ವಿಶ್ವದಲ್ಲೇ ಅತೀದೊಡ್ಡ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಮುಂದಾಗಿದೆ. ಇದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಅಭಿವೃದ್ಧಿ ಸಾಧಿಸುವ ಗುರಿಯನ್ನು ಹೊಂದಿದೆ. ಆದರೆ ಈ ಅಣೆಕಟ್ಟೆಯನ್ನು ಚೀನ ಭಾರತದ ಗಡಿಗೆ ಸಮೀಪದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದೆ. ಹಿಮಾಲಯದ ತಪ್ಪಲಿನಲ್ಲಿ ಈ ಅಣೆಕಟ್ಟು ನಿರ್ಮಾಣ ಮಾಡಲು ಇರುವ ಸವಾಲುಗಳೇನು? ಒಂದು ವೇಳೆ ಅಣೆಕಟ್ಟು ನಿರ್ಮಾಣವಾದರೆ ಭಾರತದ ಮೇಲಾಗುವ ಮೇಲಾಗುವ ದುಷ್ಪರಿಣಾಮವೇನು ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಭಾರತದಲ್ಲಿ ಹರಿಯುವ ನದಿಗಳಲ್ಲಿ ಬ್ರಹ್ಮಪುತ್ರ ನದಿಯೂ ಪ್ರಮುಖವಾದುದು. ಹಿಮಾಲಯ ದಲ್ಲಿ ಹುಟ್ಟುವ ಈ ನದಿ ಟಿಬೆಟ್ ಪ್ರಸ್ಥಭೂಮಿ ಯಲ್ಲಿ 1,625 ಕಿ.ಮೀ. ದೂರ ಹರಿದು, ಅರುಣಾಚಲ ಪ್ರದೇಶದಲ್ಲಿ ಭಾರತವನ್ನು ಪ್ರವೇಶಿಸುತ್ತದೆ. ವರ್ಷದ ಎಲ್ಲ ಕಾಲದಲ್ಲೂ ಮೈದುಂಬಿ ಹರಿಯುವುದರಿಂದ ಈ ನದಿ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಟಿಬೆಟ್‌ನಲ್ಲಿ ಈ ನದಿಯನ್ನು ಯಾರ್ಲಂಗ್ ಸಂಗ್ಟೋ ಎಂದು ಕರೆಯಲಾಗುತ್ತದೆ. ಇದು ಟಿಬೆಟ್‌ನಲ್ಲಿ ಹರಿವು ಮುಕ್ತಾಯಗೊಳಿಸುವ ಸ್ಥಳದಲ್ಲಿ ಚೀನ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾಗಿದೆ. ಒಂದು ವೇಳೆ ಇಲ್ಲಿ ಅಣೆಕಟ್ಟು ನಿರ್ಮಾಣ ವಾದರೆ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನಾನುಕೂಲತೆ ಸೃಷ್ಟಿಯಾಗುತ್ತದೆ.
ಭಾರತದ ಗಡಿಯಿಂದ 16 ಕಿ.ಮೀ. ದೂರದಲ್ಲಿ ಅಣೆಕಟ್ಟು
ಟಿಬೆಟ್ ಪ್ರಸ್ಥಭೂಮಿ ಮತ್ತು ಹಿಮಾಲಯದ ಆಳ ಕಣಿವೆಗಳಲ್ಲಿ ಹರಿ ಯುವ ಬ್ರಹ್ಮಪುತ್ರ ನದಿ, ಭಾರತವನ್ನು ಪ್ರವೇಶಿಸುವುದಕ್ಕೂ ಮುನ್ನ ಇದ್ದಕ್ಕಿದ್ದಂತೆ ಯು ಟರ್ನ್ ತೆಗೆದುಕೊಳ್ಳುತ್ತದೆ. ಈ ಪ್ರದೇಶದಲ್ಲಿ ನದಿ ಅತ್ಯಂತ ಆಳವಾದ ಕಣಿವೆಯಲ್ಲಿ ಹರಿಯುವುದ ರಿಂದ ಅದರ ವೇಗವೂ ಅತ್ಯಂತ ಹೆಚ್ಚಾಗಿರುತ್ತದೆ. ಹೀಗಾಗಿ ಇಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಮುಂದಾಗಿದೆ. ಇದು ಅರುಣಾಚಲ ಪ್ರದೇಶದಿಂದ 16 ಕಿ.ಮೀ. ದೂರದಲ್ಲಿದೆ. 2021ರಲ್ಲಿ ಚೀನ ಬಿಡುಗಡೆ ಮಾಡಿರುವ 5 ವರ್ಷಗಳ ಯೋಜನೆಯಲ್ಲಿ ಈ ಯೋಜ ನೆಯೂ ಸೇರಿದೆ. ಇದಕ್ಕಾಗಿ ಬರೋಬ್ಬರಿ 11.64 ಲಕ್ಷ ಕೋಟಿ ರೂ. ವೆಚ್ಚ ಮಾಡಲು ಚೀನ ಮುಂದಾಗಿದೆ.
