ಹೈದರಾಬಾದ್: ಇದನ್ನು ವಿಶಿಷ್ಟ ಕದನ ಎಂದು ಕರೆದರೆ ತಪ್ಪಾಗಲಾರದು, ನಿರ್ಣಾಯಕ ಕದನ ಎಂದರೂ ತಪ್ಪಾಗಲಾರದು. ದಿನದಿನಕ್ಕೆ ಐಪಿಎಲ್ ಪ್ಲೇಆಫ್ನತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಪಂದ್ಯವೂ ಮಹತ್ವ ಪಡೆದುಕೊಳ್ಳುತ್ತಿವೆ. ಪ್ಲೇಆಫ್ನಿಂದ ಹೊರಹೋಗಿರುವ ತಂಡಗಳೆದುರಿನ ಪಂದ್ಯಗಳೂ ಮಹತ್ವ ಹೊಂದಿವೆ. ಇದನ್ನು ಗಮನಿಸಿ ನೋಡಿದಾಗ ಶನಿವಾರ ಹೈದರಬಾದ್‌ನಲ್ಲಿ ನಡೆಯಲಿರುವ ಪುಣೆ-ಹೈದರಾಬಾದ್ ಪಂದ್ಯ ಭಾರೀ ಮಹತ್ವ ಪಡೆದುಕೊಂಡಿದೆ.
ಇದುವರೆಗೆ ತಲಾ 11 ಪಂದ್ಯವಾಡಿರುವ ಇತ್ತಂಡಗಳ ಪೈಕಿ ಪುಣೆ ತುಸು ಮುಂದಿದೆ. ಅದು 7 ಪಂದ್ಯ ಗೆದ್ದು, 4ರಲ್ಲಿ ಸೋತು ಒಟ್ಟು 14 ಅಂಕ ಗಳಿಸಿದೆ. ಮತ್ತೂಂದು ಕಡೆಹೈದರಾಬಾದ್ 6 ಪಂದ್ಯ ಗೆದ್ದು, 4 ಸೋತು, 1 ಪಂದ್ಯವನ್ನು ಟೈ ಮಾಡಿಕೊಂಡು 13 ಅಂಕ ಗಳಿಸಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದಟಛಿ ಆಡಬೇಕಾಗಿದ್ದ ಒಂದು ಪಂದ್ಯ ಮಳೆ ಕಾರಣ ರದ್ದಾಗಿದ್ದು ಹೈದರಾಬಾದ್‌ಗೆ ಅಲ್ಪ ಹಿನ್ನಡೆಯಾಗಿ ಪರಿಣಮಿಸಿದೆ.
ಪುಣೆ ಈಗ 7 ಪಂದ್ಯ ಗೆದ್ದಿರುವುದರಿಂದ ಪ್ಲೇಆಫ್ ಸ್ಥಾನವನ್ನು ಬಹುತೇಕ ಭದ್ರ ಮಾಡಿಕೊಂಡಿದೆ. ಆದರೆ ಲೆಕ್ಕಾಚಾರಗಳಿಲ್ಲದಂತೆ ಅದು ಪ್ಲೇಆಫ್ ಪ್ರವೇಶಿಸಬೇಕಾದರೆ ಇನ್ನೊಂದೆರಡು ಪಂದ್ಯವನ್ನು ಗೆಲ್ಲಲೇಬೇಕು. ಬರೀ ಪ್ಲೇಆಫ್ ಪ್ರವೇಶಕ್ಕಿಂತ ಅಗ್ರಸ್ಥಾನದಲ್ಲಿ ಪ್ರವೇಶಿಸುವುದು ಬಹಳ ಲಾಭದಾಯಕವಾಗಿರುವುದರಿಂದ ಎಲ್ಲ ತಂಡಗಳು ನಂ.1, ನಂ.2 ತಂಡವಾಗಿ ಪ್ಲೇಆಫ್ಗೇರುವುದನ್ನು ಮುಂದಿಟ್ಟುಕೊಂಡು ಮುಂದುವರಿಯುತ್ತಿವೆ. ಪುಣೆಗೆ ಇನ್ನು ಮೂರು ಪಂದ್ಯಗಳು ಬಾಕಿಯಿದ್ದು ಅಷ್ಟೂ ಪಂದ್ಯ ಗೆದ್ದರೆ ಅದು ಒಟ್ಟು 20 ಅಂಕಗಳೊಂದಿಗೆ ಬಲಿಷ್ಠ ಸ್ಥಿತಿಯಲ್ಲಿರಲಿದೆ.
ಆದರೆ ಮತ್ತೂಂದು ಕಡೆ ಹೈದರಾಬಾದ್ ತುಸು ಆತಂಕದ ಸ್ಥಿತಿಯಲ್ಲಿದೆ. ಅದರ ಕೆಳಗಿನ ಸ್ಥಾನಗಳಲ್ಲಿರುವ ಪಂಜಾಬ್, ಡೆಲ್ಲಿಗೆ ಕ್ರಮವಾಗಿ 5 ಮತ್ತು 4 ಪಂದ್ಯಗಳಿವೆ. ಇಲ್ಲಿ ಅವು ಗೆಲುವು ಸಾಧಿಸಿದರೆ ಪರಿಸ್ಥಿತಿ ಮಜಬೂತಾಗುತ್ತದೆ. ಒಂದು ವೇಳೆ ಹೈದರಾಬಾದ್ ಗೆಲ್ಲದೇ ಹೋದರೆ ಡೆಲ್ಲಿ, ಪಂಜಾಬ್ಗಳು ಹೈದರಾಬಾದನ್ನು ಹೊರಹಾಕಿದರೆ ಅಚ್ಚರಿಯಿಲ್ಲ. ಇದೇ ಮಾತು ಪುಣೆಗೂ ಅನ್ವಯಿಸುತ್ತದೆ. ಅದೂ ಕೂಡ ಚಲ್ತಾ ಹೈ ಧೋರಣೆ ಪ್ರದರ್ಶಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.