Advertisement

Mental health: ತಾಯಂದಿರ ಮಾನಸಿಕ ಆರೋಗ್ಯ

02:32 PM Nov 04, 2024 | Team Udayavani |

‘ತಾಯಿ’ ಎಂದರೆ ಮಮತೆಯ ಕಡಲು, ಪ್ರೀತಿಯ ಸೆಲೆ, ಧೈರ್ಯದ ನೆಲೆ. ತಾಯಿಯನ್ನು ಪ್ರಕೃತಿಗೆ ಹೋಲಿಸಲಾಗಿದೆ. ತಾಯಿ ಎನ್ನುವವಳು ಮೊದಲು ಹೆತ್ತವರಿಗೆ ಮಗಳಾಗಿ, ಗಂಡನಿಗೆ ಮಡದಿಯಾಗಿ, ಅವಳ ಮಗುವಿಗೆ ತಾಯಿಯಾಗುತ್ತಾಳೆ. ಮಾತೃ ಸ್ವರೂಪಿ ತಾಯಿ ತನ್ನ ಗರ್ಭದಲ್ಲಿ ಮಗುವನ್ನು ಪೋಷಿಸಿ, ಹಡೆದು, ಹಾಲುಣಿಸಿ, ಬೆಳೆಸಿ ಪ್ರಪಂಚಕ್ಕೆ ಪರಿಚಯಿಸುತ್ತಾಳೆ. ತಾಯಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮೂಲ ಕಾರಣಳು ಎಂದರೆ ತಪ್ಪಾಗದು. ತಾಯಿಯಾದವಳು ತನ್ನ ಕುಟುಂಬದ ಪಾಲನೆಯ ಜತೆಗೆ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುತ್ತಾಳೆ. ತಾಯಿ ತನ್ನ ಜವಾಬ್ದಾರಿ ನಿಭಾಯಿಸುವ ಹಂತದಲ್ಲಿ ತನ್ನ ಆರೋಗ್ಯದ ಕಾಳಜಿ ವಹಿಸುವುದನ್ನು ಮರೆಯುತ್ತಾಳೆ. ತನ್ನ ದೈಹಿಕ ಬದಲಾವಣೆಗಳು, ಹಾರ್ಮೋನುಗಳ ವೈಪರೀತ್ಯ, ಇದರ ಜತೆಗೆ ತಾಯಿಯ ಮಾನಸಿಕ ಆರೋಗ್ಯವು ಮುಖ್ಯವಾಗಿದ್ದು, ಇದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ತಾಯಿಯ ಮಾನಸಿಕ ಆರೋಗ್ಯವು ಅವಳ, ಮಕ್ಕಳ, ಕುಟುಂಬದ, ಹಾಗು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬಲ್ಲುದು.

Advertisement

– ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯಕ್ಕಿರುವ ವ್ಯತ್ಯಾಸವೇನು?
– ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ ಏನು ?
– ಮಕ್ಕಳು ಮತ್ತು ಕುಟುಂಬದ ಮೇಲೆ ತಾಯಂದಿರ ಮಾನಸಿಕ ಆರೋಗ್ಯದ ಪ್ರಭಾವವೇನು?
– ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳಾವುವು ?
– ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಸ್ಥಿತಿ ಗುರುತಿಸುವುದು ಹೇಗೆ?
– ತಾಯಂದಿರ ಮಾನಸಿಕ ಆರೋಗ್ಯ ಸುಧಾರಿಸುವ ಮಾರ್ಗೋಪಾಯಗಳು ಯಾವುವು? ಈ ಬಗ್ಗೆ ಗಮನಹರಿಸೋಣ.

ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯ
ಮಾನಸಿಕ ಕಾಯಿಲೆಯು ತಾಯಂದಿರಲ್ಲಿ ದಿನನಿತ್ಯದ ಕೆಲಸ ನಿರ್ವಹಣೆಯಲ್ಲಿ ಒತ್ತಡ (ಕಿರಿಕಿರಿ) ಉಂಟುಮಾಡುತ್ತದೆ. ನಕಾರಾತ್ಮಕ ಭಾವನೆಗಳು, ಆಲೋಚನೆಗಳು ಹಾಗು ನಡವಳಿಕೆಗಳು, ಅನಗತ್ಯ ಒತ್ತಡಗಳು, ಕುಗ್ಗಿದ ಕಾರ್ಯಕ್ಷಮತೆ ಮತ್ತು ದಿನನಿತ್ಯದ ಕೆಲಸಗಳನ್ನು ನಿರ್ವಹಿಸುವಲ್ಲಿನ ವಿಫಲತೆಯನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಮಕ್ಕಳು, ಕುಟುಂಬ ಮತ್ತು ಸಮಾಜದ ಜತೆಗೆ ಪರಿಣಾಮಕಾರಿ ಸಂಬಂಧವನ್ನು ಬೆಳೆಸುವಲ್ಲಿ ತಡೆ ಒಡ್ಡುತ್ತದೆ. ಮಾನಸಿಕ ಕಾಯಿಲೆಯ ರೋಗಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ, ಮಾನಸಿಕ ತಜ್ಞರ ಸಲಹೆ ಪಡೆಯುವುದು ಆವಶ್ಯಕವಾಗಿದೆ.

ಮಾನಸಿಕ ಆರೋಗ್ಯವು ತಾಯಂದಿರ ಒಟ್ಟಾರೆ ಯೋಗಕ್ಷೇಮ ಮತ್ತು ಸ್ವಾಸ್ಥ್ಯದ ಬಗ್ಗೆ ತಿಳಿಸುತ್ತದೆ. ತಾಯಂದಿರು ತಮ್ಮ ದಿನನಿತ್ಯದ ಕರ್ತವ್ಯ ನಿರ್ವಹಣೆಯಲ್ಲಿ ತೋರಿಸುವ ಆಸಕ್ತಿ, ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅವರ ಆತ್ಮಸ್ಥೈರ್ಯ, ಮಕ್ಕಳು ಮತ್ತು ಕುಟುಂಬದ ಜತೆಗಿನ ಅವರ ಒಡನಾಟ, ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಅವರ ಸಕಾರಾತ್ಮಕ ಆಲೋಚನೆಗಳನ್ನು ತಿಳಿಸುತ್ತದೆ.

Advertisement

ತಾಯಿಯ ಮಾನಸಿಕ ಅಸ್ವಾಸ್ಥ್ಯದ ಪ್ರಭಾವವೇನು?
ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ನೇರ ಪ್ರಭಾವವನ್ನು ಉಂಟುಮಾಡುತ್ತದೆ. ತಾಯಿ ಮಗುವಿನ ಸಂಬಂಧ ಕರುಳ ಬಳ್ಳಿಯ ಸಂಬಂಧವಾಗಿದೆ. ಗರ್ಭಾವಾಸ್ಥೆಯಲ್ಲಿಯೇ ತಾಯಿ ಮತ್ತು ಭ್ರೂಣದ ಸಂಬಂಧ ಚಿಗುರೊಡೆಯುತ್ತದೆ. ಬೆಳೆಯುತ್ತಿರುವ ಭ್ರೂಣವು ತಾಯಿಯ ಹೃದಯ ಬಡಿತ ಹಾಗೂ ಧ್ವನಿಯ ಬಗ್ಗೆ ಅರಿವನ್ನು ಪಡೆಯುತ್ತದೆ. ಸ್ಪರ್ಶ ಮತ್ತು ಚಲನೆಗೆ ಪ್ರತಿಕ್ರಿಯಿಸುತ್ತದೆ. ತಾಯಂದಿರು ಇಂಥ ಸಮಯದಲ್ಲಿ ತಮ್ಮ ದೇಹದಲ್ಲಾಗುತ್ತಿರುವ ವೈಪರೀತ್ಯಗಳಿಗೆ ನೀಡುವ ಸ್ಪಂದನೆ ಅಥವಾ ಪ್ರಸವದ ಬಗೆಗಿನ ಅವರ ಭಯ, ಆತಂಕ ಭ್ರೂಣದ ಮೇಲೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲದೆ ಹೆರಿಗೆಯ ಅನಂತರದ ಬಾಣಂತಿಯ ಚೇತರಿಕೆ, ಹಾಲುಣಿಸುವ ಸಂದರ್ಭದ ಬದಲಾವಣೆಗಳು, ನಿದ್ರಾಭಂಗದಂತಹ ಸಂದರ್ಭದಲ್ಲಿ ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ಪ್ರಭಾವ ಬೀರುತ್ತದೆ.