ನಿರ್ಮಾಣವಾದರೆ ವಿಶ್ವದ ಅತೀದೊಡ್ಡ ಅಣೆಕಟ್ಟು ಖ್ಯಾತಿ?
ಚೀನ ಪ್ರಸ್ತುತ ನಿರ್ಮಾಣ ಮಾಡಲು ಹೊರಟಿರುವ ಅಣೆಕಟ್ಟು ನಿರ್ಮಾಣವಾದ ಬಳಿಕ ವಿಶ್ವದ ಅತೀದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಪಡೆದುಕೊಳ್ಳಲಿದೆ. ಪ್ರಸ್ತುತ ಚೀನದಲ್ಲಿ ನಿರ್ಮಾಣ ಮಾಡಲಾಗಿರುವ “ತ್ರಿ ಗಾರ್ಜಸ್ ಡ್ಯಾಂ’ (ಯಾಂಟ್ಜೆ ನದಿಗೆ ಕಟ್ಟಲಾಗಿದೆ) ವಿಶ್ವದ ಬೃಹತ್ ಅಣೆಕಟ್ಟು ಎನಿಸಿಕೊಂಡಿದೆ. ಈ ಅಣೆಕಟ್ಟಿನ ಮೂಲಕ ಚೀನ, ವರ್ಷಕ್ಕೆ 8,820 ಕೋಟಿ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಹೊಸದಾಗಿ ನಿರ್ಮಾಣ ಮಾಡ ಲಾಗುತ್ತಿರುವ ಅಣೆ ಕಟ್ಟಿನ ಮೂಲಕ 30,000 ಕೋಟಿ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಚೀನ ಹೊಂದಿದೆ.
ಅಣೆಕಟ್ಟು ನಿರ್ಮಾಣ ಮಾಡುವುದೇ ದೊಡ್ಡ ಸವಾಲು
ಭಾರತದ ವಿರುದ್ಧ ಕ್ಯಾತೆ ಮುಂದುವರಿಸುವುದಕ್ಕಾಗಿ ಚೀನ ಈ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ ಎಂದು ಬಹುತೇಕ ವರದಿಗಳು ತಿಳಿಸಿವೆ. ಭಾರತದ ವಿರುದ್ಧ ಸೇಡಿಗಾಗಿ ಈ ಅಣೆಕಟ್ಟು ಕಟ್ಟುತ್ತಿದ್ದರೂ ಇದನ್ನು ನಿರ್ಮಾಣ ಮಾಡಲು ಚೀನ ಅತೀದೊಡ್ಡ ಎಂಜಿನಿಯರಿಂಗ್ ಸವಾಲನ್ನು ಎದುರಿಸಬೇಕಿದೆ. ಚೀನ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾಗಿರುವ ಸ್ಥಳದಲ್ಲಿ ಬ್ರಹ್ಮ ಪುತ್ರ ನದಿ ಕೇವಲ 50 ಕಿ.ಮೀ. ಅಂತರದಲ್ಲಿ 2,000 ಅಡಿ ಆಳವಾದ ಕಣಿವೆಯನ್ನು ಪ್ರವೇಶಿಸುತ್ತದೆ. ಇಲ್ಲಿ ಇದರ ಹರಿವಿನ ವೇಗ ಹೆಚ್ಚಿರುವ ಕಾರಣ ಇಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ಅತೀದೊಡ್ಡ ಸವಾಲು ಎನಿಸಿಕೊಂಡಿದೆ.
ಈಗಾಗಲೇ ಬ್ರಹಪುತ್ರಕ್ಕೆ 6 ಅಣೆಕಟ್ಟುಗಳ ನಿರ್ಮಾಣ
ಬ್ರಹ್ಮಪುತ್ರ ಅಥವಾ ಯಾರ್ಲಂಗ್ ಸಂಗ್ಟೋ ನದಿ ಟಿಬೆಟ್‌ನಲ್ಲಿ 1,625 ಕಿ.ಮೀ. ದೂರ ಹರಿಯುತ್ತಿದ್ದು, ಇದಕ್ಕೆ ಚೀನ ಈಗಾಗಲೇ 6 ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದೆ. ಇದರಲ್ಲಿ 5 ಅಣೆಕಟ್ಟುಗಳಲ್ಲಿ ವಿದ್ಯುತ್ ಉತ್ಪಾದನೆಯನ್ನೂ ಸಹ ಮಾಡುತ್ತಿದೆ. ಆದರೂ ಭಾರತದ ಗಡಿಯಲ್ಲಿ ಮತ್ತೂಂದು ಅಣೆಕಟ್ಟು ನಿರ್ಮಾಣ ಮಾಡಿ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲು ಚೀನ ಮುಂದಾಗಿದೆ.
