Advertisement

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

07:17 PM Dec 11, 2024 | Team Udayavani |

ಗುಡಿಬಂಡೆ: ತಾಲೂಕು ಕೇಂದ್ರದಲ್ಲಿರುವ ಏಕೈಕ ಸಾರಿಗೆ ಬಸ್‌ ನಿಲ್ದಾಣ ನೋಡುವುದಕ್ಕೆ ಸ್ವಚ್ಚವಾಗಿ ಸುಂದರವಾಗಿ ಕಂಡರೂ, ಸಾರಿಗೆ ಬಸ್‌ಗಳೇ ಇಲ್ಲದೆ ಪಾಳು ಬಿದ್ದ ಮನೆಯಂತೆ ಕಾಣುತ್ತದೆ.

Advertisement

ಗುಡಿಬಂಡೆ ತಾಲೂಕು ಡಾ.ನಂಜುಂಡಪ್ಪ ವರದಿಯಂತೆ ರಾಜ್ಯದಲ್ಲಿಯೇ ಅತಿ ಸಣ್ಣ ಮತ್ತು ಹಿಂದುಳಿದ ತಾಲೂಕು ಆಗಿದ್ದು, ಸಾರಿಗೆ, ಶಿಕ್ಷಣ, ವೈದ್ಯಕೀಯ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಗುಡಿಬಂಡೆ ತಾಲೂಕು ಆಂಧ್ರಪ್ರದೇಶ ರಾಜ್ಯಕ್ಕೆ ಅಂಟಿಕೊಂಡಿದ್ದರು, ಈ ಭಾಗದಿಂದ ಒಂದು ಸರ್ಕಾರಿ ಸಾರಿಗೆ ಸಂಪರ್ಕ ಸಹ ಇರುವುದಿಲ್ಲ, ಗುಡಿಬಂಡೆ ಮಾರ್ಗವಾಗಿ ಅಂತರರಾಜ್ಯ, ರಾಜಧಾನಿ ಬೆಂಗಳೂರಿಗೆ ಮತ್ತು ಯಾತ್ರಸ್ಥಳಗಳಾದ ಧರ್ಮಸ್ಥಳ, ತಿರುಪತಿ, ಮೈಸೂರು ಇತರೆಡೆಗೆ ಕಾರ್ಯಾಚರಣೆಗೊಳ್ಳುತ್ತಿದ್ದ ಬಸ್‌ಗಳು ಒಂದೊಂದಾಗಿ ಸ್ಥಗಿತಗೊಳ್ಳುತ್ತಿವೆ. ಸಾಲು ಸಾಲು ಹಬ್ಬಗಳು ಮಂತ್ರಿ ಮಹೋದಯರ, ರಾಜಕೀಯ ಕಾರ್ಯಕ್ರಮಗಳು ಬಂದರೆ ಈ ಭಾಗದ ಬಸ್‌ಗಳು ಅಂದು ಹೇಳದೆ ಕೇಳದೆ ಕಾಣೆಯಾಗಿ, ದಿನನಿತ್ಯದ ಪಾಸ್‌ ಹೊಂದಿರುವ ವಿದ್ಯಾರ್ಥಿಗಳ, ಬೇರೆಡೆ ಕೆಲಸ ಮಾಡುವವರ ಮತ್ತು ಬಸ್‌ಗಳನ್ನೇ ನಂಬಿಕೊಂಡು ಓಡಾಡುವವರ ಪಾಡಂತು ಹೇಳ ತೀರದು.

