Advertisement

ಕುಳಿತಲ್ಲಿಯೇ ಪಾಕ್‌ ಮನೆ “ಪ್ರವೇಶ’ಅವಕಾಶ

12:35 AM Jan 18, 2019 | |

ಬೆಂಗಳೂರು: ನಾವೀಗ (ಭಾರತೀಯರು) ಕುಳಿತಲ್ಲಿಂದಲೇ ಬದ್ಧ ವೈರಿ ಪಾಕಿಸ್ತಾನದ ಗಡಿ ಉದ್ದಕ್ಕೂ ಇರುವ ಮನೆಗಳ ಕೊಠಡಿಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ವೀಕ್ಷಿಸಬಹುದು! – ಇದು ಬಾಹ್ಯಾಕಾಶ ತಂತ್ರಜ್ಞಾನದ ಚಮತ್ಕಾರ.

Advertisement

ಸಮಗ್ರ ವ್ಯಾಪಕ ಗಡಿ ನಿರ್ವಹಣಾ ವ್ಯವಸ್ಥೆ (Integrated comprehensive border management) ಯೋಜನೆ ಯೊಂದನ್ನು ಇತ್ತೀಚೆಗೆ ಆರಂಭಿಸಿದೆ. ಅದು ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಇದರ ಸಹಾಯದಿಂದ ಪಾಕಿಸ್ತಾನದ ಗಡಿಗಳಲ್ಲಿರುವ ಮನೆಗಳ ಒಳಗಿನ ಚಿತ್ರಣವನ್ನೂ ಯಥಾವತ್ತಾಗಿ ವೀಕ್ಷಿಸಬಹುದು ಎಂದು ಕೇಂದ್ರ ಬಾಹ್ಯಾಕಾಶ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್‌ ತಿಳಿಸಿದರು.

ಪ್ರೊ.ಯು.ಆರ್‌. ರಾವ್‌ ಉಪಗ್ರಹ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉನ್ನತಿ (Unispace nanosatellite assembly and training) ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಹ್ಯಾಕಾಶ ತಂತ್ರಜ್ಞಾನ ಈ ಹಿಂದೆ ಕೆಲವೇ ಕೆಲವು ಕ್ಷೇತ್ರಗಳಿಗೆ ಸೀಮಿತವಾಗಿತ್ತು. ಇಂದು ರಸ್ತೆ ನಿರ್ಮಾಣ, ಮೂಲಸೌಕರ್ಯ, ರೈಲ್ವೆ ಮಾರ್ಗ ಮತ್ತು ಜಾಲ, ವಿಪತ್ತು ನಿರ್ವಹಣೆ ಸೇರಿದಂತೆ ಹೊಸ ಹೊಸ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅಷ್ಟೇ ಯಾಕೆ, ಇತ್ತೀಚೆಗೆ ಆರಂಭಿಸಿದ ಸಮಗ್ರ ವ್ಯಾಪಕ ಗಡಿ ನಿರ್ವಹಣಾ ವ್ಯವಸ್ಥೆ ಯೋಜನೆ ಅಡಿ ನಾವು ಶತ್ರುಗಳ ಮನೆಗಳನ್ನೇ ಪ್ರವೇಶಿಸಬಹುದಾಗಿದೆ ಎಂದರು.

ಗಡಿಗಳಾಚೆ ಬೆಸುಗೆ-ಶಿವನ್‌: ಇಸ್ರೋ ಅಧ್ಯಕ್ಷ ಡಾ.ಕೆ. ಶಿವನ್‌ ಮಾತನಾಡಿ, ಭೂಮಿಯಲ್ಲಿ ನಮ್ಮಷ್ಟಕ್ಕೆ ನಾವು ಕೆಲವು ಗಡಿಗಳನ್ನು ಹಾಕಿಕೊಂಡಿದ್ದೇವೆ. ಆದರೆ ಸಾವಿರಾರು ಕಿ.ಮೀ. ದೂರದ ಆಗಸದಲ್ಲಿ ಭೂಮಿಯ ಹೊರಗೆ ನಿಂತು ನೋಡಿದರೆ, ಯಾವುದೇ ಗಡಿಗಳು ಕಾಣಿಸುವುದಿಲ್ಲ. ಅಂದರೆ ಬಾಹ್ಯಾಕಾಶ ತಂತ್ರಜ್ಞಾನವು ಅದರಾಚೆಗೆ ಮನುಷ್ಯ ಸಂಬಂಧಗಳನ್ನು ಒಗ್ಗೂಡಿಸುವಂತಹದ್ದಾಗಿದೆ. ಉನ್ನತಿ ಕಾರ್ಯಕ್ರಮದಡಿ ಇಸ್ರೋ ಜಾಗತಿಕ ಮಟ್ಟದಲ್ಲಿ ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಶೌಚಾಲಯ ಪತ್ತೆ ಮಾಡಬಹುದೇ?
ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದಾಗ, ನಾವಿರುವ ರಸ್ತೆಯಲ್ಲಿ ಹತ್ತಿರದಲ್ಲಿರುವ ಟಾಯ್ಲೆಟ್‌ ಎಲ್ಲಿದೆ ಎಂಬುದನ್ನು ಬಾಹ್ಯಾಕಾಶ ತಂತ್ರಜ್ಞಾನದಿಂದ ತಿಳಿಯಬಹುದೇ? – ಇದು ಬಾಲಿವುಡ್‌ನ‌ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌ ಅವರ ಪ್ರಶ್ನೆ.
ಅಂದಹಾಗೆ, ಕೇಂದ್ರ ಬಾಹ್ಯಾಕಾಶ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರ ಮುಂದೆ ಅಮಿತಾಬ್‌ ಬಚ್ಚನ್‌ ಈ ಪ್ರಶ್ನೆಯನ್ನು ಮುಂದಿಟ್ಟಿದ್ದರಂತೆ. ಇದನ್ನು ಸ್ವತಃ ಸಚಿವರು “ಉನ್ನತಿ’ ಕಾರ್ಯಕ್ರಮ ಉದ್ಘಾಟನೆ ವೇಳೆ ಬಹಿರಂಗಪಡಿಸಿದರು. “ಕೆಲವೊಮ್ಮೆ ಟ್ರಾμಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ತಕ್ಷಣ ಇಳಿದು ಹತ್ತಿರದಲ್ಲಿರುವ ಶೌಚಾಲಯಕ್ಕೆ ಹೋಗಿ ಬರುವಂತಾಗಬೇಕು. ಈ ಸೌಲಭ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನದಿಂದ ಪಡೆಯಲು ಸಾಧ್ಯವೇ? ನಮಗೆ ಹತ್ತಿರದಲ್ಲಿರುವ ಶೌಚಾಲಯದ ಮಾಹಿತಿ ಸಿಗಬಹುದೇ’ ಎಂದು ಅಮಿತಾಬ್‌ ಬಚ್ಚನ್‌ ಕೇಳಿದರು. ಇದಕ್ಕೆ ನಾನು “ಖಂಡಿತ ಸಾಧ್ಯವಿದೆ’ ಎಂದು ತಿಳಿಸಿದೆ ಎಂದು ಸಚಿವ ಜಿತೇಂದ್ರ ಸಿಂಗ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next