Advertisement

Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್‌!

02:46 PM Oct 29, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಮುಂದಿನ ದಿನಗಳಲ್ಲಿ ನಗರಕ್ಕೆ ಗೋವಾ ಹಾಗೂ ಲಕ್ಷದ್ವೀಪದ ಅಗತ್ತಿ ದೂರ ಮತ್ತಷ್ಟು ಹತ್ತಿರವಾಗಲಿವೆ. ಗೋವಾ ಮೂಲದ ವಿಮಾನಯಾನ ಸಂಸ್ಥೆಯೊಂದು ಈ ಪ್ರದೇಶಗಳಿಗೆ ವಿಮಾನಯಾನ ಸೇವೆ ಆರಂಭಿಸಲು ಮುಂದಾಗಿದ್ದು, ಅನುಮತಿ ಸೇರಿದಂತೆ ಒಂದಿಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಇನ್ನೇನು ವಿಮಾನಯಾದ ಆರಂಭವೊಂದೇ ಬಾಕಿಯಿದೆ.

Advertisement

ನಗರದಿಂದ ವಿವಿಧ ಭಾಗಗಳಿಗೆ ವಿಮಾನಯಾನ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ ಕೂಡ ಮೇಲ್ದರ್ಜೆಗೇರಿಸುವ ಕೆಲಸ ಭರದಿಂದ ಸಾಗುತ್ತಿದೆ. ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಿಸಿಕೊಳ್ಳುವ ವಾಣಿಜ್ಯ ನಗರಿಯಿಂದ ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಕೆಲ ಜನಪ್ರತಿನಿಧಿಗಳಿಂದ ನಿರಂತರವಾಗಿ ನಡೆಯುತ್ತಿವೆ.

ಇದರ ಫಲವಾಗಿ ಕೆಲವೊಂದು ವಿಮಾನ ಸೇವೆ ಇಲ್ಲಿಗೆ ದೊರಕಿದೆ. ಆದರೆ ಕಾರಣಾಂತರದಿಂದ ಕೆಲವು ರದ್ದಾದರೆ ಕೆಲವೊಂದು ಬೇರೆ ನಗರಕ್ಕೆ ಸ್ಥಳಾಂತರಗೊಂಡಿವೆ. ಇದರ ನಡುವೆಯೂ ನಗರದಿಂದ ಗೋವಾ ಮೂಲಕ “ಫ್ಲೈ-91′ ವಿಮಾನಯಾನ ಸಂಸ್ಥೆ ವಿಮಾನಯಾನ ಸೇವೆ ನೀಡಲು ಮುಂದಾಗಿದೆ.

ಮೂರು ನಗರಗಳಿಗೆ ಸೇವೆ: ಹುಬ್ಬಳ್ಳಿಯಿಂದ ಗೋವಾ, ಬೆಳಗಾವಿ ಹಾಗೂ ಲಕ್ಷದ್ವೀಪದ ಅಗತ್ತಿಗೆ ವಿಮಾನಯಾನ ಆರಂಭಿಸಲು ನಿಯಂತ್ರಕರಾದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ದಿಂದ ವಾಯುಯಾನ ನಿರ್ವಹಣೆ ಪ್ರಮಾಣಪತ್ರ (ಎಒಸಿ) ಪಡೆದಿದೆ. ಸಂಸ್ಥೆ 2025ರ ಮೊದಲಾರ್ಧದಿಂದ ಈ ಮೂರು ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನಯಾನ
ಪ್ರಾರಂಭಿಸುವ ಸಾಧ್ಯತೆಗಳಿವೆ.

Advertisement

ಫ್ಲೈ -91 ವಿಮಾನಯಾನ ಸಂಸ್ಥೆ ಹುಬ್ಬಳ್ಳಿಯಿಂದ ಗೋವಾ, ಬೆಳಗಾವಿ ಹಾಗೂ ಲಕ್ಷದ್ವೀಪದ ಅಗತ್ತಿಗೆ ಪ್ರತಿದಿನ ತನ್ನ ವಿಮಾನಯಾನದ ಕಾರ್ಯಾಚರಣೆ ಆರಂಭಿಸಲು ಡಿಜಿಸಿಎದಿಂದ ಅನುಮತಿ ಪಡೆದಿದೆ. ಅಲ್ಲದೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಿಂದಲೂ ಸ್ಲಾಟ್‌ ಅಲೋಕೇಶನ್‌ ಕೂಡ ಪಡೆದಿದೆ. ಆದರೆ ಇದುವರೆಗೆ ಫ್ಲೈ-91 ಸಂಸ್ಥೆಯವರು ಹುಬ್ಬಳ್ಳಿ ನಿಲ್ದಾಣದ ನಿರ್ದೇಶಕರನ್ನು ಖುದ್ದಾಗಿ ಸಂಪರ್ಕಿಸಿಲ್ಲ ಎಂದು ಮೂಲಗಳು ತಿಳಿಸಿದ್ದು, ಸದ್ಯ ಈ ಸಂಸ್ಥೆಯು ಗೋವಾದಿಂದ ಬೆಂಗಳೂರು, ಜಲಗಾಂವ, ಪುಣೆ, ಸಿಂಧದುರ್ಗ, ಹೈದರಾಬಾದ್‌, ಅಗತ್ತಿ ಸೇರಿದಂತೆ ಕೆಲ ಸ್ಥಳಗಳಿಗೆ ವಿಮಾನಯಾನ ಸೇವೆ ನೀಡುತ್ತಿದೆ.

