ರಾಜಕೋಟ್: 2023 ರ ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮ ಅಗ್ರ ಆಟಗಾರರಿಗೆ ವಿಶ್ರಾಂತಿ ನೀಡುವ ಸಲುವಾಗಿ, ರಾಜಕೋಟ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಿಂದ ಸ್ಟಾರ್ ಆಟಗಾರರಾದ ಶುಭಮನ್ ಗಿಲ್ ಮತ್ತು ಶಾರ್ದೂಲ್ ಠಾಕೂರ್ ಅವರು ಹೊರಗುಳಿಯಲಿದ್ದಾರೆ ಎಂದು ಭಾರತೀಯ ತಂಡದ ಮ್ಯಾನೇಜ್ ಮೆಂಟ್ ಘೋಷಿಸಿದೆ.
ಈ ವರ್ಷ ಅದ್ವಿತೀಯ ಪ್ರದರ್ಶನ ನೀಡುತ್ತಿರುವ ಗಿಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಂದೋರ್ ಪಂದ್ಯದಲ್ಲಿ ಶತಕ ಬಾರಿಸಿದ ಅವರು ವಿಶ್ವಕಪ್ ಗೆ ಸಜ್ಜಾಗಿದ್ದಾರೆ.
20 ಇನ್ನಿಂಗ್ಸ್‌ಗಳಿಂದ 72.35 ಸರಾಸರಿಯಲ್ಲಿ ಮತ್ತು 105.03 ಸ್ಟ್ರೈಕ್ ರೇಟ್‌ನಲ್ಲಿ 1230 ರನ್ ಗಳೊಂದಿಗೆ, ಗಿಲ್ ಈ ವರ್ಷ ಏಕದಿನಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದಾರೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಇಬ್ಬರೂ ಆಟಗಾರರು ಗುವಾಹಟಿಯಲ್ಲಿ ಮತ್ತೆ ತಂಡವನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಭಾರತವು ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಆಸೀಸ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಅವರು ಮೂರನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಮೊಹಾಲಿ ಮತ್ತು ಇಂದೋರ್ ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸುಲಭ ಜಯ ಸಾಧಿಸಿದೆ.