ನಟ ಸುದೀಪ್ ನೇತೃತ್ವದಲ್ಲಿ ಶುರುವಾದ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಟಿ 20 ಇದೀಗ ಎರಡನೇ ಆವೃತ್ತಿಗೆ ಕಾಲಿಟ್ಟಿದೆ. ಈ ಸೀಸನ್ 2 ವಿಶೇಷವೆಂದರೆ, ಇದೇ ಮೊದಲ ಸಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಹೌದು, ಭಾರತದ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್, ಶ್ರೀಲಂಕಾದ ತಿಲಕರತ್ನೆ ದಿಲನ್,ದಕ್ಷಿಣಾ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಹರ್ಷೆಲ್ ಗಿಬ್ಸ್, ಇಂಗ್ಲೆಂಡ್‌ನ ಓವೈಸ್ ಷಾ ಈ ಸಲದ ಕೆಸಿಸಿ ಟಿ 20 ಕಪ್‌ನ ಪ್ರಮುಖ ಆಕರ್ಷಣೆ.
ಕಳೆದ ಬಾರಿ ಕೆಸಿಸಿ ಲೀಗ್ ಯಶಸ್ವಿಯಾಗಿ ನಡೆದಿತ್ತು. ಈಗ ಎರಡನೇ ಆವೃತ್ತಿಯ ಪಂದ್ಯವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಸುದೀಪ್ ಹಾಗೂ ಅವರ ತಂಡ ಅಂತಾರಾಷ್ಟ್ರೀಯ ಆಟಗಾರರರನ್ನು ಸಂಪರ್ಕಿಸಿ, ಅವರನ್ನು ಕರೆತರಲು ಯಶಸ್ವಿಯಾಗಿದ್ದಾರೆ. ಅಂದಹಾಗೆ, ಈ ಅಂತಾರಾಷ್ಟ್ರೀಯ ಆಟಗಾರರು ಒಂದೊಂದು ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 8 ಮತ್ತು 9 ರಂದು ಕೆಸಿಸಿ ಕಪ್ ಪಂದ್ಯಗಳು ಜರುಗಲಿವೆ. ಸೆ.8 ರಂದು ನಾಲ್ಕು ಪಂದ್ಯಗಳು ಹಾಗೂ ಸೆ.9 ರಂದು ಎರಡು ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು, ಈ ಕೆಸಿಸಿ ಟಿ 20 ಲೀಗ್‌ನಲ್ಲಿ ಶಿವರಾಜಕುಮಾರ್, ಪುನೀತ್‌ರಾಜ್‌ಕುಮಾರ್, ಯಶ್ ಸೇರಿದಂತೆ ಎಲ್ಲಾ ನಟರು ಬೆಂಬಲ ಕೊಡುತ್ತಿದ್ದಾರೆ. ಈ ಬಾರಿ ಉಪೇಂದ್ರ, ಗಣೇಶ್ ಕೂಡ ಸೇರ್ಪಡೆಯಾಗಿರುವುದು ವಿಶೇಷ. ಭಾರತ ತಂಡದ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಕಲಾವಿದರ ಜೊತೆಗೆ ಆಟ ಆಡುತ್ತಿರುವುದು ಹೊಸ ಅನುಭವ ಕಟ್ಟಿಕೊಡುವ ವಿಶ್ವಾಸ.
ಅಂದಹಾಗೆ, ಅಂತಾರಾಷ್ಟ್ರೀಯ ಆಟಗಾರರೆಲ್ಲರೂ ಕೆಸಿಸಿ ಟಿ 20 ಲೀಗ್ ಕುರಿತು ಖುಷಿಯಿಂದ ಹೇಳಿಕೊಳ್ಳುವ ಮೂಲಕ ಈ ಲೀಗ್ ಯಶಸ್ವಿಗೊಳಿಸಲು ಸಹಕಾರ ಕೋರಿದರು. ಅದೇನೆ ಇರಲಿ, ಕನ್ನಡ ಕಲಾವಿದರೆಲ್ಲರೂ ಸೇರಿ ಸುದೀಪ್ ನೇತೃತ್ವದಲ್ಲಿ ಶುರು ಮಾಡಿದ ಈ ಕೆಸಿಸಿ ಟಿ 20 ಲೀಗ್ ಈಗ ಇನ್ನಷ್ಟು ರೋಚಕ ಪಂದ್ಯಗಳನ್ನು ಕಟ್ಟಿಕೊಡುವಲ್ಲಿ ತಯಾರಾಗಿದೆ.