾರಿಕೆ ಈ ನಿಟ್ಟಿನಲ್ಲಿ ಸಾಗಬೇಕು.
ರಾಜಸ್ಥಾನ್ ಬೌಲಿಂಗ್ ಕೂಡ ಘಾತಕ. ಟ್ರೆಂಟ್ ಬೌಲ್ಟ್, ಒಬೆಡ್ ಮೆಕಾಯ್, ಸ್ಪಿನ್‌ದ್ವಯರಾದ ಚಹಲ್-ಅಶ್ವಿನ್ ಅವರನ್ನೊಳಗೊಂಡ ಈ ಬೌಲಿಂಗ್ ಪಡೆಯನ್ನು ಆರ್‌ಸಿಬಿ ಎಂದಿಗಿಂತ ಹೆಚ್ಚು ಎಚ್ಚರದಿಂದ ನಿಭಾಯಿಸಬೇಕಿದೆ. ಆದರೆ ಗುಜರಾತ್ ವಿರುದ್ಧ ರಾಜಸ್ಥಾನ್ ಬೌಲಿಂಗ್ ವಿಫಲಗೊಂಡಿತ್ತು. ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಎತ್ತೆತ್ತಿ ಬಾರಿಸಿದ ಹ್ಯಾಟ್ರಿಕ್ ಸಿಕ್ಸರ್ ಈಗಲೂ ತಂಡವನ್ನು ಬೆಚ್ಚಿಬೀಳಿಸುತ್ತಿರಬಹುದು!
ಇತ್ತ ಆರ್‌ಸಿಬಿ ಈಡನ್‌ನ ಬ್ಯಾಟಿಂಗ್ ಟ್ರ್ಯಾಕ್ ಮೇಲೂ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ಣಾಯಕ ಹಂತದಲ್ಲಿ ತೂರಿ ಬರುವ ವೈಡ್ ಎಸೆತಗಳಿಗೆ ಕಡಿವಾಣ ಹಾಕುವುದು ಮುಖ್ಯ. ಹ್ಯಾಝಲ್‌ವುಡ್, ಹರ್ಷಲ್ ಪಟೇಲ್, ಸಿರಾಜ್, ಹಸರಂಗ, ಶಬಾಜ್ ಅವರೆಲ್ಲ ಶಿಸ್ತುಬದ್ಧ ಬೌಲಿಂಗ್ ನಡೆಸಬೇಕಿದೆ. ಇದು ಬೌಲಿಂಗ್ ಟ್ರ್ಯಾಕ್ ಆಗಿದ್ದರೆ ಬ್ಯಾಟರ್‌ಗಳಿಗೆ ಅಗ್ನಿಪರೀಕ್ಷೆ ತಪ್ಪಿದ್ದಲ್ಲ!