Advertisement
ತುಂಬ ಹಿಂದಿನ ಒಂದು ಸಂದರ್ಭ! ಕಾಲೇಜೊಂದರಲ್ಲಿ ಆಯೋಜಿತವಾದ ಸಾಹಿತ್ಯಿಕ ವಿಚಾರಗೋಷ್ಠಿ. ಉದ್ಘಾಟನೆಯ ಮೊದಲ ಭಾಗ ಸಂಪನ್ನಗೊಂಡು, ಒಂದು ಚಹಾ ವಿರಾಮದ ಬಳಿಕ ಆರಂಭಗೊಂಡ ಮೊದಲನೆಯ ಸತ್ರದಲ್ಲಿ ಮೊದಲಿಗೆ ಮಾತನಾಡಲು ಎದ್ದ ವ್ಯಕ್ತಿಯನ್ನು ಗಮನಿಸಿದ್ದೆ. ಸರಳ-ಸಾಧಾರಣ ಉಡುಪು, ನೆತ್ತಿಗೆ ಒತ್ತಿ ಕೂದಲನ್ನು ಬಾಚಿಕೊಂಡ, ವಿಶಾಲ ಹಣೆಯ, ಚೆಲುವು-ನಿಲುವುಗಳು ಕಣ್ಸೆಳೆದವು. ಮಾತಿಗೆ ಮೊದಲಿಟ್ಟಾಗ, ಏರುದನಿಯ ಒಡ್ಡಾರವಂತು ವಿಶಿಷ್ಟವಾಗಿತ್ತು. ಜತೆಗೇ, ಆಯ್ದುಕೊಂಡ ವಿಷಯದ ವಿವೇಚನೆಗೂ ವಿಶೇಷ ಲಕ್ಷ್ಯವಿದ್ದುದೂ ವಿದಿತವಾಗುತ್ತಿತ್ತು. ಹೀಗೆ, ಅಂದು ನನ್ನ ಗಮನ ಸೆಳೆದವರು ಕಾಸರಗೋಡು ಸರಕಾರಿ ಕಾಲೇಜಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರೊ| ಶ್ರೀಕೃಷ್ಣ ಭಟ್ಟರು. ಅನಂತರದ ದಿನಗಳಲ್ಲಿ, ನಮ್ಮ ನಡುವೆ ಅನೇಕ ಸಂದರ್ಭಗಳಲ್ಲಿ ಪಾರಸ್ಪರಿಕ ನೆಲೆಯ ಮಾತುಕತೆಗಳಾಗಿವೆ, ಅನೇಕ ವೇದಿಕೆಗಳಲ್ಲಿ ಮತ್ತು ಸಭಾಕಲಾಪಗಳಲ್ಲಿ ನಾವು ಭಾಗವಹಿಸಿದ್ದೂ ನಡೆದಿದೆ.
Related Articles
Advertisement
ಈ ಬಗೆಯ “ಹುಡುಕಾಟ’ ಎಂಬ ಆಕಾಂಕ್ಷೆಯನ್ನು ಒಂದು ಅಭ್ಯಾಸದ ಚೌಕಟ್ಟಿಗೆ ಹೊಂದಿಸಿ ಕೊಂಡು ಸೇರ್ಪಡೆಗೊಳಿಸುತ್ತ ಸಾಗುವ ಕ್ರಮವನ್ನೇ “ಸಂಶೋಧನೆ’ ಎನ್ನಬಹುದು. ಸ್ವೋಪಜ್ಞನಾಗಿ, ಅನನ್ಯವಾಗಿ ಕಂಡುಕೊಳ್ಳುವ ಮತ್ತು ಕಾಣಿಸುವ ಇಂತಹ ಅಂಶಗಳು ಮನುಷ್ಯನ ಬದುಕಿನ ಮೂಲ ಪ್ರೇರಣೆಗಳೇ ಆಗಿವೆ.
