ಪಣಜಿ: ನವೆಂಬರ್ 20 ರಿಂದ 28 ರ ವರೆಗೆ ಗೋವಾದಲ್ಲಿ ನಡೆಯಲಿರುವ 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಪನೋರಮಾ ವಿಭಾಗಕ್ಕೆ 25 ಭಾರತೀಯ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ವಿಶೇಷವೆಂದರೆ, ಕೆಲ ವರ್ಷಗಳ ನಂತರ ಕನ್ನಡದ ನಾಲ್ಕು ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’, ಪ್ರವೀಣ್ ಕೃಪಾಕರ್ ಅವರ ‘ತಲೆದಂಡ’, ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಮತ್ತು ಗಣೇಶ್ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಎಸ್.ವಿ. ರಾಜೇಂದ್ರಸಿಂಗ್ ಬಾಬು ಆಯ್ಕೆಯಾಗಿದ್ದರು. ಸಮಿತಿಯಲ್ಲಿ 12 ಮಂದಿ ಇತರ ಸದಸ್ಯರಿದ್ದರು.
ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆನ್‍ಲೈನ್ ಮೂಲಕ ಪ್ರತಿನಿಧಿಗಳ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಚಲನಚಿತ್ರೋತ್ಸವಕ್ಕಾಗಿ ಗೋವಾ ರಾಜಧಾನಿ ಪಣಜಿಯಲ್ಲಿ ಸಿದ್ಧತಾ ಕಾರ್ಯ ಆರಂಭಗೊಂಡಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಗೋವಾ ಸರಕಾರದ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ.