Advertisement
ರೈಲ್ವೇ ಇಲಾಖೆ ಮುಂದಡಿ ಇಟ್ಟಿರುವುದು ಸ್ವಾಗತಾರ್ಹ. ಹಾಗೆಂದು ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಪ್ರಯಾಣಿಕರನ್ನು ಭದ್ರತಾ ತಪಾಸಣೆಗೆ ಗುರಿಪಡಿಸುವುದು ಹೇಳಿಕೊಂಡಷ್ಟು ಸುಲಭದ ಕಾರ್ಯವಂತೂ ಅಲ್ಲ. ಇಲ್ಲಿರುವ ಅಗಾಧ ಪ್ರಯಾಣಿಕರ ಸಂಖ್ಯೆ ಮತ್ತು ಅವ್ಯವಸ್ಥೆಯನ್ನೇ ವ್ಯವಸ್ಥೆಯೆಂದು ಒಪ್ಪಿಕೊಂಡಿರುವ ಪರಿಸ್ಥಿತಿಯಲ್ಲಿ ಭದ್ರತಾ ತಪಾಸಣೆ ಕಾರ್ಯಸಾಧುವೆ ಎನ್ನುವ ಪ್ರಶ್ನೆ ಉದ್ಭವಿಸುವುದಂತೂ ನಿಜ.
ಈ ಸಂದರ್ಭದಲ್ಲಿ ಇಲಾಖೆ ಅರ್ಥಮಾಡಿಕೊಳ್ಳಬೇಕು. ವಿಮಾನಕ್ಕೆ ನೂರೋ ಇನ್ನೂರೋ ಪ್ರಯಾಣಿಕರು ಸರತಿ ಸಾಲಿನಲ್ಲಿ ತಪಾಸಣೆಗಾಗಿ ಕಾಯುತ್ತಾರೆ. ಆದರೆ ರೈಲುಗಳಲ್ಲಿ ಹಾಗಲ್ಲ. ಒಂದೊಂದು ರೈಲಿನಲ್ಲೂ 800-1000 ಮಂದಿ ಪ್ರಯಾಣಿಸುತ್ತಾರೆ. ದೊಡ್ಡ ನಿಲ್ದಾಣಗಳಲ್ಲಿ ಇಂಥ ರೈಲುಗಳು ಪ್ರತಿ ನಿಮಿಷಕ್ಕೊಂದರಂತೆ ಹೋಗುತ್ತಿರುತ್ತವೆ. ಹೀಗೆ ಸಾವಿರಾರು ಪ್ರಯಾಣಿಕರಿಗೆ ಯಾವುದೇ ಅಡಚಣೆ ಮತ್ತು ಇರಿಸುಮುರಿಸಾಗದಂತೆ ತಪಾಸಣೆ ಮಾಡಲು ಸಾಧ್ಯವಾದರೆ ಇದು ಉತ್ತಮ ಕ್ರಮವಾಗುವುದರಲ್ಲಿ ಅನುಮಾನವಿಲ್ಲ. ರೈಲು ಪ್ರಯಾಣಿಕರನ್ನೂ ಭದ್ರತಾ ತಪಾಸಣೆಗೆ ಗುರಿಪಡಿಸಬೇಕೆಂಬ ಬೇಡಿಕೆ 2006ರಲ್ಲಿ ಮುಂಬಯಿಯ ಲೋಕಲ್ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದಾಗಲೇ ಕೇಳಿ ಬಂದಿತ್ತು. ಈ ಘಟನೆಯನ್ನನುಸರಿಸಿ ಮುಂಬಯಿ ಲೋಕಲ್ ರೈಲು ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್, ಬ್ಯಾಗ್ ತಪಾಸಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ನಿಮಿಷಕ್ಕೆ 5000 ಪ್ರಯಾಣಿಕರು ಪ್ರಯಾಣಿಸುವ ನಿಲ್ದಾಣಗಳಲ್ಲಿ ಈ ತಪಾಸಣೆ ಎಷ್ಟು ಪ್ರಯಾಸಕರ ಎನ್ನುವುದು ಕೆಲವೇ ದಿನಗಳಲ್ಲಿ ಅರಿವಾಗಿತ್ತು. ಈಗಲೂ ಕೆಲವು ನಿಲ್ದಾಣಗಳಲ್ಲಿ ತಪಾಸಣೆ ಇದೆಯಾದರೂ ಅದು ಬರೀ ನಾಮಕಾವಸ್ತೆ ಮಾತ್ರ.
Related Articles
Advertisement
ರೈಲು ನಿಲ್ದಾಣ ಮತ್ತು ರೈಲುಗಳು ಯಾವಾಗಲೂ ಉಗ್ರರ ಸುಲಭದ ಗುರಿಗಳಾಗಿರುತ್ತವೆ. ಇವರಲ್ಲದೆ ಇತರೆಲ್ಲ ರೀತಿಯ ಪಾತಕಿಗಳಿಗೂ ರೈಲು ಮತ್ತು ರೈಲು ನಿಲ್ದಾಣ ಆಶ್ರಯತಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಬರೀ ರೈಲು ನಿಲ್ದಾಣ ಮಾತ್ರವಲ್ಲದೆ ರೈಲುಗಳಲ್ಲೂ ಬಿಗು ತಪಾಸಣೆಯ ಅಗತ್ಯವಿದೆ.
ಬಿಹಾರ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ರೈಲುಗಳು ಸರಕು ಸಾಗಿಸುವ ಲಾರಿಗಳಿಗಿಂತಲೂ ಕಡೆಯಾಗಿರುತ್ತವೆ. ಕುರಿ ಕೋಳಿಗಳಿಂದ ಹಿಡಿದು ಎಲ್ಲ ರೀತಿಯ ಪ್ರಾಣಿ-ವಸ್ತುಗಳನ್ನು ರೈಲುಗಳಲ್ಲಿ ಸಾಗಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಎನ್ನುವುದು ಇಲ್ಲಿ ಕಾಲಕಸಕ್ಕೆ ಸಮಾನ. ಇವುಗಳನ್ನೆಲ್ಲ ನಿಯಂತ್ರಿಸಬೇಕಾದರೆ ಕಟ್ಟುನಿಟ್ಟಿನ ತಪಾಸಣೆಯ ಅಗತ್ಯವಿದೆ. ಭದ್ರತಾ ತಪಾಸಣೆ ಮೂಲಕವಾದರೂ ಭಾರತೀಯ ರೈಲ್ವೇಗೆ ಅಂಟಿರುವ ಅತ್ಯಂತ ಅಸುರಕ್ಷಿತ ಸಾರಿಗೆ ಮಾಧ್ಯಮ ಎಂಬ ಕಳಂಕ ನಿವಾರಣೆಯಾದರೆ ಒಳ್ಳೆಯದೇ. ಇದರ ಯಶಸ್ಸು ಯಾವ ರೀತಿ ಅನುಷ್ಠಾನವಾಗುತ್ತದೆ ಎಂಬುದನ್ನು ಅವಲಂಬಿಸಿದೆ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು, ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಇದೊಂದು ಉತ್ತಮ ಉಪಕ್ರಮವಾಗುವುದರಲ್ಲಿ ಸಂಶಯವಿಲ್ಲ.