ಈ ಪ್ರಕ್ರಿಯೆಯಲ್ಲಿ ಮನುಷ್ಯನ ಗ್ರಹಿಕೆಯ ಸಾಮರ್ಥ್ಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. “ಹಳ್ಳಿಯ ಜಾತ್ರೆ’ ಎಂಬ ಒಂದು ಸಾಂಸ್ಕೃತಿಕ ಸಂದರ್ಭವನ್ನು ಗಮನಿಸಿದರೆ, ಅದು ವಿವಿಧ ನೆಲೆಗಳಲ್ಲಿ ಜೀವಂತವೆನಿಸುವ ರೀತಿಯನ್ನು ನೆನೆಯೋಣ. ಕುಟುಂಬದ ಎಳೆಯ ಸದಸ್ಯನಿಗೆ ಪೀಪಿ-ತುತ್ತೂರಿ, ವಿವಿಧ ತಿಂಡಿ-ತಿನಿಸುಗಳು, ಜೋಕಾಲಿ ಇವೆಲ್ಲವೂ ಕಣ್ಣ ಮುಂದೆ ಬರುತ್ತವೆ. ಹದಿಹರೆಯದ ಹೊಂತಗಾರಿಗಳಿಗೆ ಸಮವಯಸ್ಕರ ಕಣ್ಣುಗಳಿಗೆ ಕಣ್ಣು ಕೂಡಿಸುವ ರಮ್ಯ ಕಲ್ಪನೆಗಳು ಗರಿಗೆದರುತ್ತವೆ. ಮಧ್ಯವಯಸ್ಕರಿಗೆ, ಹಳೆಯ ಅನನ್ಯವೆನಿಸುವ ನೆನಪುಗಳ ಸಂದೂಕವನ್ನೇ ತೆರೆಯುವ ಸಂದರ್ಭವಾಗುತ್ತದೆ. ಹೀಗೆಯೇ ಇತರರೂ ಕೂಡ… ಅನುಭವ ವಿಶೇಷವೊಂದರಲ್ಲಿ ಭಾಗಿಗಳಾಗುತ್ತಾರೆ.
ಪ್ರತೀ ವ್ಯಕ್ತಿಯೂ ವೈವಿಧ್ಯಮಯವಾದ ಬದುಕಿನ ನಿರ್ದಿಷ್ಟ ಅಂಶವೊಂದನ್ನು ಮಾತ್ರ ಗ್ರಹಿಸುತ್ತಾನೆ. ಈ ಗ್ರಹಿಕೆಯ ಮುಂದಿನ ಹಂತವೇ ಚಿಂತನೆಯಲ್ಲಿ ತೊಡಗಿಕೊಳ್ಳುವಿಕೆ. ಈ ಚಿಂತನೆಯು ಗಂಭೀರ ನೆಲೆಗಳಿಗೆ ಏರಿದಂತೆಲ್ಲ, ಮನುಷ್ಯನ ಕಾಣೆRಗಳು ಮಾಗುತ್ತ ಹೋಗುತ್ತವೆ. ತನ್ನ ಗ್ರಹಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ, ಆತನ ಚಿಂತನೆ ಮತ್ತು ನಿರ್ಣಯಗಳು ಹರಳು ಕಟ್ಟುತ್ತವೆ. “ಸಂಶೋಧನೆ’ಯ ಫಲಿತಗಳು ದಾಖಲಾಗುತ್ತವೆ. ಇಂತಹ ಹಿನ್ನೆಲೆಯನ್ನು ಹೇಳಿದುದರ ಉದ್ದೇಶ ಇಷ್ಟೇ, ಪ್ರೊ| ಶ್ರೀಕೃಷ್ಣ ಭಟ್ಟರ ಸಂಶೋಧನ ಬರೆಹಗಳಲ್ಲಿ ಕಂಡುಬರುವ ಚಿಂತನಶೀಲತೆ, ವರ್ಗೀಕರಿಸಿ ಅಳವಡಿಸಿಕೊಳ್ಳುವಾಗಿನ ಸಂಯಮ ಮತ್ತು “ಸಾಂಸ್ಕೃತಿಕ ಔದಾರ್ಯ’ ಇವನ್ನು ಸಹೃದಯರು ಮೆಚ್ಚಿಕೊಳ್ಳಲೇಬೇಕು.
