Advertisement

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

02:39 PM Oct 27, 2024 | Team Udayavani |

ಪ್ರತೀ ವರ್ಷ ತಂಬಾಕು ಸೇವನೆಯಿಂದ ಸುಮಾರು 80 ಲಕ್ಷ ಜನರು ಅಕಾಲಿಕ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ದೃಢೀಕರಿಸಿದೆ. ಬೀಡಿ, ಸಿಗರೇಟ್‌ ಮಾತ್ರವಲ್ಲದೆ ಜಗಿಯುವ ತಂಬಾಕಿನಿಂದಲೂ ಕ್ಯಾನ್ಸರ್‌ ಕಾಯಿಲೆಗಳು, ಹೃದಯ ಸಂಬಂಧಿ, ಶ್ವಾಸಕೋಶ ಕಾಯಿಲೆಗಳು ಹಾಗೂ ಸಾವು ಉಂಟಾಗುತ್ತಿದೆ. ಅದರಿಂದ ಜನರು ಉತ್ತಮ ಆರೋಗ್ಯಕ್ಕಾಗಿ ಎಲ್ಲ ರೀತಿಯ ತಂಬಾಕು ಸೇವನೆ, ಬಳಕೆ ಅವಲಂಬನೆಯನ್ನು ತ್ಯಜಿಸಬೇಕಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವನ್ನು ಉಂಟುಮಾಡುತ್ತಿರುವ ತಂಬಾಕಿನ ಪಿಡುಗನ್ನು ನಿಯಂತ್ರಣ ಮಾಡಲು ಎಲ್ಲ ದೇಶಗಳು ಪ್ರಯತ್ನಗಳನ್ನು ನಡೆಸುತ್ತಿವೆ.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನದ ಮೇರೆಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವು 2006-07 ರಿಂದ ಜಾರಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಉದ್ದೇಶಗಳಿದ್ದು, ತಂಬಾಕು ಅವಲಂಬಿತರಿಗೆ ಸೇವನೆಯನ್ನು ತ್ಯಜಿಸಿ ಹೊರಬರಲು ಪ್ರತೀ ಜಿಲ್ಲಾಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ತಂಬಾಕು ಸೇವನೆ ಮಾಡುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ, ನಮ್ಮ ದೇಶದಲ್ಲಿ ಇನ್ನೂ ಹೆಚ್ಚು ಕೇಂದ್ರಗಳ ಆವಶ್ಯಕತೆ ಇದೆ. ಭಾರತದಲ್ಲಿ 2016-17ರ ವಯಸ್ಕರ ಸಮೀಕ್ಷೆಯ ಪ್ರಕಾರ ಸುಮಾರು ಶೇ. 28.6 ಜನರು ತಂಬಾಕು ಪದಾರ್ಥಗಳನ್ನು ಬಳಸುತ್ತಿದ್ದಾರೆ. ಈ ಸಮೀಕ್ಷೆಯ ಪ್ರಕಾರ ಶೇ. 55.4 ತಂಬಾಕು ಅವಲಂಬಿತರು ಇದನ್ನು ಬಿಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಯಶಸ್ವಿಯಾಗಿ ತಂಬಾಕು ಸೇವನೆಯಿಂದ ಹೊರಬಂದವರ ಸಂಖ್ಯೆ ಕೇವಲ ಶೇ. 7 ಆಗಿರುತ್ತದೆ. ತಂಬಾಕು ವರ್ಜನ ಕೇಂದ್ರಗಳು ನಮ್ಮ ದೇಶದಲ್ಲಿ ಬೇಕಾಗಿರುವ ಸಂಖ್ಯೆಗಳಲ್ಲಿ ಇಲ್ಲವೆಂದು, ಇಂತಹ ಕೇಂದ್ರಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಬೇಕು ಎಂದು ಸಮೀಕ್ಷೆಯ ವರದಿ ತಿಳಿಸುತ್ತದೆ. ಈ ಹಿನ್ನಲೆಯಲ್ಲಿ ಧೂಮಪಾನ ತ್ಯಜಿಸಲು ಬಯಸುವವರಿಗೆ ಸಹಾಯ ಮಾಡಲು ಹಾಗೂ ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತೀ ವೈದ್ಯಕೀಯ ಕಾಲೇಜುಗಳು ಕಡ್ಡಾಯವಾಗಿ ತಂಬಾಕು ವರ್ಜನ ಕೇಂದ್ರವನ್ನು (Tobacco Cessation Centre) ಜನಸಾಮಾನ್ಯರ ಉಪಯೋಗಕ್ಕಾಗಿ ಸ್ಥಾಪಿಸಬೇಕೆಂದು ತನ್ನ ಸುತ್ತೋಲೆ ಇತ್ತೀಚೆಗೆ ಹೊರಡಿಸಿದೆ. ಈ ನಿರ್ಧಾರವು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಉಪಯುಕ್ತವಾಗಿದ್ದು, ಸ್ವಾಗತಾರ್ಹವಾಗಿದೆ. ತಂಬಾಕು ಸೇವನೆಯಿಂದ ಹೊರಬರಲು ಇಚ್ಛಿಸುವವರಿಗೆ ಇದೊಂದು ಉತ್ತಮ ಅವಕಾಶ ಒದಗಿಸಿಕೊಡುತ್ತದೆ.