ಜನನಿ ತಾನೇ ಮೊದಲ ಗುರು ಎಂಬ ಮಾತಿದೆ. ಮಕ್ಕಳು ತಾಯಿಯನ್ನು ನೋಡಿ ಕಲಿಯುವುದು, ಅನುಕರಿಸುವುದು ಸಾಮಾನ್ಯ. ತಾಯಿಯ ಭಾವನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳನ್ನು ಮಕ್ಕಳು ಕಲಿಯುತ್ತಾರೆ. ತಾಯಿಯ ದುಃಖದ ಅಭಿವ್ಯಕ್ತಿ, ಸಹಾನುಭೂತಿ ಹಾಗೂ ಸಹಾಯ ವರ್ತನೆಯನ್ನು ಪ್ರೋತ್ಸಾಹಿಸುತ್ತದೆ. ಕೋಪದ ಅಭಿವ್ಯಕ್ತಿ ಪ್ರತಿಭಟನೆ ಹಾಗೂ ಅಸ್ವಸ್ಥತೆಯನ್ನು ಸಂಕೇತಿಸುತ್ತದೆ. ತಾಯಿಯು ಸಮಸ್ಯೆಯನ್ನು ನಿಭಾಯಿಸುವಲ್ಲಿ ತೋರಿಸುವ ಕೌಶಲಗಳು ಮಗುವಿಗೆ ತಾನು ಇತರರೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧವನ್ನು ಬೆಳೆಸಲು, ಕಲಿಕೆಯ ಬಗ್ಗೆ ಆಸಕ್ತಿ ಹೊಂದಲು ಮತ್ತು ಶೈಕ್ಷಣಿಕ ಸಾಧನೆಯನ್ನು ಮಾಡಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಸ್ವಾಭಿಮಾನಿಯಾಗಲು, ಸಮಾಜದೊಂದಿಗೆ ಉತ್ತಮ ಭಾಂದವ್ಯ ಹೊಂದಲು ಹಾಗೂ ಜೀವನದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಮಾಡಲು ನೆರವಾಗಬಲ್ಲದು.

ತಾಯಿಯ ಮಾನಸಿಕ ಅಸ್ವಾಸ್ಥ್ಯವು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಮತ್ತು ಕುಟುಂಬದ ಪೋಷಣೆ, ಸಾಮರಸ್ಯ, ಉತ್ತಮ ಕೌಟುಂಬಿಕ ಸಂಬಂಧ, ಕುಟುಂಬದೊಂದಿಗೆ ಸಂವಹನ ಮಾದರಿಗಳು, ಉತ್ತಮ ಕುಟುಂಬ ನಿರ್ವಹಣೆಯಲ್ಲಿ ಸಹಾಯವಾಗಬಲ್ಲದು. ಕೌಟುಂಬಿಕ ಮನಸ್ತಾಪಗಳು, ಹೊಂದಾಣಿಕೆಯ ಕೊರತೆ, ಮಾನಸಿಕ ತುಮುಲ, ತಪ್ಪು ತಿಳಿವಳಿಕೆಗಳು, ಅತಿಯಾದ ನಿರೀಕ್ಷೆಗಳು, ಜಗಳ, ದುರ್ಬಲತೆ, ಉದ್ವೇಗ, ಒತ್ತಡ ಇವೇ ಮುಂತಾದವು ಕುಟುಂಬದ ಸ್ವಾಸ್ಥ್ಯ ಕೆಡಲು ಮಾರಕವಾಗಿದೆ.