ಸಂಸ್ಕೃತ-ಕನ್ನಡ ಸಂಬಂಧಗಳು ಅನೇಕ ಸಾಂಸ್ಕೃತಿಕ ನೆಲೆಗಳಲ್ಲಿ ನಿಯತವಾಗಿದೆ. ಭಾಷಿಕ ನೆಲೆ, ಸಾಹಿತ್ಯಿಕ ನೆಲೆ, ಸೈದ್ಧಾಂತಿಕ ನೆಲೆ ಮತ್ತು ಸಾಮಾಜಿಕ ನೆಲೆಗಳಲ್ಲಿ ಅದು ಗತಿಯನ್ನು ಪಡೆದಿದೆ. ಹಾಗಾಗಿಯೇ, ಇಂತಹ ಬಹುಭಾಷಿಕ, ಬಹು ಸಾಹಿತ್ಯಿಕ ಹಿನ್ನೆಲೆಗಳನ್ನು ಅವಲೋಕನಕ್ಕೆ ಎತ್ತಿಕೊಳ್ಳುವವರಲ್ಲಿ ತೌಲನಿಕ-ಚಾರಿತ್ರಿಕ ದೃಷ್ಟಿಯಂತೂ ಅತ್ಯವಶ್ಯಕವಾಗಿದೆ. ಪ್ರೊ| ಶ್ರೀಕೃಷ್ಣ ಭಟ್ಟರಲ್ಲಿ ಈ ಗುಣವು ಸ್ವಾಭಾವಿಕವಾಗಿಯೇ ಕಾಣಿಸುತ್ತದೆ. ಆದುದರಿಂದ, ಬರಿಯ ವೈಭವೀಕರಣವಾಗಲೀ ಪ್ರಶಂಸಾ ಪರ ನಿಲುವಾಗಲೀ ಅವರ ವಿವೇಚನೆಗಳ, ಚರ್ಚೆಗಳ ಭಾಗವಾಗಿ ಬರುವುದಿಲ್ಲ. ಹಾಳತವೆನಿಸುವ ಸತಾರ್ಕಿಕ ಚಿಂತನಾಕ್ರಮವನ್ನು ಉದ್ದಕ್ಕೂ ಕಾಣಬಹುದು. ಅವರ ಗ್ರಹಿಕೆಯ ಒಂದಂಶವೇ ಅವರ ಸಂವೇದನೆಗಳಿಗೆ ವಸ್ತುಗಳಾಗುತ್ತವೆ. ಹೀಗೆ ಒಂದು ತಾತ್ವಿಕ ನೆಲೆಗೆ ತಲುಪಿ, ಅದನ್ನು ಲೋಕ ಮುಖಕ್ಕೆ ಸಾದರ ಪಡಿಸುವ ಸಫಲ ಯತ್ನವನ್ನು ಅವರ ಸಂಶೋಧನ ಬರೆಹಗಳಲ್ಲಿ ನೋಡಬಹುದು.
1979ರಷ್ಟು ಹಿಂದೆಯೇ ಪ್ರಕಟವಾದ “ಶಾಸನಗಳು ಮತ್ತು ವೀರಗಲ್ಲುಗಳು’ ಎಂಬೊಂದು ಪುಸ್ತಿಕೆ, “ಕಳ್ಳಿಗೆ ಮಹಾಬಲ ಭಂಡಾರಿ’ (2013) ಮತ್ತು “ಪ್ರೊ| ಪಿ. ಸುಬ್ರಾಯ ಭಟ್’ (2018) ಎಂಬೆರಡು ವ್ಯಕ್ತಿಚಿತ್ರಗಳು ಪ್ರೊ| ಶ್ರೀಕೃಷ್ಣ ಭಟ್ಟರ ಇತರ ಪ್ರಕಟಿತ ಕೃತಿಗಳು. ಇವುಗಳಲ್ಲೂ ಸರಳ ಮತ್ತು ಪರಿಣಾಮಕಾರಕವೆನಿಸುವ ಕನ್ನಡದ ಗದ್ಯದ ಸವಿಯನ್ನು ಗುರುತಿಸಬಹುದು.
ಕಾಲೇಜು ಶಿಕ್ಷಣ ವಿಭಾಗ ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನ ಕಕ್ಷೆಗಳಲ್ಲಿ ಪ್ರೊ| ಭಟ್ಟರ ಸಾಧನೆ ವಿಶೇಷವಾದದ್ದು. ನಿಡುಗಾಲದ ಅವರ ಸ್ನೇಹಿತನ ನೆಲೆಗಳಲ್ಲಿ ನಾನು ಅಂತಹದಕ್ಕೆ ಸಾಕ್ಷಿಯಾಗಿದ್ದೇನೆ. ಇಂತಹವೆಲ್ಲ ವಿದ್ವತ್ ವಲಯದ ಸುದ್ದಿಗಳಾದರೆ, ಅವರ ವಿನಯ-ಸೌಜನ್ಯಪೂರಿತ ನಡವಳಿಕೆಗಳು, ಕುಟುಂಬ ವಾತ್ಸಲ್ಯ, ಸಮಷ್ಟಿಯ ಹಿತದ ಚಿಂತನೆ ಇವುಗಳನ್ನು ಶುಚಿಶುದ್ಧಿಯ ಅಂತರಂಗ – ಬಹಿರಂಗಗಳನ್ನೂ ಹೇಳಲೇಬೇಕು. “ಅರಿವಂ ಪೊಸಯಿಸುವುದೆ ಧರ್ಮಂ’ ಎಂಬ ಕವಿವಾಣಿಯನ್ನು ನೆನೆಯುತ್ತ ಸಹಸ್ರಚಂದ್ರ ದರ್ಶನ ನಿಮಿತ್ತವಾಗಿ ರವಿವಾರ ನಡೆಯುವ ಅವರ ಅಭಿನಂದನ ಸಮಾರಂಭಕ್ಕೆ ಮಂಗಳವಾಗಲಿ ಎಂಬುದು ಎಲ್ಲರ ಹಾರೈಕೆ.
ಡಾ| ತಾಳ್ತಜೆ ವಸಂತಕುಮಾರ