ವಾರಾಣಸಿ: ವಾರಣಾಸಿಯ ಕ್ಯಾಂಟ್ ರೈಲು ನಿಲ್ದಾಣದ ಬಳಿ ಶನಿವಾರ(ನ.30) ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ೨೦೦ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಇಲ್ಲಿನ ಕ್ಯಾಂಟ್ ರೈಲು ನಿಲ್ದಾಣದ ಬಳಿ ಇರುವ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿರುವುದಾಗಿ ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಬೆಂಕಿ ಅವಘಡದಿಂದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು ೨೦೦ ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿದ್ದು ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು, ಹನ್ನೆರಡು ಅಗ್ನಿಶಾಮಕ ವಾಹನ, ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಆದರೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದ ಪರಿಣಾಮ ಪ್ರದೇಶ ತುಂಬಾ ದಟ್ಟ ಹೊಗೆ ಆವರಿಸಿ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು ಸತತ ಕಾರ್ಯಾಚರಣೆ ಮೂಲಕ ಸದ್ಯ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಸುಮಾರು ಇನ್ನೂರು ವಾಹನಗಳು ಬೆಂಕಿಗಾಹುತಿಯಾಗಿದ್ದು ಅದರಲ್ಲಿ ಹೆಚ್ಚಿನ ವಾಹನ ರೈಲ್ವೆ ನೌಕರರದ್ದೇ ಆಗಿದೆ ಎನ್ನಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದ್ದು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.