Advertisement

ಓವಲ್‌ ಸುವರ್ಣ ಸಂಭ್ರಮಕ್ಕೆ ಗೆಲುವಿನ ಕಾಣಿಕೆ 

10:23 PM Sep 06, 2021 | Team Udayavani |

ಲಂಡನ್‌: ಇಂಗ್ಲೆಂಡ್‌ ನೆಲದಲ್ಲಿ ಸಾಧಿಸಿದ ಪ್ರಪ್ರಥಮ ಟೆಸ್ಟ್‌ ಗೆಲುವು ಹಾಗೂ ಸರಣಿ ವಿಜಯೋತ್ಸವದ ಸುವರ್ಣ ಸಂಭ್ರಮ ದಲ್ಲಿರುವ ಭಾರತ, ಓವಲ್‌ ಟೆಸ್ಟ್‌ ಜಯಭೇರಿ ಮೂಲಕ ಈ ಕ್ಷಣವನ್ನು ಸ್ಮರಣೀಯಗೊಳಿಸಿದೆ.

Advertisement

ಭಾರತದ 1971ರ ಆ ಗೆಲುವು ಕೂಡ ಇದೇ ಓವಲ್‌ ಅಂಗಳದಲ್ಲಿ ಒಲಿದಿತ್ತೆಂಬುದು ವಿಶೇಷ. ಈ ಬಾರಿ ಪಂದ್ಯದ ಅಂತಿಮ ದಿನ ವಾದ ಸೋಮವಾರ ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ಸೀಳಿದ ಟೀಮ್‌ ಇಂಡಿಯಾ  157 ರನ್ನುಗಳ ಅಮೋಘ ಜಯದೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.

ಗೆಲುವಿಗೆ 368 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಗ್ಲೆಂಡ್‌, ಲಾರ್ಡ್ಸ್‌ ಟೆಸ್ಟ್‌ ರೀತಿಯಲ್ಲೇ ನಾಟಕೀಯ ಕುಸಿತ ಅನುಭವಿಸಿ 210 ರನ್ನಿಗೆ ಸರ್ವಪತನ ಕಂಡಿತು. ಬುಮ್ರಾ, ಜಡೇಜ, ಠಾಕೂರ್‌, ಉಮೇಶ್‌ ಯಾದವ್‌ ಸೇರಿಕೊಂಡು ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ಸೀಳಿದರು. ಜೋ ರೂಟ್‌ ಅವರ ಬಿಗ್‌ ವಿಕೆಟ್‌ ಕಿತ್ತ ಠಾಕೂರ್‌ ಬಿಗ್‌ ಹೀರೋ ಎನಿಸಿದರು.

ಇದು “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಭಾರತಕ್ಕೆ ಒಲಿದ ಕೇವಲ 2ನೇ ಗೆಲುವು. 1971ರಲ್ಲಿ ಅಜಿತ್‌ ವಾಡೇಕರ್‌ ಸಾರಥ್ಯದ ಭಾರತ 4 ವಿಕೆಟ್‌ಗಳ ಜಯ ಸಾಧಿಸಿತ್ತು.

5ನೇ ಹಾಗೂ ಅಂತಿಮ ಟೆಸ್ಟ್‌ ಸೆ. 10ರಂದು ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.

Advertisement

ಶತಕದ ಜತೆಯಾಟ :

ಇಂಗ್ಲೆಂಡ್‌ 4ನೇ ದಿನದ ಕೊನೆಯಲ್ಲಿ 32 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ವಿಕೆಟ್‌ ನಷ್ಟವಿಲ್ಲದೆ 77 ರನ್‌ ಮಾಡಿ ಹೋರಾಟವೊಂದಕ್ಕೆ ಸ್ಕೆಚ್‌ ಹಾಕಿತ್ತು. ಅಂತಿಮ ದಿನದ ಮೊದಲ ಅವಧಿಯ ಸುಮಾರು 50 ನಿಮಿಷಗಳಷ್ಟು ಕಾಲ ಆರಂಭಿಕರಾದ ಬರ್ನ್ಸ್

-ಹಮೀದ್‌ ಕ್ರೀಸ್‌ ಆಕ್ರಮಿಸಿಕೊಂಡು ಶತಕದ ಜತೆಯಾಟ ಪೂರೈಸಿದರು. ಇಂಗ್ಲೆಂಡ್‌ ಗೆಲುವಿನ ಗುರಿಯತ್ತ ಸಾಗುತ್ತದೇನೋ ಎಂಬ ಆತಂಕ ಭಾರತದ್ದಾಯಿತು.

