ಪಲ್ಲೆಕೆಲೆ: ಶ್ರಿಲಂಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ವನಿತೆಯರ ತಂಡ ಏಕದಿನ ಸರಣಿಯನ್ನೂ ಗೆದ್ದುಕೊಂಡಿದೆ. ಇಂದು ಪಲ್ಲೆಕೆಲೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ 10 ವಿಕೆಟ್ ಅಂತರದಿಂದ ಭರ್ಜರಿಯಾಗಿ ಜಯಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 50 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 173 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಭಾರತ ವಿಕೆಟ್ ನಷ್ಟವಿಲ್ಲದೆ ಜಯಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡಕ್ಕೆ ವೇಗಿಗಳಾದ ರೇಣುಕಾ ಸಿಂಗ್ ಮತ್ತು ಮೇಘನಾ ಸಿಂಗ್ ಕಾಡಿದರು. ರೇಣುಕಾ ನಾಲ್ಕು ವಿಕೆಟ್ ಪಡೆದರೆ, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಿತ್ತರು. ಲಂಕಾ ಪರ ಎಮಾ ಕಾಂಚನಾ ಅಜೇಯ 47 ರನ್, ನೀಲಾಕ್ಷಿ ಡಿಸಿಲ್ವ 32 ರನ್, ನಾಯಕಿ ಅತ್ತಪತ್ತು 27 ರನ್, ಅನುಶ್ಕಾ ಸಂಜಿವನಿ 25 ರನ್ ಗಳಿಸಿದರು.
ಇದನ್ನೂ ಓದಿ:ಆರ್ಥಿಕ ಬಿಕ್ಕಟ್ಟು-ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆ; ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಸ್ಮೃತಿ-ಶಫಾಲಿ ಜೊತೆಯಾಟ: ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ನೆರವಾದರು. ಇಬ್ಬರೂ ಅಜೇಯ ಅರ್ಧಶತಕ ಬಾರಿಸಿದರು. ಮಂಧನಾ 83 ಎಸೆತಗಳಿಂದ 94 ರನ್ ಗಳಿಸಿದರೆ, ಶಫಾಲಿ ವರ್ಮಾ 71 ಎಸತೆಗಳಿಂದ 71 ರನ್ ಬಾರಿಸಿದರು. ಭಾರತ 25.4 ಓವರ್ ಗಳಲ್ಲಿ ಗುರಿ ತಲುಪಿತು.
ಪೂರ್ಣ ಪ್ರಮಾಣದ ನಾಯಕಿಯಾಗಿ ಮೊದಲ ಏಕದಿನ ಸರಣಿಯಲ್ಲೇ ಹರ್ಮನ್ ಪ್ರೀತ್ ಕೌರ್ ಯಶಸ್ವಿಯಾದರು. ನಾಲ್ಕು ವಿಕೆಟ್ ಕಿತ್ತ ರೇಣುಕಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.