 

ತಂಬಾಕು ವರ್ಜನ ಕೇಂದ್ರದ ಚಟುವಟಿಕೆಗಳು
ವ್ಯದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸ್ಥಾಪಿತಗೊಳ್ಳುತ್ತಿರುವ ಇಂತಹ ಕೇಂದ್ರಗಳಲ್ಲಿ ನುರಿತ ಮನೋವೈದ್ಯರು, ಸಮುದಾಯ ವೈದ್ಯಕೀಯ ತಜ್ಞರು, ಆಪ್ತ ಸಲಹೆಗಾರರು ಮತ್ತು ವೈದ್ಯಕೀಯ ಸಮಾಜಸೇವಕರು ಒಳಗೊಂಡು ಸೂಕ್ತ ಉಪಕರಣಗಳೊಂದಿಗೆ ತಪಾಸಣೆ ನಡೆಸಲಾಗುತ್ತದೆ. ಅಧಿಕ ರಕ್ತದೊತ್ತಡ, ಡಯಾಬಿಟಿಸ್‌, ಇತರ ಹೃದಯ ಕಾಯಿಲೆಗಳು, ಕ್ಯಾನ್ಸರ್‌, ಕ್ಷಯ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಆದ್ಯತೆಯ ಮೇರೆಗೆ ತಂಬಾಕಿನ ದುಷ್ಪರಿಣಾಮಗಳನ್ನು ತಿಳಿಸಿ ಅದನ್ನು ವರ್ಜಿಸಲು ಉತ್ತೇಜನ ನೀಡಲಾಗುವುದು.ಈ ಕೇಂದ್ರವು ಆಸ್ಪತ್ರೆಗೆ ಬರುವ ರೋಗಿಗಳ ನೋಂದಣಿ ಕಚೇರಿಯ ಸಮೀಪದಲ್ಲಿ ಇರಲಿದ್ದು, ಆಸ್ಪತ್ರೆಗೆ ಬರುವ ಎಲ್ಲರಿಗೂ ಸೇವೆ ನೀಡಲಿದೆ.

