ಕಾರ್ಕಳ: ಅರೋಗ್ಯವೆಂಬುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಯಾವುದೇ ಕ್ಷಣದಲ್ಲಿ ಆರೋಗ್ಯ ಕೆಡಬಹುದು. ಇಲ್ಲಿನ ತೆಳ್ಳಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರಕ್ಕೆ ಎರಡೇ ದಿನ ವೈದ್ಯರ ಸೇವೆ ದೊರಕುತ್ತಿದ್ದು ಇದರಿಂದ ನಾಗರಿಕರು ತೀವೃ ಸಮಸ್ಯೆ ಎದುರಿಸುತ್ತಿದ್ದಾರೆ.
ಇಲ್ಲಿನ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಇದರಿಂದಾಗಿ ಮಂಗಳವಾರ ಮತ್ತು ಶುಕ್ರವಾರ ಈ ಎರಡು ದಿನ ಸೇವೆಗೆ ಲಭ್ಯರಾಗುತ್ತಿದ್ದಾರೆ. ಇಲ್ಲಿ ದೀರ್ಘಾವಧಿಯಿಂದ ಖಾಯಂ ವೈದ್ಯರ ಭರ್ತಿಯಾಗದೆ ಉಳಿದಿದೆ. ಆಸುಪಾಸಿನ ಆಸ್ಪತ್ರೆಯಿಂದ ವೈದ್ಯರು ಇಲ್ಲಿಗೆ ವಾರದಲ್ಲಿ ಎರಡು ದಿನ ಆಗಮಿಸಿ ಆರೋಗ್ಯ ಸೇವೆ ನೀಡುತ್ತಿದ್ದಾರೆ. ವೈದ್ಯರು ಎರಡು ದಿನವಷ್ಟೇ ಇರುವುದರಿಂದ ನಾಗರಿಕರಿಗೆ ಎಲ್ಲ ಸಮಯದಲ್ಲಿ ವೈದ್ಯ ಸಏವೆ ಸಿಗದೆ ತೊಂದರೆಯಾಗುತ್ತಿದೆ. ತೆಳ್ಳಾರು ವೈದ್ಯ ಕೇಂದ್ರದಲ್ಲಿ ಸಿಬಂದಿ ಕೊರತೆಯೂ ಇದೆ. ನರ್ಸ್‌ಗಳು ತಾತ್ಕಾಲಿಕ ಹುದ್ದೆಗಳ ನೆಲೆಯಲ್ಲಿವೆ. ಖಾಯಂ ವೈದ್ಯರ ಸಹಿತ ಮೂಲಸೌಕರ್ಯ ಸಮಸ್ಯೆಗಳಿಂದ ವೈದ್ಯಕೀಯ ಸೇವೆ ಇಲ್ಲಿ ಸರಿಯಾಗಿ ಸಿಗುತಿಲ್ಲ ಎನ್ನುವ ದೂರುಗಳು ಇಲ್ಲಿ ಕೇಳಿಬರುತ್ತಿವೆ.
ತೆಳ್ಳಾರು ಒಳಗೊಂಡ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಕೇಂದ್ರಗಳ ವ್ಯಾಪ್ತಿಯಲ್ಲಿ 3.500ಕ್ಕೂ ಅಧಿಕ ಜನಸಂಖ್ಯೆಯಿದ್ದು ಇಲ್ಲಿನ ಗ್ರಾಮಸ್ಥರಿಗೆ ಸಮರ್ಪಕ ರೀತಿಯಲ್ಲಿ ಆರೋಗ್ಯ ಸೇವೆ ಲಭ್ಯವಾಗುತಿಲ್ಲ ಎನ್ನುವ ದೂರುಗಳು ಹಿಂದಿನಿಂದಲೂ ಕೇಳಿ ಬಂದಿತ್ತು.
ದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಈ ಹಿಂದೆ ಖಾಯಂ ವೈದ್ಯರಿರಲಿಲ್ಲ. ಕಳೆದ ಜನವರಿಯಿಂದ ಖಾಯಂ ವೈದ್ಯರಿಲ್ಲದೆ ಜನ ತೊಂದರೆ ಅನಿಭವಿಸುತ್ತಿದ್ದರು. ಕೆಲಸ ಸಮಯಗಳ ಹಿಂದೆ ಅಲ್ಲಿನ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಖಾಯಂ ವೈದ್ಯರ ನೇಮಕವಾಗಿದೆ. ಆದರೇ ತೆಳ್ಳಾರು ಆರೋಗ್ಯ ಉಪಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಿಲ್ಲ.
ತೆಳ್ಳಾರು ಹಳ್ಳಿ ಪ್ರದೇಶವಾಗಿದ್ದು ಗುಡ್ಡಕಾಡುಗಳಿಂದ ಕೂಡಿದೆ. ಇಲ್ಲಿ ನೆಟ್ ವರ್ಕ್ ಸಮಸ್ಯೆಯೂ ಗಂಭೀರವಾಗಿದೆ. ಆರೋಗ್ಯ ಸಮಸ್ಯೆಗಳು ಎದುರಾಗದ ತತ್‌ಕ್ಷಣಕ್ಕೆ ಸಂರ್ಕಿಸಲು ಸಾಧ್ಯವಾಗುತಿಲ್ಲ. ನೀರಿನ ಸಮಸ್ಯೆಯೂ ಇದ್ದು ನಳ್ಳಿ ನೀರನ್ನೆ ಆಶ್ರಯಿಸಿಕೊಳ್ಳಬೇಕಿದೆ. ಎರಡು ಬೆಡ್ ವ್ಯವಸ್ಥೆಯಷ್ಟೆ ಇದ್ದು ರೋಗಿಗಳನ್ನು ಡೇ ಕೇರ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ. ಔಷಧಗಳ ಕೊರತೆಯಾದಲ್ಲಿ ಹೊರಗಿನಿಂದ ಖರೀದಿಸಿ ನೀಡಬೇಕಿದ್ದು ಗಂಭಿರ ಪ್ರಕರಣಗಳೆಂದು ಕಂಡುಬಂದರೆ ತಾಲೂಕು ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ. ಹೀಗಾಗಿ ತೆಳ್ಳಾರ ಗ್ರಾಮಸ್ಥರು ಆರೋಗ್ಯ ಕ್ಷೇತ್ರದಲ್ಲಿ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ದುರ್ಗ ಮತ್ತು ಮಿಯ್ನಾರು ಗ್ರಾಮ ಪಂಚಾಯತ್‌ನ ಗಡಿಭಾಗದ ಪ್ರದೇಶ ನಿವಾಸಿಗಳಂತೂ ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ.
-ಬಾಲಕೃಷ್ಣ ಭೀಮಗುಳಿ