ಭಾರೀ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ?
ಒಂದು ವೇಳೆ ಚೀನ ಈ ಪ್ರದೇಶದಲ್ಲಿ ಚೀನ ಅಣೆಕಟ್ಟು ಕಟ್ಟಲು ಮುಂದಾದರೆ ಟಿಬೆಟ್ ಹಾಗೂ ಭೂತಾನ್ ಭಾಗದಲ್ಲಿ ಭಾರಿ ಭೂಕಂಪಗಳು ಸೃಷ್ಟಿಯಾಗಲಿವೆ. ಹಿಮಾಲಯ ಪರ್ವತವನ್ನು ನಿರ್ಮಿಸಿರುವ ಭೂ ಪದಕ ಅತ್ಯಂತ ಸಡಿಲವಾಗಿದ್ದು, ಹಲವು ಬಾರಿ ಈಗಾಗಲೇ ಕಂಪನವನ್ನು ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಭೂಮಿಯನ್ನು ಅಗೆಯುವುದರಿಂದ ದೊಡ್ಡ ಪ್ರಮಾಣದಲ್ಲಿ ಭೂಕಂಪ ಸಂಭವಿಸಿ, ಪರ್ವತದ ಬಹುದೊಡ್ಡ ಭಾಗಗಳು ಕುಸಿದು ಬೀಳುವ ಅಪಾಯ ಸಾಧ್ಯತೆ ಇದೆ.
ಭಾರತದ ಮೇಲೆ ಚೀನ ಹೊಸ ಯುದ್ದ ತಂತ್ರ?
ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಪ್ರಪಂಚದ ಅತೀದೊಡ್ಡ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಮುಂದಾಗಿದೆ. ಇದು ಭಾರತದ ವಿರುದ್ಧ ಚೀನ ಅನುಸರಿಸುತ್ತಿರುವ ಹೊಸ ಯುದ್ಧ ತಂತ್ರ ಎಂಬ ವ್ಯಾಖ್ಯಾನಗಳು ಸಹ ಕೇಳಿಬಂದಿವೆ. ಚೀನದ ಅಣೆಕಟ್ಟಿನಿಂದ ಭಾರತಕ್ಕೆ ಭಾರೀ ಸಮಸ್ಯೆಯಾಗಬಹುದು.
- ಬರ ಪರಿಸ್ಥಿತಿ: ಭಾರತಕ್ಕೆ ಇಷ್ಟು ಸಮೀಪದಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿರುವುದರಿಂದ, ಭಾರತ ಹಾಗೂ ಬಾಂಗ್ಲಾದೇಶಗಳಿಗೆ ಬ್ರಹ್ಮಪುತ್ರ ನದಿ ನೀರು ತಪ್ಪಿಹೋಗಬಹುದು. ಇದರಿಂದಾಗಿ ಈ ನದಿ ನೀರನ್ನೇ ನಂಬಿರುವ ಕೃಷಿಕರು ಸಮಸ್ಯೆ ಅನುಭವಿಸಬಹುದು. ಜತೆಗೆ ನದಿಪಾತ್ರದಲ್ಲಿರುವ ಜೀವ ಸಂಕುಲ ನಾಶವಾಗಬಹುದು.
- ಭಾರೀ ಪ್ರವಾಹ: ಅಣೆಕಟ್ಟು ತುಂಬಿದ ಬಳಿಕ ಒಂದೇ ಬಾರಿಗೆ ಅದನ್ನು ತೆರೆಯುವ ಮೂಲಕ ಭಾರತದಲ್ಲಿ ಪ್ರವಾಹ ಸೃಷ್ಟಿಸಲು ಚೀನ ಮುಂದಾಗಬಹುದು. ಹೀಗಾದಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗಳಲ್ಲಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇದೆ.