Advertisement

ತಂಬಾಕು ಬಳಕೆ ಮೇಲೆ ಅವಲಂಬಿತವಾದವರಿಗೆ ಬಳಕೆ ತ್ಯಜಿಸಲು ಸಹಾಯ ಮಾಡಲು ವೈದ್ಯರು, ಆಪ್ತ ಸಮಾಲೋಚಕರು ನಿಮ್ಮ ಪ್ರತೀ ಭೇಟಿ ಸಂದರ್ಭದಲ್ಲಿ ತಂಬಾಕು ಬಳಕೆಯ ತಮ್ಮ ಪರಿಸ್ಥಿತಿ ಹಾಗೂ ತಮ್ಮ ಸಂಬಂಧಿಸಿದ ಸಮಸ್ಯೆಗಳನ್ನು ಕೇಳುತ್ತಾರೆ. ಜತೆಗೆ ಸ್ಪಷ್ಟ ವೈಯಕ್ತಿಕ ವಿಧಾನಗಳಲ್ಲಿ ಪ್ರತೀ ತಂಬಾಕು ಬಳಕೆದಾರರಿಗೆ ಅದನ್ನು ತ್ಯಜಿಸಲು ಸಲಹೆ ನೀಡುತ್ತಾರೆ. ಧೂಮಪಾನ ತ್ಯಜಿಸುವ ಇಚ್ಛೆ ಹೊಂದಿರುವವರಿಗೆ ಆಪ್ತ ಸಮಾಲೋಚನೆ ಹಾಗೂ ನಿಕೋಟಿನ್‌ ಬದಲಿ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ನೋಂದಣಿಯಾದ ತಂಬಾಕು ಅವಲಂಬಿತರಿಗೆ ಸೂಕ್ತ ಮಾಹಿತಿ ಹಾಗೂ ಔಷಧೋಪಚಾರವನ್ನು ನೀಡಿ ಪ್ರತೀ ತಿಂಗಳು ಬಂದು ತಪಾಸಣೆ ಹಾಗೂ ಸಮಾಲೋಚನೆ ನಡೆಸಿಕೊಳ್ಳಲು ಸೂಚಿಸಲಾಗುವುದು. ಕಾರಣಾಂತರಗಳಿಂದ ನೋಂದಾಯಿತರಿಗೆ ಆಸ್ಪತ್ರೆಗೆ ಬರಲು ಸಾಧ್ಯವಾಗದಿದ್ದರೆ ಸ್ವಯಂ ಸಹಾಯಕವಾಗುವ ಕೈಪಿಡಿ, ದೂರವಾಣಿ ಮೂಲಕ ಸಂಪರ್ಕಿಸಿ ಅವರ ಕ್ಷೇಮವನ್ನು ವಿಚಾರಿಸಿ, ತಂಬಾಕು ವರ್ಜನಕ್ಕೆ ದೃಢ ನಿರ್ಧಾರವನ್ನು ತೆಗೆದುಕೊಳ್ಳಲು ಉತ್ತೇಜನವನ್ನು ನೀಡಲಾಗುವುದು. ಏಕೆಂದರೆ ತಂಬಾಕಿನಲ್ಲಿರುವ ನಿಕೋಟಿನ್‌ ಅಂಶವು ಅತ್ಯಂತ ವ್ಯಸನಕಾರಿ ಪದಾರ್ಥಗಳಲ್ಲಿ ಒಂದಾಗಿದೆ. ತಂಬಾಕು ವರ್ಜನ ಪ್ರಕ್ರಿಯೆಯಲ್ಲಿ ಕೇಂದ್ರದ ಸಿಬಂದಿಯೊಂದಿಗೆ ಸಂಪರ್ಕ ಇಟ್ಟುಕೊಂಡು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಿ ಸೂಕ್ತ ಪರಿಹಾರ ಹಾಗೂ ಔಷಧಗಳನ್ನು ಬಳಸಿದಲ್ಲಿ ಯಶಸ್ವಿಯಾಗುವುದು ಸುಲಭವಾಗುತ್ತದೆ. ಈ ತಂಬಾಕು ಉತ್ಪನ್ನಗಳ ಅವಲಂಬನೆಯಿಂದ ಹೊರಬರಲು ಕೇಂದ್ರದ ಸಿಬ್ಬಂದಿಯ ಸಲಹೆ, ಕುಟುಂಬ ಹಾಗೂ ಸ್ನೇಹಿತರ ಪ್ರೋತ್ಸಾಹ ಮತ್ತು ಸಹಾಯ ಬಹಳ ಪ್ರಮುಖವಾಗಿವೆ.

ತಂಬಾಕು ಸೇವನೆ ಅವಲಂಬಿತರು ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಹೊಸದಾಗಿ ಸ್ಥಾಪಿಸಲಾಗುತ್ತಿರುವ ತಂಬಾಕು ವರ್ಜನ ಕೇಂದ್ರದ ಬಗ್ಗೆ ಎಲ್ಲರೂ ಅರಿವು ಪಡೆದು ಅಲ್ಲಿ ಸಿಗುತ್ತಿರುವ ಸೇವೆಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

-ಡಾ| ಮುರಳೀಧರ್‌ ಎಂ.ಕುಲಕರ್ಣಿ, ಪ್ರೊಫೆಸರ್‌
-ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ, ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next