ಮಾನಸಿಕ ಆರೋಗ್ಯದ ಗುಣಲಕ್ಷಣಗಳೇನು?
1. ಸ್ವಯಂ ಕಾಳಜಿ ಮತ್ತು ಸಮತೋಲನ
ತಾಯಂದಿರು ತಮ್ಮ ವಯಕ್ತಿಕ ಕಾಳಜಿ ಹಾಗು ವೃತ್ತಿಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು. ವಿಶ್ರಾಂತಿ ಮತ್ತು ಸಮಚಿತ್ತತೆಯನ್ನು ಹೊಂದುವಲ್ಲಿ ತೊಡಗಿಕೊಳ್ಳುವುದು.
2. ಸ್ಥಿತಿಸ್ಥಾಪಕತ್ವ ಮತ್ತು ನಿಭಾಯಿಸುವ ಕೌಶಲಗಳು
ತಾಯಂದಿರು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವಲ್ಲಿ ತೊಡಗಿಕೊಳ್ಳುವುದು.
3. ಸಕಾರಾತ್ಮಕ ಸಂಬಂಧವನ್ನು ಹೊಂದುವುದು
ತಾಯಂದಿರು ತಮ್ಮ ಜತೆಗಿರುವವರೊಂದಿಗೆ ಪ್ರಾಮಾಣಿಕ, ನಂಬಿಕಾರ್ಹ, ಗೌರವಯುತವಾಗಿದ್ದು ಮುಕ್ತ ಸಂವಹನದೊಂದಿಗೆ ಸಾಮಾಜಿಕ ಸಂಬಂಧವನ್ನು ಹೊಂದುವುದು ಮತ್ತು ತನ್ನ ವಯಕ್ತಿಕ ಹಾಗು ವೃತ್ತಿಜೀವನದ ಗುರಿ ಹಾಗೂ ಉದ್ದೇಶಗಳನ್ನು ಪೂರೈಸುವಲ್ಲಿ ಸಹಾಯಕವಾಗುವಂತಹ ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದು.

ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ
ದೈನಂದಿನ ಒತ್ತಡಗಳು ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಸಂಬಂಧಗಳನ್ನು ಪೂರ್ಣವಾಗಿ ಅನುಭವಿಸಲು, ಈ ಕ್ಷಣವನ್ನು ಜೀವಿಸಲು ಮತ್ತು ಜತೆಗಿರುವವರೊಂದಿಗೆ ಆತ್ಮೀಯವಾಗಿ ಜೀವನವನ್ನು ಅನುಭವಿಸಲು ಸಹಾಯಕವಾಗಿದೆ. ಮಗುವಿನ ಭವಿಷ್ಯ ತಾಯಿಯ ಕೈಯಲ್ಲಿದೆ. ಮಗುವನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಅವಳ ಮೇಲಿದೆ. ಹೀಗಾಗಿ ತಾಯಿಯು ತನ್ನ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ತಾಯಂದಿರ ಮಾನಸಿಕ ಆರೋಗ್ಯವು ಇಡೀ ಸಮಾಜದ ಹಿತ ಕಾಪಾಡುವಲ್ಲಿ ಮತ್ತು ಆರೋಗ್ಯವಂತ ಪೀಳಿಗೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. ತನ್ನ ಜೀವನದ ಗುರಿಯನ್ನು ತಲುಪಲು, ಜತೆಗೆ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪರಿಣಾಮ ಬೀರುತ್ತದೆ.

ಸಂಗೀತಾ ಹೆಗ್ಡೆ, ರಿಸರ್ಚ್‌ ಅಸಿಸ್ಟೆಂಟ್‌
ಶಾಲಿನಿ ಕ್ವಾಡ್ರಸ್‌, ಅಸಿಸ್ಟೆಂಟ್‌ ಪ್ರೊಫೆಸರ್‌-ಸೀನಿಯರ್‌ ಸ್ಕೇಲ್‌
ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next