- ಚೀನ ಸೇನೆಗೆ ಲಾಭ: ಭಾರತವನ್ನು ತಲುಪಲು ಚೀನ ಸೇನೆಗೆ ನಮ್ಮ ಸೈನಿಕರ ಜತೆಗೆ ಸವಾಲಾಗಿರುವುದು ಹಿಮಾಲಯ ಮತ್ತು ಅದರ ತಪ್ಪಲಿನ ದಟ್ಟ ಅರಣ್ಯ. ಒಂದು ವೇಳೆ ಇಲ್ಲಿ ಅಣೆಕಟ್ಟು ನಿರ್ಮಾಣ ಆರಂಭವಾದರೆ, ಚೀನ ಸುಸಜ್ಜಿತ ರಸ್ತೆಗಳನ್ನು ನಿರ್ಮಾಣ ಮಾಡುತ್ತದೆ. ಹೀಗಾಗಿ ಭಾರತದ ಗಡಿಯನ್ನು ತಲುಪುವುದು ಚೀನ ಸೇನೆಗೆ ಸುಲಭವಾಗಲಿದೆ.
ಭಾರತ – ಚೀನ ನಡುವೆ ಒಪ್ಪಂದವೇ ಇಲ್ಲ
ಬಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದಕ್ಕೆ ಭಾರತ 2020ರಲ್ಲೇ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಬ್ರಹ್ಮಪುತ್ರ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಯಾವುದೇ ನಿರ್ದಿಷ್ಟವಾದ ಒಪ್ಪಂದಗಳಿಲ್ಲ. 2006ರಲ್ಲಿ ನದಿ ನೀರು ಹಂಚಿಕೆಗೆ ಮಾಡಿಕೊಂಡಿದ್ದ ಒಪ್ಪಂದ 2023ರಲ್ಲಿ ಅಂತ್ಯವಾಗಿದೆ. ಈ ಒಪ್ಪಂದ ಅಂತ್ಯವಾದ ಬಳಿಕವೇ ಚೀನ ವಿಶ್ವದ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಕಳೆದ ಡಿ.18ರಂದು ನಡೆದ ಸಭೆಯಲ್ಲಿ ಉಭಯ ದೇಶಗಳು ಈ ಬಗ್ಗೆ ಮಾತುಕತೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಬ್ರಹ್ಮಪುತ್ರ ಈಶಾನ್ಯ ಭಾರತದ ಜೀವನದಿ
ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ಪಾಲಿಗೆ ಬ್ರಹ್ಮಪುತ್ರ ನದಿ ಜೀವನದಿಯಾಗಿದೆ. ಭಾರತದ ಸಿಹಿ ನೀರಿನ ಸಂಪನ್ಮೂಲದಲ್ಲಿ ಬ್ರಹ್ಮಪುತ್ರ ನದಿಯ ಪಾಲು ಶೇ.30ರಷ್ಟಿದೆ. ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನ ಜನ ತಮ್ಮ ವ್ಯವಸಾಯ ಮತ್ತು ಕುಡಿ ಯುವ ನೀರಿಗೆ ಬ್ರಹ್ಮಪುತ್ರವನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಬ್ರಹ್ಮಪುತ್ರ ಈ 2 ರಾಜ್ಯಗಳಲ್ಲಿ ಪ್ರವಾಹ ಸೃಷ್ಟಿ ಮಾಡುತ್ತದೆ. ಆದರೂ ಇಲ್ಲಿನ ಬೆಳೆಗಳಿಗೆ ಈ ನದಿಯೇ ಮೂಲವಾಗಿದೆ. ಚೀನ ನಿರ್ಮಾಣ ಮಾಡುವ ಅಣೆಕಟ್ಟು ಇದೆಲ್ಲವನ್ನೂ ನಾಶ ಮಾಡುವ ಸಾಧ್ಯತೆ ಇದೆ.
ಅಣೆಕಟ್ಟಿನಿಂದಾಗುವ ಪರಿಣಾಮ
ನದಿ ಪಾತ್ರದಲ್ಲಿರುವ ಜೀವ ವ್ಯವಸ್ಥೆ ನಾಶವಾಗಲಿದೆ
ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಧಕ್ಕೆ
ಟಿಬೆಟ್‌ನ ದೊಡ್ಡ ಭೂ ಪ್ರದೇಶದಲ್ಲಿ ಬದಲಾವಣೆ
ಭಾರೀ ಸಂಖ್ಯೆಯಲ್ಲಿ ಜನರಿಗೆ ಪುನರ್ವಸತಿ ಸವಾಲು
ಮಣ್ಣಿನ ಸವಕಳಿ, ಭೂಕಂಪ, ಹೂಳಿನ ಸಮಸ್ಯೆ
ಅಣೆಕಟ್ಟೆಯ ಕೆಳಗಿನ ಪ್ರಾಣಿ ಆವಾಸ ನಾಶವಾಗಲಿದೆ
■ ಗಣೇಶ್ ಪ್ರಸಾದ್