ಸಂಸ್ಥೆ ಹಿನ್ನೆಲೆ: ಫ್ಲೈ-91 ಕಂಪನಿ ಗೋವಾದ ರಿಬಂದರ್‌ ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಜಸ್ಟ್‌ ಉಡೊ ಎವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಮೂಲ ಸಂಸ್ಥೆಯಾಗಿದೆ. ಫ್ಲೈ-91 ಇದು ಭಾರತದ ಅತಿ ಕಡಿಮೆ ದರದ ಪ್ರಾದೇಶಿಕ ಏರ್‌ಲೈನ್ಸ್‌ ಆಗಿದೆ. ಉತ್ತರ ಗೋವಾ ಜಿಲ್ಲೆಯ ಮನೋಹರ ಪರಿಕರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಮೋಪಾ)ದಿಂದ ತನ್ನ ವಿಮಾನಯಾನ
ಕಾರ್ಯಾಚರಣೆ ನಡೆಸುತ್ತಿದೆ. ಈ ಏರ್‌ಲೈನ್ಸ್‌ ಅನ್ನು ವಾಯುಯಾನದ ಮಾಜಿ ಶೂರ ಹರ್ಷ ರಾಘವನ್‌ 2023ರ ಜ.9ರಂದು ಸ್ಥಾಪಿಸಿದ್ದಾರೆ. ಇದರ ಚೇರ್ಮನ್‌ ಕೂಡ ಆಗಿದ್ದಾರೆ. ಮನೋಜ್‌ ಚಾಕೋ ಎಂಡಿ, ಸಿಇಒ ಆಗಿದ್ದಾರೆ. ಈ ಸಂಸ್ಥೆಯಡಿ 200ಕ್ಕೂ ಹೆಚ್ಚು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ದೇಶದ ದ್ವಿತೀಯ ಮತ್ತು ತೃತೀಯ ಶ್ರೇಣಿಯ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸುತ್ತಿದೆ.

ಕಚೇರಿ, ಬುಕಿಂಗ್‌ ಅಷ್ಟೇ ಬಾಕಿ
ನಗರದಿಂದ ಗೋವಾ, ಬೆಳಗಾವಿ ಹಾಗೂ ಲಕ್ಷದ್ವೀಪದ ಅಗತ್ತಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಇನ್ನು ಇಲ್ಲಿನ ನಿಲ್ದಾಣದ ನಿರ್ದೇಶಕರನ್ನು ಖುದ್ದಾಗಿ ಭೇಟಿಯಾಗಿ ಕಚೇರಿಯೊಂದನ್ನು ಆರಂಭಿಸಬೇಕಿದೆ. ಇದಾದ ನಂತರ ಟಿಕೆಟ್‌ ಬುಕಿಂಗ್‌ ಆರಂಭವಾಗಲಿದೆ. ಅಂದುಕೊಂಡಂತೆ ಶೀಘ್ರದಲ್ಲಿ ಆರಂಭವಾದರೆ ಗೋವಾ ವಿಮಾನ ಸೇವೆ ಪುನಃ ದೊರಕಿದಂತಾಗಲಿದೆ. ಇನ್ನೂ ಲಕ್ಷ ದ್ವೀಪ ಅಗತ್ತಿಗೆ ನೇರವಾಗಿ ಸಂಪರ್ಕ ಕಲ್ಪಿಸುವುದಿಂದ ವಾಣಿಜ್ಯನಗರಿ ನಿಸರ್ಗ ಪ್ರತಿಯರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಫ್ಲೈ-91 ವಿಮಾನಯಾನ ಸಂಸ್ಥೆಯವರು ಹುಬ್ಬಳ್ಳಿಯಿಂದ ಗೋವಾ, ಬೆಳಗಾವಿ, ಲಕ್ಷದ್ವೀಪದ ಅಗತ್ತಿಗೆ ಯಾನ ಆರಂಭಿಸಲು
ಡಿಜಿಸಿಎದಿಂದ ಅನುಮತಿ ಪಡೆದುಕೊಂಡಿದ್ದಾರೆ. ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸ್ಲಾಟ್‌ ಅಲೋಕೇಶನ್‌ ಸಹ ಪಡೆದುಕೊಂಡಿದ್ದಾರೆ. ಆದರೆ ಇದುವರೆಗೂ ಆ ಸಂಸ್ಥೆಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.
*ರೂಪೇಶ ಕುಮಾರ,
ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ

■ ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next