Advertisement
ರೈತರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲಸದ ಅವಧಿಯನ್ನು ಬೆಳಗ್ಗೆ 8 ರಿಂದ 11ರ ತನಕ ಹಾಗೂ ಸಂಜೆ 5 ರಿಂದ 8ರ ತನಕ ನಿಗದಿಪಡಿಸಲಾಗಿದೆ ಎಂದು ರಾಜ್ಯ ಸರಕಾರಿ ಕಾರ್ಯಕ್ರಮಗಳ ಬಲವರ್ಧನಾ, ಜಾಡೀಕರಣ ಹಾಗೂ ಸರಳೀಕರಣ ಸಮಿತಿಗೆ ಪತ್ರ ಬರೆಯಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ವಿ. ಕಲಾವತಿ ಅವರು ಪ್ರಾ.ಆ.ಕೇಂದ್ರದ ಕೆಲಸದ ಅವಧಿ ಬದಲಾವಣೆ ಸಂಬಂಧ ಕಳೆದ ಜೂ.22 ರಂದು ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸಮಯ ಬದಲಾವಣೆ ಕುರಿತಂತೆ ಸುತ್ತೋಲೆ ಹೊರಡಿಸುವಂತೆ ತಿಳಿಸಿದ್ದಾರೆ.
ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲಸದ ಅವಧಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಡೆಸಿರುವ ಚಿಂತನೆ ಸಂಪೂರ್ಣ ಅವೈಜ್ಞಾನಿಕ ಎಂಬುದು ಇಲಾಖೆ ಸಿಬ್ಬಂದಿ ಅಭಿಪ್ರಾಯ. ಈ ಹೊಸ ವೇಳಾಪಟ್ಟಿಯಿಂದ ಕೂಲಿ ಕೆಲಸಕ್ಕೆ ಹೋಗುವವರು ಹಾಗೂ ರೈತರು ಆರೋಗ್ಯ ಸೇವೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟು ಬೇಗನೆ ರೈತರು ತಮ್ಮ ದೈನಂದಿನ ಕೆಲಸ ಮುಗಿಸಿ ಆರೋಗ್ಯ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ. ಈ ಹಿಂದಿನಂತೆಯೇ ವೇಳಾಪಟ್ಟಿ ಇರಬೇಕು ಎನ್ನುತ್ತಾರೆ ಸಿಬ್ಬಂದಿ.
Related Articles
ಇದರೊಂದಿಗೆ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯಲ್ಲಿ ಹೆಚ್ಚಿನವರು ಪಟ್ಟಣ ಹಾಗೂ ನಗರ ಪ್ರದೇಶದಿಂದ ದಿನವೂ ಹೋಗಿ ಬರುತ್ತಾರೆ. ಹಾಲಿ ಇರುವ ಸಮಯದಲ್ಲೇ ಬಹಳಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿಲ್ಲವೆಂಬ ದೂರುಗಳಿವೆ. ಈಗ ವೇಳೆ ಬದಲಾಯಿಸಿದರೆ ಪರಿಸ್ಥಿತಿ ಏನಾಗಬಹುದು ಎಂಬುದು ಊಹೆಗೂ ನಿಲುಕದಾಗಿದೆ.
Advertisement
ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರಣ:ರಾಜ್ಯದಲ್ಲಿ ಪ್ರಸ್ತುತ 2,355 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಬಹುತೇಕ ಅಂದರೆ ಶೇ.70 ರಷ್ಟು ಗ್ರಾಮೀಣ ಪ್ರದೇಶದಲ್ಲಿದ್ದರೆ, ಶೇ.30ರಷ್ಟು ನಗರ ಹಾಗೂ ಪಟ್ಟಣ ಪ್ರದೇಶದಲ್ಲಿವೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 2 ಸಾವಿರ ಸಿಬ್ಬಂದಿ ಎಂದು ಲೆಕ್ಕ ಹಿಡಿದರೂ ರಾಜ್ಯಾದ್ಯಂತ ಸುಮಾರು 60 ರಿಂದ 70 ಸಾವಿರ ಸಿಬ್ಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವೇಳೆ ಬದಲಾವಣೆ ಆದರೆ ಸಿಬ್ಬಂದಿ ಹಾಗೂ ಜನರಿಗೆ ತೊಂದರೆ ಉಂಟಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲಸದ ವೇಳೆ ಬದಲಾವಣೆ ಸಂಬಂಧ ಸರ್ಕಾರ ನಡೆಸಿರುವ ಚಿಂತನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆ ಬಗ್ಗೆ ಸರಕಾರದ ಉನ್ನತ ಮಟ್ಟದಲ್ಲಿ ಇನ್ನಷ್ಟೇ ಚರ್ಚೆ ನಡೆಯಬೇಕಿದೆ.
– ಎಸ್.ವಿ. ಕಲಾವತಿ, ಸರಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. – ಗೋಪಾಲ್ ಯಡಗೆರೆ