ಈ ಹಂತದಲ್ಲಿ ತಮ್ಮ ಮೊದಲ ಓವರ್‌ ಎಸೆಯಲು ಬಂದ ಶಾದೂìಲ್‌ ಠಾಕೂರ್‌ 4ನೇ ಎಸೆತದಲ್ಲೇ ಬ್ರೇಕ್‌ ಒದಗಿಸಿದರು. 50 ರನ್‌ ಮಾಡಿದ ಬರ್ನ್ಸ್ ಪಂತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 120ರ ಮೊತ್ತದಲ್ಲಿ ಡೇವಿಡ್‌ ಮಲಾನ್‌ ರನೌಟ್‌ ಆದಾಗ ಭಾರತ ತಿರುಗಿ ಬೀಳುವ ಸೂಚನೆ ನೀಡಿತು. ಇಂಗ್ಲೆಂಡಿನ ಲಂಚ್‌ ಸ್ಕೋರ್‌ 2ಕ್ಕೆ 131.

ಭಾರತದ ಬೌಲಿಂಗ್‌ ದಾಳಿ:

ದ್ವಿತೀಯ ಅವಧಿ ಭಾರತದ ಬೌಲರ್‌ಗಳ ಮೆರೆದಾಟಕ್ಕೆ ಮೀಸಲಾಯಿತು. ಜಡೇಜ, ಬುಮ್ರಾ, ಠಾಕೂರ್‌ ಘಾತಕವಾಗಿ ಪರಿಣಮಿಸಿ 6 ವಿಕೆಟ್‌ ಕಿತ್ತೆಸೆದರು. ಹಮೀದ್‌, ಪೋಪ್‌, ಬೇರ್‌ಸ್ಟೊ, ಅಲಿ, ರೂಟ್‌ ಸಾಲು ಸಾಲಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. 140ರ ಹಂತದಲ್ಲಿ, ಬರೀ 6 ರನ್‌ ಅಂತರದಲ್ಲಿ ಆಂಗ್ಲರ 4 ವಿಕೆಟ್‌ ಹಾರಿಹೋಯಿತು. ಸೋಲು ಸಮೀಸತೊಡಗಿತು.

ಬೇರೂರಿ ನಿಂತಿದ್ದ ಹಮೀದ್‌ (63) ಅವರನ್ನು ಜಡೇಜ ಬೌಲ್ಡ್‌ ಮಾಡಿದರು. ಪೋಪ್‌ (2) ಮತ್ತು ಬೇರ್‌ಸ್ಟೊ (0) ಬುಮ್ರಾ ಅವರ ಸತತ ಓವರ್‌ಗಳಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ಅಲಿಗೆ ಖಾತೆ ತೆರೆಯಲು ಜಡೇಜ ಬಿಡಲಿಲ್ಲ.

ಭಾರತಕ್ಕೆ ಜೋ ರೂಟ್‌ ಭೀತಿಯೊಡ್ಡುವ ಸಾಧ್ಯತೆ ಇತ್ತು. ಅವರ ಆಟವೂ ಇದೇ ಲಯದಲ್ಲಿತ್ತು. ಇವರೊಂದಿಗೆ ವೋಕ್ಸ್‌ ಜತೆಗೂಡಿದಾಗ ಇಂಗ್ಲೆಂಡ್‌ ಚೇತರಿಸಿಕೊಳ್ಳುವ ಲಕ್ಷಣ ತೋರಿತಾದರೂ ಭಾರತದ ಬೌಲಿಂಗ್‌ ಆಕ್ರಮಣಕ್ಕೆ ಇವರ ಬಳಿ ಉತ್ತರ ಇರಲಿಲ್ಲ. ಉಮೇಶ್‌ ಯಾದವ್‌ ಕೊನೆಯ 3 ವಿಕೆಟ್‌ ಉರುಳಿಸಿ ಭಾರತದ ಗೆಲುವನ್ನು ಸಾರಿದರು.