ಸುಮಾರು ದಶಕಗಳ ಹೋರಾಟದ ಫಲವಾಗಿ ಪಟ್ಟಣದಲ್ಲಿ ಒಂದು ಸುಸಜ್ಜಿತ ಬಸ್‌ ನಿಲ್ದಾಣವೇನೋ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ಆದರೆ, ಇಂದು ಸಾರಿಗೆ ನಿಲ್ದಾಣದ ಕಟ್ಟಡ ಎಸ್‌ಬಿಐ ಬ್ಯಾಂಕ್‌ನ ಕಟ್ಟಡವಾಗಿ, ಹೊರ ಭಾಗದ ಬ್ಯಾಂಕಿಗೆ ನಡೆದುಕೊಂಡು ಹೋಗುವವರಿಗೆ ಸ್ವಲ್ಪ ಹೊತ್ತು ಕುಳಿತುಕೊಂಡು ಎದ್ದು ಹೋಗುವ ಆಶ್ರಯ ತಾಣವಾಗಿದೆಯೇ ಹೊರತು ಸಾರಿಗೆ ಬಸ್‌ ನಿಲ್ದಾಣವಂತೂ ಆಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಕಿತ್ತು ಹೋದ ಆಸನಗಳು: ಗುಡಿಬಂಡೆ ಬಸ್‌ ನಿಲ್ದಾಣಕ್ಕೆ ಪ್ರತಿ ನಿತ್ಯ ಸುಮಾರು 84 ಬಸ್‌ಗಳು ಬಂದು ಹೋಗುತ್ತವೆ. ಆದರೂ ಸಹ ಒಂದು ದಿನ ಬಂದ ಬಸ್‌ ಮರು ಯಾವುದೋ ಒಂದು ಕುಂಟು ನೆಪ ಹೇಳಿಕೊಂಡು ಇತ್ತ ಬರುವುದಿಲ್ಲ. ಬಸ್‌ ನಿಲ್ದಾಣದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿದ್ದು, ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ಹಲವು ಆಸನಗಳು ಕಿತ್ತು ಹೋಗಿ ಮೂಲೆಗೆ ಸೇರಿವೆ. ಭದ್ರತಾ ಸಿಬ್ಬಂದಿ ಇಲ್ಲ: ಬಸ್‌ ನಿಲ್ದಾಣಕ್ಕೆ ಕೇವಲ ಬೆರಣಿಕೆಯ ಬಸ್‌ಗಳು ಬಂದು ಹೋಗುವುದರಿಂದ ಕೇವಲ ನಿಯಂತ್ರಣಾಧಿಕಾರಿ ಒಬ್ಬರು ಬಿಟ್ಟರೇ, ಯಾವುದೇ ರೀತಿಯ ಸೆಕ್ಯೂರಿಟಿ ಸೌಲಭ್ಯ ಇರುವುದಿಲ್ಲ, ಈ ಬಸ್‌ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ಕೇವಲ ಐದಾರು ಬಸ್‌ಗಳು ನಿಲುಗಡೆ ಹೊಂದುತ್ತವೆ, ಅವುಗಳ ರಕ್ಷಣೆ ಮಾತ್ರ ಸೆಕ್ಯೂರಿಟಿ ಇಲ್ಲದೆ ಚಾಲಕ, ನಿರ್ವಾಹಕರೇ ಹೊಣೆಗಾರರಾಗಿದ್ದಾರೆ. ಬಸ್‌ ನಿಲ್ದಾಣ ನಿರ್ಮಾಣವಾಗಿ ದಶಕಗಳೇ ಕಳೆಯುತ್ತಿವೆ ಆದರೂ ಸಹ ಕುಡಿಯುವ ನೀರಿನ ವ್ಯವಸ್ಥೆà ಇರುವುದಿಲ್ಲ, ಹಾಗೂ ಇಲ್ಲಿ ಕೆಲಸ ನಿರ್ವಹಿಸುವ ನಿಯಂತ್ರಣಾಧಿಕಾರಿಗಳು ಶೌಚಾಲಯ ಮತ್ತು ನಿಲ್ದಾಣದಲ್ಲಿ ಸ್ವತ್ಛತೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನಾಮ ಫ‌ಲಕಗಳಿಲ್ಲದ ಬಸ್‌ಗಳು: ಗುಡಿಬಂಡೆ ತಾಲೂಕು ಪುರಾತನ ಇತಿಹಾಸ ಪ್ರಸಿದ್ದ ಇತಿಹಾಸವುಳ್ಳ ಪ್ರವಾಸಿ ತಾಣಗಳ ಸ್ಥಳವಾಗಿದ್ದು, ಪ್ರತಿ ನಿತ್ಯ ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಾರೆ, ಇತರೆ ಸ್ಥಳಗಳಿಂದ ಗುಡಿಬಂಡೆಗೆ ಬರುವ ಬಸ್‌ಗಳಿಗೆ ಗುಡಿಬಂಡೆ ಎಂದು ಸೂಚಿಸುವ ನಾಮಫಲಕಗಳು ಇಲ್ಲದೆ ಇರುವುದರಿಂದ ಇಲ್ಲಿಗೆ ಬರಲು ಸಾರಿಗೆ ಸೌಲಭ್ಯ ಇರುವುದಿಲ್ಲ ಬೇರೆ ಸಾರಿಗೆ ಮೂಲಗಳನ್ನು ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿಗಳು ಬಂದದೊಗಿದೆ.

