ಉಪೇಂದ್ರ ನಿರ್ದೇಶನ ಹಾಗೂ ನಟನೆಯ ಬಹು ನಿರೀಕ್ಷಿತ ಚಿತ್ರ ಯುಐ (UI) ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚೆಗೆ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದು, ಸ್ಯಾಂಡಲ್ವುಡ್ ತಾರೆಯರಾದ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ, ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕರಾದ ಉದಯ್ ಮೆಹ್ತಾ, ರಮೇಶ್ ರೆಡ್ಡಿ, ಕಾರ್ತಿಕ್ ಗೌಡ, ಯೋಗಿ ರಾಜ್, ಜಗದೀಶ್, ನಿರ್ದೇಶಕರಾದ ಪವನ್ ಒಡೆಯರ್, ಡಾ. ಸೂರಿ, ವೀರೇಶ ಚಿತ್ರಮಂದಿರದ ಕುಶಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯುಐ ಚಿತ್ರತಂಡಕ್ಕೆ ಶುಭಕೋರಿದರು.
“ಓಂ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ಉಪೇಂದ್ರ ಅವರ ಕಾರ್ಯವೈಖರಿ ನೋಡಿ, ನೀವು ಭಾರತ ಚಿತ್ರರಂಗದ ಮಹಾನ್ ನಿರ್ದೇಶಕರಲ್ಲಿ ಒಬ್ಬರಾಗುತ್ತೀರಿ ಎಂದು ಹೇಳಿದ್ದೆ. ಆಗಿನಿಂದಲೂ ನನಗೆ ಉಪೇಂದ್ರ ಅವರ ಕಂಡರೆ ವಿಶೇಷ ಪ್ರೀತಿ. ನಾನು ಕೂಡ ಯುಐ ಚಿತ್ರ ನೋಡುವ ಕಾತುರದಿಂದ ಇದ್ದೇನೆ ಎಂದರು ನಟ ಶಿವರಾಜಕುಮಾರ್.
ನಾವು ಉಪೇಂದ್ರ ಅವರ ನಿರ್ದೇಶನಕ್ಕೆ ಅಭಿಮಾನಿಗಳು. ಅವರ ಚಿತ್ರಗಳನ್ನು ನೋಡಿ ಬೆಳೆದವರು ನಾವು. 9 ವರ್ಷಗಳ ನಂತರ ಅವರು ನಿರ್ದೇಶಿಸಿದ ಚಿತ್ರ ನೋಡಲು ಕಾಯುತ್ತಿದ್ದೇವೆ ಎನ್ನುವುದು ದುನಿಯಾ ವಿಜಯ್, ಡಾಲಿ ಧನಂಜಯ್ ಅವರ ಮಾತಾಗಿತ್ತು.
ನಟ ಉಪೇಂದ್ರ ಮಾತನಾಡುತ್ತ, “ಈ ಚಿತ್ರ ಆರಂಭವಾಗಲು ಕಾರಣ ಕೆ.ಪಿ. ಶ್ರೀಕಾಂತ್. ಇದು ನನ್ನೊಬ್ಬನ ಚಿತ್ರವಲ್ಲ. ನನ್ನ ತಂಡದ ಚಿತ್ರ. ಎಲ್ಲರ ಸಹಕಾರ, ಪರಿಶ್ರಮದಿಂದ ಈ ಚಿತ್ರ ಮೂಡಿಬಂದಿದೆ. ಈ ಸಮಯದಲ್ಲಿ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದರು.
ಚಿತ್ರದ ಬಗ್ಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನವೀನ್ ಯುಐ ಕನ್ನಡದ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್ 20ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಬಹುತೇಕ ಬುಕ್ಕಿಂಗ್ ಆಗಿದೆ. ಆರಂಭದಲ್ಲೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಬೆಂಬಲಕ್ಕೆ ಮನ ತುಂಬಿ ಬಂದಿದೆ ಎನ್ನುವುದು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹಾಗೂ ಸಹ ನಿರ್ಮಾಪಕ ನವೀನ್ ಅವರ ಮಾತು.
ಚಿತ್ರದ ನಾಯಕಿ ರೀಷ್ಮಾ ನಾಣಯ್ಯ, ಕಲಾವಿದರಾದ ರವಿಶಂಕರ್, ಕಾಕ್ರೋಚ್ ಸುಧಿ, ನಿಧಿ ಸುಬ್ಬಯ್ಯ, ನೀತು, ಕಾರ್ಯಕಾರಿ ನಿರ್ಮಾಪಕ ಲಹರಿ ವೇಲು ಹಾಗೂ ಕೆವಿಎನ್ ಸಂಸ್ಥೆಯ ಸುಪ್ರೀತ್ ಮುಂತಾದವರು ಚಿತ್ರದ ಕುರಿತು ಮಾತು ಹಂಚಿಕೊಂಡರು.