ಚೆನ್ನೈ: ಭಾರತ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC)ಯ ಶಿಕ್ಷೆ ಅನುಭವಿಸುವ ಭೀತಿ ಎದುರಿಸುತ್ತಿದೆ. ಪಂದ್ಯದ ಮೊದಲ ದಿನದಾಟದ ಆರಂಭದಲ್ಲಿ ಟೀಂ ಇಂಡಿಯಾವನ್ನು ಕಟ್ಟಿ ಹಾಕಿದ್ದ ಬಾಂಗ್ಲಾ ಬೌಲರ್ ಗಳು ಭರ್ಜರಿ ಪ್ರದರ್ಶನ ನೀಡಿದ್ದರು. ಭಾರತ ತಂಡವನ್ನು 3 ವಿಕೆಟ್ ಗೆ 34 ಮತ್ತು ನಂತರ 6 ವಿಕೆಟ್‌ಗೆ 144 ರನ್ ಗಳಿಗೆ ಕಟ್ಟಿ ಹಾಕಿದರಿ. ಆದರೆ ರವಿಚಂದ್ರನ್ ಅಶ್ವಿನ್ (Ravichandran Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ನಡುವೆ ಏಳನೇ ವಿಕೆಟ್‌ಗೆ ಅತ್ಯುತ್ತಮ ಜೊತೆಯಾಟವು ಬಾಂಗ್ಲಾ ಬೌಲರ್ ಗೆ ಸವಾಲಾಯಿತು.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತ್ತು. ಎರಡನೇ ದಿನದಾಟದ ಆರಂಭದಲ್ಲಿ ಉತ್ತಮ ಬೌಲಿಂಗ್ ನಡೆಸಿದ ಬಾಂಗ್ಲಾ ಬೌಲರ್ ಗಳು ಭಾರತ ತಂಡವನ್ನು 376 ರನ್ ಗಳಿಗೆ ಆಲೌಟ್ ಮಾಡಿದರು.
ಆದರೆ ಮೊದಲ ದಿನದಾಟದಲ್ಲಿ ಬಾಂಗ್ಲಾದೇಶ ತಂಡವು ನಿಗದಿತ ಓವರ್ ಗಳನ್ನು ಪೂರ್ತಿಗೊಳಿಸಲು ವಿಫಲವಾಗಿದೆ. ಅರ್ಧ-ಗಂಟೆಗಳ ವಿಸ್ತರಣೆಯನ್ನು ಪಡೆದರೂ ಗುರಿಗಿಂತ 10 ಓವರ್ ಗಳನ್ನು ಕಡಿಮೆ ಎಸೆದು ದೊಡ್ಡ ಸಮಸ್ಯೆಗೆ ಸಿಲುಕಿದೆ. ಇದು ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ಐಸಿಸಿ) ದಂಡನೆಗೆ ಒಳಗಾಗುವ ಸಾಧ್ಯತೆಗೆ ತಳ್ಳಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ದಿನಕ್ಕೆ 90 ಓವರ್ ಎಸೆಯಬೇಕು. ಆದರೆ ಸಂಜೆ 4.30ಕ್ಕೆ ಮುಗಿಯಬೇಕಿದ್ದ ಪಂದ್ಯವನ್ನು 5 ಗಂಟೆಯವರೆಗೆ ವಿಸ್ತರಿಸಿದರೂ ಬಾಂಗ್ಲಾದೇಶ ಎಸೆದಿದ್ದು ಕೇವಲ 80 ಓವರ್ ಮಾತ್ರ. ಶಾಂಟೋ ಪಡೆಯು 10 ಓವರ್ ಗಳಷ್ಟು ಹಿನ್ನಡೆ ಅನುಭವಿಸಿದೆ.
ಬಾಂಗ್ಲಾದೇಶವು ಕಳೆದ ತಿಂಗಳು ಪಂದ್ಯದ ಶುಲ್ಕದ 15 ಪ್ರತಿಶತದಷ್ಟು ದಂಡದೊಂದಿಗೆ ಮೂರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಕಳೆದುಕೊಂಡಿತ್ತು. ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಮೂರು ಓವರ್ ಗಳ ಕಡಿಮೆಯಿದ್ದ ಕಾರಣ ಅವರಿಗೆ ದಂಡ ವಿಧಿಸಲಾಗಿತ್ತು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಟದ ಷರತ್ತುಗಳ 16.11.2 ರ ಪ್ರಕಾರ- “ತಂಡವು ಪ್ರತಿ ಪೆನಾಲ್ಟಿ ಓವರ್ ಹಿನ್ನಡೆಗೆ ಒಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸ್ಪರ್ಧೆಯ ಅಂಕವನ್ನು ಕಡಿಮೆ ಮಾಡಲಾಗುತ್ತದೆ”.
“ಹೆಚ್ಚುವರಿ ಅರ್ಧ ಘಂಟೆಯ ಹೊರತಾಗಿಯೂ ಬಾಂಗ್ಲಾದೇಶವು 80 ಓವರ್ ಗಳಿಗಿಂತ ಕಡಿಮೆ ಬೌಲಿಂಗ್ ಮಾಡಿದೆ. ಇದು ಸ್ವೀಕಾರಾರ್ಹವಲ್ಲ” ಎಂದು ಎಕ್ಸ್‌ನಲ್ಲಿ ಕ್ರಿಕೆಟ್ ನಿರೂಪಕ ಹರ್ಷಾ ಭೋಗ್ಲೆ ಬರೆದಿದ್ದಾರೆ.