ಬುಮ್ರಾ ವಿಕೆಟ್‌ ಶತಕ :

ಓಲೀ ಪೋಪ್‌ ಅವರನ್ನು ಬೌಲ್ಡ್‌ ಮಾಡುವ ಮೂಲಕ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪೂರ್ತಿಗೊಳಿಸಿದರು. ಅವರು ಈ ಸಾಧನೆಗೈದ ಭಾರತದ 23ನೇ ಬೌಲರ್‌. ಜತೆಗೆ ಅತೀ ಕಡಿಮೆ 24 ಟೆಸ್ಟ್‌ಗಳಲ್ಲಿ ವಿಕೆಟ್‌ “ಶತಕ’ ಪೂರೈಸಿದ ಭಾರತದ ಪೇಸ್‌ ಬೌಲರ್‌ ಎಂಬ ದಾಖಲೆಯನ್ನೂ ಬರೆದರು. ಇದಕ್ಕೂ ಹಿಂದಿನ ದಾಖಲೆ ಕಪಿಲ್‌ದೇವ್‌ ಹೆಸರಲ್ಲಿತ್ತು. ಅವರು 25 ಟೆಸ್ಟ್‌ಗಳಲ್ಲಿ 100 ವಿಕೆಟ್‌ ಉರುಳಿಸಿದ್ದರು.

ಕಡಿಮೆ ಟೆಸ್ಟ್‌ಗಳಲ್ಲಿ 100 ವಿಕೆಟ್‌ ಕಿತ್ತ ಭಾರತದ ಇತರ ವೇಗಿಗಳೆಂದರೆ ಇರ್ಫಾನ್‌ ಪಠಾಣ್‌ (28), ಮೊಹಮ್ಮದ್‌ ಶಮಿ (29), ಜಾವಗಲ್‌ ಶ್ರೀನಾಥ್‌ (30) ಮತ್ತು ಇಶಾಂತ್‌ ಶರ್ಮ (33).

 

ಭಾರತ ಪ್ರಥಮ ಇನ್ನಿಂಗ್ಸ್‌        191

ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌ 290

ಭಾರತ ದ್ವಿತೀಯ ಇನ್ನಿಂಗ್ಸ್‌    466

ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌

(ಗೆಲುವಿನ ಗುರಿ 368 ರನ್‌)

ರೋರಿ ಬರ್ನ್ಸ್   ಸಿ ಪಂತ್‌ ಬಿ ಠಾಕೂರ್‌    50

ಹಸೀಬ್‌ ಹಮೀದ್‌           ಬಿ ಜಡೇಜ           63

ಡೇವಿಡ್‌ ಮಲಾನ್‌          ರನೌಟ್‌               5

ಜೋ ರೂಟ್‌      ಬಿ ಠಾಕೂರ್‌       36

ಓಲೀ ಪೋಪ್‌    ಬಿ ಬುಮ್ರಾ          2

ಜಾನಿ ಬೇರ್‌ಸ್ಟೊ              ಬಿ ಬುಮ್ರಾ          0

ಮೊಯಿನ್‌ ಅಲಿ               ಸಿ ಸೂರ್ಯ ಬಿ ಜಡೇಜ  0

ಕ್ರಿಸ್‌ ವೋಕ್ಸ್‌      ಸಿ ರಾಹುಲ್‌ ಬಿ ಯಾದವ್‌             18

ಕ್ರೆಗ್‌ ಓವರ್ಟನ್‌               ಬಿ ಯಾದವ್‌      10

ಓಲೀ ರಾಬಿನ್ಸನ್‌              ಔಟಾಗದೆ            10

ಜೇಮ್ಸ್‌ ಆ್ಯಂಡರ್ಸನ್‌    ಸಿ ಪಂತ್‌ ಬಿ ಯಾದವ್‌   2

ಇತರ                    14

ಒಟ್ಟು  (ಆಲೌಟ್‌)                            210

ವಿಕೆಟ್‌ ಪತನ: 1-100, 2-120, 3-141, 4-146, 5-146, 6-147, 7-182, 8-193, 9-202.

ಬೌಲಿಂಗ್‌:

ಉಮೇಶ್‌ ಯಾದವ್‌                       18.2-2-60-3

ಜಸ್‌ಪ್ರೀತ್‌ ಬುಮ್ರಾ                        22-9-27-2

ರವೀಂದ್ರ ಜಡೇಜ                            30-11-50-2

ಮೊಹಮ್ಮದ್‌ ಸಿರಾಜ್‌                    14-0-44-0

ಶಾದೂìಲ್‌ ಠಾಕೂರ್‌                     8-1-22-2

 

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next