ವಾರಾಂತ್ಯದಲ್ಲಿ ಮಾರ್ಗ ಬಸ್‌ಗಳ ಕೊರತೆ ತೀವ್ರ: ಗುಡಿಬಂಡೆಗೆ ಬರುವ ಬಸ್‌ಗಳು ನಿತ್ಯ ಬರುವ ಬಸ್‌ಗಳನ್ನು ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಗೌರಿ ಬಿದನೂರು ಬಸ್‌ ಡಿಪೋಗಳಿಂದ ಬರಬೇಕಾ ಗಿದ್ದು, ವಾರಾಂತ್ಯದಲ್ಲಿ ಮತ್ತು ಇತರೆ ಪ್ರವಾಸಗಳಿಗೆ ಹೆಚ್ಚುವರಿಯಾಗಿ ಬಸ್‌ಗಳು ಬೇಕಾದ ಪಕ್ಷದಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಅತ್ತ ಕಳುಹಿಸಿ ಇತ್ತ ಸಾರ್ವಜನಿಕರಿಗೆ ತೊಂದರೆ ಯಾಗುವಂತೆ ಡಿಪೋ ವ್ಯವಸ್ಥಾಪಕರು ಮಾಡುತ್ತಿದ್ದಾರೆ. ಈ ಬಗ್ಗೆ ಆಗಾಗ್ಗೆ ಹೋರಾಟಗಾರರು ಪ್ರಶ್ನಿಸಿದರು ಮಾತ್ರ ಗಮನ ಹರಿಸುವುದಿಲ್ಲ.

ಗುಡಿಬಂಡೆ ಬಸ್‌ ನಿಲ್ದಾಣಕ್ಕೆ ಸೆಕ್ಯೂರಿಟಿ ಅವಶ್ಯಕತೆ ಇದ್ದು, ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕಾಗಿದ್ದು, ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ. ●ಶ್ರೀನಿವಾಸ ಮೂರ್ತಿ, ಘಟಕ ವ್ಯವಸ್ಥಾಪಕರು, ಬಾಗೇಪಲ್ಲಿ ಘಟಕ

ಗುಡಿಬಂಡೆ ಬಸ್‌ ನಿಲ್ದಾಣದಲ್ಲಿ ಆಸನಗಳು ಕಿತ್ತು ಹೋಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ, ಬಸ್‌ಗಳ ಮಾರ್ಗ ಸೂಚಿ ಫಲಕಗಳು ಇರುವುದಿಲ್ಲ, ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು. ●ಜಿ.ವಿ.ಗಂಗಪ್ಪ, ಸಾರಿಗೆ ಹೋರಾಟಗಾರರು, ಗುಡಿಬಂಡೆ

– ನವೀನ್‌ ಕುಮಾರ್‌.ಎನ್‌

 

Advertisement

Udayavani is now on Telegram. Click here to join our channel and stay updated with the latest news.

Next